UN NEWS NETWORKS
ಉಳ್ಲಾಲ: ಚುನಾವಣೆ ಸಂದರ್ಭ ವಿವಿಧ ಸುಳ್ಳು ಘೋಷಣೆಗಳನ್ನು ಎಲ್ಲರೂ ಮಾಡುತ್ತಾರೆ, ಕಳೆದ ಬಾರಿ ಸಿದ್ಧರಾಮಯ್ಯ ತಾಳಿಭಾಗ್ಯವನ್ನು ಘೋಷಣೆ ಮಾಡಿದ್ದರು. ಗಂಡ ಮಾಡುವ ಕೆಲಸವನ್ನು ಸಿದ್ಧರಾಮಯ್ಯ ಮಾಡಿದರೆ ಇನ್ನು ಗಂಡ ಯಾಕೆ?. ಮುಂದಕ್ಕೆ ಮಂಚ ಭಾಗ್ಯವನ್ನೂ ಕೊಡುವ ಘೋಷಣೆ ಮಾಡುತ್ತಿದ್ದರು ಏನೋ? ಎಲ್ಲವನ್ನೂ ಸರಕಾರ ಕೊಟ್ಟರೆ ಮತ್ತೆ ಜನ ಯಾಕೆ ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಲೇವಡಿ ಮಾಡಿದ್ದಾರೆ.



ಅವರು ಶನಿವಾರ ರಾಜಾರಾಂ ಭಟ್ ಅವರ ನೆರವಿನ ಆಸರೆ ಯೋಜನೆಯಡಿಯಲ್ಲಿ ಬಾಳೆಪುಣಿಯ ಕುಕ್ಕುದಕಟ್ಟೆ ಸೈಟ್ ನಲ್ಲಿ ದಿ.ಶರಣಪ್ಪ ಅವರ ಕುಟುಂಬಕ್ಕೆ ನಿರ್ಮಿಸಿದ ಎರಡನೇ ಮನೆಯ ಕೀ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಧರ್ಮ ಪ್ರಜ್ಞೆಯ ಮೂಲಕ ನಮ್ಮ ಸಮಾಜ ಬೆಳೆಯಬೇಕಿದೆ. ಬಡವರಿಗೆ ಮನೆ ನಿರ್ಮಾಣದ ಕಾರ್ಯ ಪುಣ್ಯದ ಕಾರ್ಯವಾಗಿದೆ. ರಾಜಾರಾಂ ಭಟ್ ಅವರು ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದೆ ಬಡವರಿಗೆ ಮನೆ ನಿರ್ಮಾಣದ ಪುಣ್ಯದ ಕಾರ್ಯದಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ. ಇಂತಹ ಪವಿತ್ರವಾದ ಕಾರ್ಯ ಸಮಾಜಕ್ಕೆ ಮಾದರಿ ಹಾಗೂ ಪ್ರೇರಣೆಯಾಗಿದೆ . ಒಂದಲ್ಲ ಒಂದು ರೀತಿಯಲ್ಲಿ ಸೇವೆಯ ರೂಪದಲ್ಲಿ ಎಲ್ಲರೂ ತೊಡಗಿಸಿಕೊಂಡರೆ ಬಡವರಿಗೆ ಮನೆ ನಿರ್ಮಾಣದಂತಹ ಅದ್ಭುತ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಇನ್ನೊಬ್ಬರಿಗೆ ಅನ್ಯಾಯ ಮಾಡದ, ಮೋಸ ಮಾಡದ ಜನ ಎಂದರೆ ಹಿಂದೂಗಳು. ಇದು ನಮ್ಮ ಧರ್ಮ ಪ್ರಜ್ಞೆ. ಆದರೆ ಇಂದು ಇಂತಹ ಪ್ರಜ್ಞೆ ಮರೀಚಿಕೆಯಾಗುತ್ತಿದೆ. ಒಳ್ಳೆಯ ಕೆಲಸಕ್ಕೆ , ಬಡವರ, ದುರ್ಬಲರ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಿ ಈ ಸೇವೆಯ ಸರಪಳಿ ಮುಂದೆ ಸಾಗಬೇಕಿದೆ ಎಂದು ಹೇಳಿದರು.
ದಿ ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಇದರ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಅವರು ಮಾತನಾಡಿ, ರಾಜಾರಾಂ ಭಟ್ ಅವರು ಸಮಾಜಸೇವೆಯ ಮೂಲಕ ಯಾವುದೇ ಪ್ರಚಾರವಿಲ್ಲದೆ ಬಡವರ ಸೇವೆ ಸಲ್ಲಿಸುತ್ತಿರುವುದು ಪುಣ್ಯದ ಕೆಲಸ ಎಂದರು.
ಸಮಾಜಸೇವಕ ರಾಜಾರಾಂ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಬಾಗಲಕೋಟೆಯಿಂದ ಇಲ್ಲಿ ಕೆಲಸ ಹುಡುಕಿಕೊಂಡು ಬಂದು ಇಲ್ಲಿ ನೆಲೆನಿಂತು ಕಳೆದ 30 ವರ್ಷಗಳಿಂದ ಈ ಕುಟುಂಬ ಗುಡಿಸಲಿನಲ್ಲಿ ವಾಸವಾಗಿದ್ದರು. ಈ ಮನೆ ದಾನಿಗಳ ಮೂಲಕ ನಿರ್ಮಾಣಗೊಂಡಿದ್ದು,ಉಳಿದೆಲ್ಲ ಶ್ರಮದಾನದ ಮೂಲಕವೇ ನಡೆದಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಕಾರಿ ಹಾಗೂ ಧಾರ್ಮಿಕ ಮುಂದಾಳು ಮಹೇಶ್ ಚೌಟ , ಅಮ್ಮೆಂಬಳ ಸಹಕಾರಿ ಸಂಘದ ಜಯರಾಮ ಶೆಟ್ಟಿ ಕಂಬಳಪದವು ಹಾಗೂ ಮನೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳು, ಶ್ರಮದಾನ ಗೈದ ಯುವಕರು ಉಪಸ್ಥಿತರಿದ್ದರು.


