UN networks
ಮಂಗಳೂರು: 20 ವರ್ಷ ಬಾಳ್ವೆಯ 15 ಟ್ಯಾಪಿಂಗ್ ಮರಗಳು ತನ್ನ ಅಡಿಕೆ ತೋಟಕ್ಕೆ ಬಗ್ಗಿದೆ ಅನ್ನುವ ನೆಪವನ್ನಿಟ್ಟುಕೊಂಡು ತನ್ನ ಸಹೋದರನಿಗೆ ಸೇರಿದ ರಬ್ಬರ್ ತೋಟದ ಮರಗಳನ್ನು ಅರ್ಧದಷ್ಟು ಕಡಿದ ಪರಿಣಾಮ ಉತ್ತಮ ಫಸಲು ನೀಡುತ್ತಿದ್ದ ಮರಗಳು ಸಾಯುವ ಹಂತಕ್ಕೆ ತಲುಪಿಸುವ ಮೂಲಕ ಬಿಜೆಪಿ ಮುಖಂಡನೋರ್ವ ಮರಗಳ ಸಾಮೂಹಿಕ ಮಾರಣಹೋಮಕ್ಕೆ ಕಾರಣವಾದ ಘಟನೆ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕಟ್ಟತ್ತಿಲಕೋಡಿ ಎಂಬಲ್ಲಿ ನಡೆದಿದೆ. ಈ ಕುರಿತು ಶೋಷಣೆಗೊಳಗಾದ ಸಹೋದರ ಜಾಗದ ದೈವದ ಮೊರೆ ಹೋಗಿದ್ದಾರೆ.


ರಬ್ಬರ್ ಮರಗಳಿಗೆ ಹೊಂದಿಕೊಂಡಿರುವ 30 ಸೆಂಟ್ಸ್ ಭೂಮಿಯಲ್ಲಿ ಸ್ಥಳಿಯ ಬಿಜೆಪಿ ಮುಖಂಡನೋರ್ವ ಸುಮಾರು 12 ವರ್ಷದ ಹಿಂದೆ ಅಡಿಕೆ ತೋಟ ಇಟ್ಟಿರುವುದು, ರಬ್ಬರ್ ಮರಕ್ಕಿಂತಲೂ ಎತ್ತರಕ್ಕೆ ಅಡಿಕೆ ಮರಗಳು ಬೆಳೆದು ನಿಂತಿತ್ತು. ಇದರಲ್ಲಿ 20 ಅಡಿ ಅಗಲದ ಪಂಚಾಯತ್ ರಸ್ತೆಯ ಅರ್ಧ ಭಾಗವೂ ಈತನ ಅಡಿಕೆ ತೋಟದಲ್ಲಿದೆ. ಅದರಲ್ಲಿ ಬೆಳೆದಿದ್ದ ಕಾಡುಮರಗಳ ಗೆಲ್ಲುಗಳನ್ನೂ ಸವರದೇ ಕೇವಲ ಫಸಲು ಬರುವ ರಬ್ಬರ್ ಮರಗಳನ್ನು ಕಡಿದು ದೌರ್ಜನ್ಯ ಎಸಗಿದ್ದಾನೆ. ತನ್ನ ದೊಡ್ಡಪ್ಪನ ಮಗನಿಗೆ ಸೇರಿದ ರಬ್ಬರ್ ತೋಟಕ್ಕೆ ಹಾನಿಯೆಸಗಿರುವ ಮುಖಂಡನ ಕೃತ್ಯದಿಂದಾಗಿ ಮರಗಳು ಸಾಯುವ ಹಂತಕ್ಕೆ ತಲುಪಿದೆ. 15 ಮರಗಳಿಂದ ಪ್ರತಿ ಟ್ಯಾಪಿಂಗ್ ನಲ್ಲಿ ಸುಮಾರು 10 ಶೀಟುಗಳು ಬರುತ್ತಿದ್ದು, ಇನ್ನು 30 ವರ್ಷಗಳ ಕಾಲ ಟ್ಯಾಪಿಂಗ್ ಮಾಡಬಹುದಾಗಿತ್ತು. ಆದರೆ ಅರ್ಧದಿಂದ ಕಡಿದ ಮರಗಳು ಬದುಕುವುದೇ ಕಷ್ಟ ಎಂದು ರಬ್ಬರ್ ತೋಟದ ಕೆಲಸಗಾರರು ಬೇಸರ ವ್ಯಕ್ತಪಡಿಸಿದ್ದಾರೆ. ತನ್ನ ಸ್ವಂತ ದೊಡ್ಡಪ್ಪನ ಮಗನ ತೋಟದ ಮರಗಳನ್ನೇ ಕತ್ತರಿಸಿದ ಹಿನ್ನೆಲೆಯಲ್ಲಿ ಬೇಸರ ವ್ಯಕ್ತಪಡಿಸಿ , ಜಾಗದ ದೈವದ ಮೊರೆ ಹೋಗಿದ್ದಾರೆ.


