UN network
ಉಳ್ಳಾಲ : ಕಾರಿನ ನಂಬರ್ ಪ್ಲೇಟ್ ನಲ್ಲಿ ಅಂಟಿಸಿರುವ ಸ್ಟಿಕ್ಕರ್ ಕಂಡು ಸಂಚಾರಿ ಠಾಣೆ ಪೊಲೀಸ್ ಸಿಬ್ಬಂದಿ ವಾಹನವನ್ನು ತಡೆದು ನಿಲ್ಲಿಸಿದ ಘಟನೆ ತೊಕ್ಕೊಟ್ಟು ಬಳಿ ನಡೆದಿದ್ದು, ನಂಬರ್ ಪ್ಲೇಟಿನಲ್ಲಿ ‘ ಟೀಂ ಪರಶುರಾಮ ಹಾಗೂ ಧರ್ಮೋ ರಕ್ಷತಿ ರಕ್ಷಿತಾ: ಅನ್ನುವ ಸ್ಟಿಕ್ಕರ್ ಹಾಗೂ ಗಾಜಿನಲ್ಲಿ ಅಳವಡಿಸಿದ ಓಂಸಾಯಿ ಮತ್ತು ಸ್ವಾಮಿ ಕೊರಗಜ್ಜ ಸ್ಟಿಕ್ಕರ್ ಇರುವುದನ್ನು ತೆಗೆಯಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ಎಎಸ್ಐ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತೊಕ್ಕೊಟ್ಟು ಫ್ಲೈಓವರ್ ಕೆಳಗಡೆ ಕೆಲಕಾಲ ಗೊಂದಲದ ವಾತಾವರಣ ಇಂದು ನಿರ್ಮಾಣವಾಯಿತು.

ಬಬೀಶ್ ಪೂಜಾರಿ ಎಂಬವರು ಮಾರುತಿ ಕಾರಿನಲ್ಲಿ ತೊಕ್ಕೊಟ್ಟು ಫ್ಲೈಓವರ್ ಕೆಳಗಿನಿಂದ ಹೋಗುತ್ತಿದ್ದ ಸಂದರ್ಭ ತೊಕ್ಕೊಟ್ಟಿನಲ್ಲಿ ಫ್ಲೈ ಓವರ್ ಕೆಳಗಡೆ ಕರ್ತವ್ಯದಲ್ಲಿದ್ದ ನಾಗುರಿ ಸಂಚಾರಿ ಠಾಣಾ ಎಎಸ್ಸೈ ಆಲ್ಬರ್ಟ್ ಲಸ್ರಾದೊ ಅವರು ಪರಿಶೀಲನೆಗಾಗಿ ನಿಲ್ಲಿಸಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿ ನಂತರ ಕಾರಿನ ನಂಬರ್ ಪ್ಲೇಟಿನಲ್ಲಿ ಸ್ಟಿಕ್ಕರ್ ಅಂಟಿಸಿರುವುದು ಕಾನೂನು ವಿರುದ್ಧವಾಗಿದೆ. ಹಾಗೂ ಕಾರಿನ ಗಾಜಿನಲ್ಲಿಯೂ ಸ್ಟಿಕ್ಕರ್ ಅಂಟಿಸಲಾಗಿದೆ. ಅದಕ್ಕಾಗಿ ದಂಡ ಪಾವತಿಸಬೇಕು ಎಂದು ಹೇಳಿದ್ದಾರೆ. ಆದರೆ ಕಾರಿನಲ್ಲಿರುವುದು ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ಸ್ಟಿಕ್ಕರ್ , ಇದನ್ನು ತೆಗೆಯುವುದಿಲ್ಲ ಎಂದು ಕಾರು ಚಾಲಕ ಬಬೀಶ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಹಿಂದೂ ಕಾರ್ಯಕರ್ತರು ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಎಎಸ್ ಐ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಎಎಸ್ ಐ ವಿರುದ್ಧ ಕ್ರಮಕೈಗೊಳ್ಳಿ : ಅರ್ಜುನ್ ಮಾಡೂರು
ಹಿಂದೂಗಳ ಆರಾಧನೆಗೆ ಸಂಬಂಧಿಸಿದ ಸ್ಟಿಕರನ್ನು ಕಾರಿನಲ್ಲಿ ಅಳವಡಿಸಲಾಗಿದೆ. ಇದನ್ನು ಮತೀಯ ಆಧಾರದಲ್ಲಿ ಎಎಸ್ಐ ನೋಡಿ, ತೆಗೆಯಲು ಒತ್ತಾಯಿಸಿದ್ದಾರೆ. ಇಂತಹ ಹಿಂದೂ ಧರ್ಮಕ್ಕೆ ವಿರೋಧಿಸುವ ಎಎಸ್ ಐ ಕರ್ತವ್ಯದಲ್ಲಿರಬಾರದು. ಹಿರಿಯ ಅಧಿಕಾರಿಗಳಿಗೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತೇವೆ. ಸ್ಥಳಕ್ಕೆ ಬಂದು ಕೇಳಿದಾಗಲೂ ಎಎಸ್ ಐ ಉಡಾಫೆಯಿಂದ ವರ್ತಿಸುತ್ತಾರೆ ಎಂದು ವಿಶ್ವ ಹಿಂದೂ ಪರಿಷತ್ ನ ಅರ್ಜುನ್ ಮಾಡೂರು ಆರೋಪಿಸಿದ್ದಾರೆ.
ರೂ.೫೦೦ ದಂಡ ಕಟ್ಟುವಂತೆ ಹೇಳಿದರು : ಕಾರು ಚಾಲಕ ಬಬಿತ್ ಪೂಜಾರಿ
ಕೊರಗಜ್ಜನ ಸ್ಟಿಕರ್ ಇರುವುದಕ್ಕೆ ಕೇಸು ಹಾಕುತ್ತೇನೆ ಅನ್ನುತ್ತಿದ್ದಾರೆ. ನಂಬರ್ ಪ್ಲೇಟ್ ಐಎನ್ ಡಿ ಹಾಕಬೇಕೆಂದು ಒತ್ತಾಯಿಸಿದ್ದಾರೆ ನ್ಯಾಯಾಲಯಕ್ಕೆ ಹಾಕುತ್ತೇನೆ ಇಲ್ಲವಾದಲ್ಲಿ ರೂ.೫೦೦ ದಂಡ ಪಾವತಿಸುವಂತೆ ಗದರಿಸಿದರು. ಕಾರಿನ ಗಾಜಿನಲ್ಲಿ ಓಂ ಸಾಯಿ ಹಾಗೂ ಕೊರಗಜ್ಜನ ಸ್ಟಿಕ್ಕರ್ ಹಾಗೂ ನಂಬರ್ ಪ್ಲೇಟಿನಲ್ಲಿ ಟೀಂ ಪರಶುರಾಮ ಹಾಗೂ ಧರ್ಮೋ ರಕ್ಷತಿ ರಕ್ಷಿತಾ: ಅನ್ನುವ ಸ್ಟಿಕ್ಕರನ್ನು ತೆಗೆಯುವಂತೆ ಹೇಳಿದ್ದಾರೆ. ಅದಕ್ಕಾಗಿ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಹಾಗೂ ಬಿಜೆಪಿ ಅಧ್ಯಕ್ಷರಿಗೆ ವಿಚಾರ ತಿಳಿಸಿದ್ದೇವೆ. ದೇವರ ಸ್ಟಿಕರ್ ಹಾಕಬಾರದೆಂಬ ಕಾನೂನು ಯಾವಾಗ ಆರಂಭವಾಗಿದೆ ಅನ್ನುವುದು ತಿಳಿದಿಲ್ಲ.
ಕ್ರಮಕ್ಕೆ ಆಗ್ರಹ : ಚಂದ್ರಹಾಸ್ ಪಂಡಿತ್ ಹೌಸ್
ಬಜರಂಗದಳದ ಉಳ್ಳಾಲದ ಸಂಚಾಲಕರು ದೂರವಾಣಿ ಮುಖೇನ ಎಎಸ್ಐ ದೇವರ ಸ್ಟಿಕ್ಕರ್ ವಿರುದ್ಧ ಕ್ರಮಕೈಗೊಳ್ಳುವ ಕುರಿತು ತಿಳಿಸಿದರು. ಅವರಿಗೆ ದೂರವಾಣಿ ಕರೆ ನೀಡುವಂತೆ ತಿಳಿಸಿದಾಗ ಎಎಸ್ಐ ಹಾರಿಕೆ ಉತ್ತರವನ್ನು ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ತಕ್ಷಣ ಸ್ಥಳಕ್ಕಾಗಮಿಸಿದಾಗ ನೀವ್ಯಾರು ಎಂದು ಗದರಿಸಲು ಆರಂಭಿಸಿದರು. ಇಂತಹ ದುರ್ವರ್ತನೆಯ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದರು.


