UN networks
ಕೊಲ್ಯ: ಶೋಷಿತ ಕೆಳವರ್ಗವಾದ ಹಿಂದುಳಿದ ವರ್ಗಗಳಿಗೆ ಈಗಲೂ ಕಷ್ಟದ ದಿನಗಳಿವೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣದ ಜೊತೆಗೆ ಶಿಕ್ಷಣ ಕ್ರಾಂತಿಯಾಗುವ ಮೂಲಕ ಯುವಕರು ಉದ್ಯೋಗಿಗಳಾಗಬೇಕು. ಇದರಿಂದ ಮನೆಗಳು ಗಟ್ಟಿಯಾದಾಗ ಸಮಾಜ ಬಲಿಷ್ಠವಾಗುವುದು ಎಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಧ್ಯಕ್ಷ ಪಿತಾಂಬರ ಹೇರಾಜೆ ಅಭಿಪ್ರಾಯಪಟ್ಟರು.
ಸೋಮೇಶ್ವರ ಕೊಲ್ಯ ಬ್ರಹ್ಮಶ್ರೀ ನಾರಾಯಣಗುರು ಧ್ಯಾನ ಮಂದಿರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುವರ್ಯರ 168 ನೇ ಜನ್ಮ ದಿನಾಚರಣೆಯ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಬ್ರಹ್ಮಶ್ರೀ ನಾರಾಯಣ ಗುರುಗಳು ಎಸ್ ಎನ್ ಡಿಪಿಯನ್ನು ಸ್ಥಾಪಿಸಿ ಅದರ ಮೂಲಕ ಕೇರಳದಲ್ಲಿ ಸ್ಥಾಪಿಸಿರುವ ಶಿಕ್ಷಣ ಸಂಸ್ಥೆ ಇಡೀ ಕೇರಳಕ್ಕೆ ಸಾಕ್ಷರತೆಯನ್ನು ಒದಗಿಸಿತು. ಇಂತಹ ನಡೆಗಳಿಂದ ಬ್ರಹ್ಮಶ್ರೀಗಳ ಆರಾಧನೆ ಪ್ರಪಂಚದಾದ್ಯಂತ ನಡೆಯುತ್ತಿದೆ. ಕೆಲವರಿಗೆ ಗುರುಗಳು ಇರುವುದಿಲ್ಲ, ಗುರಿಯೂ ಇರದೇ ತಪ್ಪಾಗಿ ಮಾತನಾಡುವವರೇ ಜಾಸ್ತಿ. ಗುರುಗಳ ನಿದರ್ಶನದಲ್ಲಿ ಬಾಳಿದವರು ಸಂಘರ್ಷದಿಂದ ಹೋಗದೇ ಸಾಮರಸ್ಯದಿಂದ ಬಾಳಿದವರು. ಬ್ರಹ್ಮಶ್ರೀಗಳ ಕಾರ್ಯಕ್ರಮವನ್ನು ಟಿಎಂಎ ಪೈ ನಲ್ಲಿ ಆಯೋಜಿಸಿರುವ ಸಂಘಟಕರ ನಿರ್ಧಾರ ಸರಿಯಲ್ಲ. ಬ್ರಹ್ಮಶ್ರೀಗಳ ಯಾವುದೇ ಕಾರ್ಯಕ್ರಮಗಳನ್ನು ನಡೆಸಬೇಕಾದರೂ, ಹಿರಿಯರ ಜತೆಗೆ ಚಿಂತನೆ ನಡೆಸಿ ಎಲ್ಲರ ಅಭಿಪ್ರಾಯದ ಮೇರೆಗೆ ಸಂಘಟಿಸುವುದು ಉತ್ತಮ ಎಂದರು.
ಗುರುಸಂದೇಶ ನೀಡಿದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನಪೀಠದ ಸಂಯೋಜಕ ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ, ನಾಲಗೆಗೆ ಬಿದ್ದ ಶಿಕ್ಷಣದಿಂದ ಆತನ ರಕ್ಷಣೆಯ ಹಾದಿ ಸುಗಮವಾಗಿರುತ್ತದೆ. ಪ್ರತಿ ಹಬ್ಬಗಳ ಆಚರಣೆಯ ಮುನ್ನ ಹಬ್ಬದ ಸಂದೇಶವನ್ನು ಅರಿಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಜಯಚಂದ್ರ ಕೆ.ಎ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಲ್ಲಾಳ್ ಬಾಗ್ , ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ, ಕೊಲ್ಯ ಬಿಲ್ಲವ ಸೇವಾ ಸಮಾಜ ಟ್ರಸ್ಟ್ ನ ಗೌರವಾಧ್ಯಕ್ಷ ಗೋಪಾಲಕೃಷ್ಣ ಸೋಮೇಶ್ವರ, ಕೊಲ್ಯ ಬಿಲವ ಸೇವಾ ಸಮಾಜದ ಅಧ್ಯಕ್ಷ ಜಯರಾಮ ಪಿಲಿಕೂರು, ಕೊಲ್ಯ ನಾರಾಯಣ ಗುರು ಮಹಿಳಾ ಮಂಡಳಿ ಅಧ್ಯಕ್ಷ ಕುಸುಮ ಭರತ್ ಕುಂಪಲ, ಯುವವಾಹಿನಿ ಕೊಲ್ಯ ಘಟಕದ ಅಧ್ಯಕ್ಷ ಸುಂದರ್ ಸುವರ್ಣ ಉಪಸ್ಥಿತರಿದ್ದರು.
ಗೋಪಾಲ ಕೊಂಡಾಣ ನೇತೃತ್ವದಲ್ಲಿ ಧ್ಯಾನ ಮಂದಿರದಲ್ಲಿ ಪೂಜೆ ನೆರವೇರಿತು. ಈ ಸಂದರ್ಭ ನಿವೃತ್ತ ವಿಜಯ ಬ್ಯಾಂಕ್ ಉದ್ಯೋಗಿ ನಾರಾಯಣ ಶೆಟ್ಟಿ ಸಂಕೊಳಿಗೆ ಹಾಗೂ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಗಳ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಸನ್ಮಾನಿಸಲಾಯಿತು. ಉಳ್ಳಾಲ ನಗರಸಭೆಗೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಗೊಂಡ ಭಗವಾನ್ ದಾಸ್ ತೊಕ್ಕೊಟ್ಟು ಅವರನ್ನು ಅಭಿನಂದಿಸಲಾಯಿತು.
ಬಿಲ್ಲವ ಸೇವಾ ಸಮಾಜ ಟ್ರಸ್ಟ್ ಅಧ್ಯಕ್ಷ ವೇಣುಗೋಪಾಲ್ ಕೊಲ್ಯ ಸ್ವಾಗತಿಸಿದರು. ಲತೀಶ್ ಮತ್ತು ಜೀವನ್ ಕೊಲ್ಯ ನಿರೂಪಿಸಿದರು. ಆನಂದ ಮಲಯಾಳಕೋಡಿ ವಂದಿಸಿದರು
ಈ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು , ಬಿಲ್ಲವ ಸಮಾಜದ ವಿಜೇತ ಸದಸ್ಯರುಗಳಿಗೆ ಬಹುಮಾನ ವಿತರಿಸಲಾಯಿತು.
ಈ ವೇಳೆ ನಾರಾಯಣ ಗುರು ಯಕ್ಷಗಾನ ಮಂಡಳಿ ಕೊಲ್ಯ ಇವರ ವತಿಯಿಂದ ʻಗುರುದಕ್ಷಿಣʼ ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಂಡಿತು. ನಾರಾಯಣ ಗುರು ಕುಣಿತ ಭಜನಾ ತಂಡದಿಂದ ಕುಣಿತ ಭಜನಾ ಕಾರ್ಯಕ್ರಮವೂ ಜರಗಿತು.




