UN networks
ಉಳ್ಳಾಲ: ಭೂಸ್ವಾಧೀನ ಪ್ರಕ್ರಿಯೆ ನಡೆಸದೆ , ಭೂಮಾಲೀಕರಿಗೆ ಪರಿಹಾರ ಧನವನ್ನು ನೀಡದೆ ಹರೇಕಳ-ಅಡ್ಯಾರ್ ಸಂಪರ್ಕ ಸೇತುವೆ ಹಾಗೂ ಅಣೆಕಟ್ಟು ನಿರ್ಮಾಣದ ಕಾಮಗಾರಿಯನ್ನು ತಕ್ಷಣಕ್ಕೆ ಸ್ಥಗತಿಗೊಳಿಸಿ, ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಪಾಡುವಂತೆ ರಾಜ್ಯ ಉಚ್ಛ ನ್ಯಾಯಾಲಯ ಆದೇಶ ನೀಡಿದೆ.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿ ಅಡ್ಯಾರ್ -ಹರೇಕಳ ಸಂಪರ್ಕಿಸುವಲ್ಲಿ ನೇತ್ರಾವತಿ ನದಿಗೆ ಪಶ್ಚಿಮವಾಹಿನಿ ಯೋಜನೆಯಲ್ಲಿ ಸೇತುವೆ ಸಹಿತ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಾಣ ೨೧೫.೬೨ ಕೋಟಿ ರೂ. ಅನುದಾನದಲ್ಲಿ ೨೦೨೧ಕ್ಕೆ ಟೆಂಡರ್ ಆಗಿ ೨೦೨೦ಕ್ಕೆ ಕಾಮಗಾರಿ ಆರಂಭಿಸಲಾಗಿತ್ತು. ಸೇತುವೆ ಕಾಮಗಾರಿ ಸಂಪೂರ್ಣ ಮುಗಿದಿದ್ದರೂ, ಎರಡು ಕಡೆಗಳಲ್ಲಿ ಸಂಪರ್ಕಿಸುವ ರಸ್ತೆಗೆ ಜಾಗದ ತಕರಾರು ಇರುವುದರಿಂದ ಉದ್ಘಾಟನೆಗೊಳ್ಳದೆ ಹಾಗೆಯೇ ಉಳಿದಿದೆ. ಈ ನಡುವೆ ಸೇತುವೆ ಬದಿಯ ಭೂಮಾಲೀಕರಾಗಿರುವ ಕಡೆಂಜ ಮೋಹನದಾಸ್ ರೈ ಸೇರಿದಂತೆ ಐದು ಮಂದಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ೨೪೪೧೨/೨೦೨೨ ನಡಿ ದೂರು ದಾಖಲಿಸಿದ್ದರು. ೨೦೨೦ರಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಹಾಯಕ ಅಭಿಯಂತರರು ` ದ ಹಿಂದೂ’ ಪತ್ರಿಕೆಯಲ್ಲಿ ನೀಡಿರುವ ಜಾಹೀರಾತಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಗೊಳ್ಳಲಿರುವ ಪ್ರದೇಶದ ಸುತ್ತಲಿನ ೧೧೦ ಎಕರೆ ಭೂಮಿ ನೀರಿನಿಂದ ಮುಳುಗುವ ಸಂಭವ ಇದೆ. ಈ ಭಾಗದ ಭೂಒತ್ತುವರಿ ಪ್ರಕ್ರಿಯೆ ತಕ್ಷಣದಿಂದ ಆರಂಭವಾಗಲಿದೆ. ಸ್ಥಳೀಯರು ಸಹಕರಿಸುವಂತೆ ಕೋರಿ ಪ್ರಕಟಣೆ ನೀಡಲಾಗಿತ್ತು. ಆದರೆ ಸೇತುವೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಮುಳುಗಡೆಯಾಗಲಿರುವ ಪ್ರದೇಶದ ಭೂಒತ್ತುವರಿಯಾಗಲಿ, ಭೂಮಾಲೀಕರಿಗೆ ನೋಟೀಸನ್ನು ನೀಡುವುದಾಗಲಿ, ಮಾಹಿತಿಯನ್ನು ನೀಡದೆ ಕಾಮಗಾರಿಯನ್ನು ಮುಂದುವರಿಸಲಾಗುತ್ತಿದೆ. ಈ ಬಗ್ಗೆ ಎರಡು ವರ್ಷಗಳ ಹಿಂದೆಯೇ ಹರೀಶ್ ಶೆಟ್ಟಿ ಎಂಬವರು ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿಯನ್ನು ಕೇಳಿದ್ದರೂ ಈವರೆಗೆ ಮಾಹಿತಿಗಳನ್ನು ನೀಡಲಾಗಿಲ್ಲ. ಮೂರು ತಿಂಗಳ ಹಿಂದೆ ಕಡೆಂಜ ಮೋಹನದಾಸ್ ರೈ ಅವರು ಮಾಹಿತಿಯನ್ನು ಕೇಳಿದ್ದರೂ ಈವರೆಗೂ ಮಾಹಿತಿಗಳು ದೊರಕಿಲ್ಲ. ಇವೆಲ್ಲದರ ನಡುವೆ ಏಕಾಏಕಿ ಸರ್ವೆ ಕಲ್ಲುಗಳನ್ನು ಹಾಕುವ ಕೆಲಸವಾಗಿದೆ. ಈ ಕುರಿತು ರಾಜ್ಯ ಉಚ್ಛನ್ಯಾಯಾಲಯದಲ್ಲಿ ಹೂಡಿರುವ ದಾವೆಗೆ ಆದೇಶ ಹೊರಡಿಸಿರುವ ಮಾನ್ಯ ನ್ಯಾಯಧೀಶರು , ಡಿ.೧೬ ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ಯಾವುದೇ ಕಾಮಗಾರಿಗಳನ್ನು ನಡೆಸದೆ ಯಥಾಸ್ಥಿತಿಯನ್ನು ಕಾಪಾಡುವಂತೆ ಆದೇಶ ಹೊರಡಿಸಿದೆ.


