
ಮಂಗಳೂರು: ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯವು ಜೀವ ವೈದ್ಯಕೀಯ ವಿಜ್ಞಾನ ಮತ್ತು ಮಾಧ್ಯಮ ಹಾಗೂ ಸಂವಹನ ವಿಷಯಗಳಲ್ಲಿ ನಾಲ್ಕು ವರ್ಷಗಳ ಹೊಸ ಬ್ಯಾಚುಲರ್ ಕೋರ್ಸುಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ. ಈ ಹೊಸ ಕೋರ್ಸುಗಳು ವಿದ್ಯಾರ್ಥಿಗಳು ಮತ್ತು ಉದ್ಯೋಗ ಆಧಾರಿತ ಮತ್ತು 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ರೂಪಿಸಲಾದ ಶಿಕ್ಷಣದ ತತ್ವಗಳನ್ನು ಒಳಗೊಂಡಿವೆ ಎಂದು ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಸತೀಶ್ ಕುಮಾರ್ ಭಂಡಾರಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಾಲ್ಕು ವರ್ಷಗಳ ಬಿ.ಎಸ್ಸಿ (ಆನರ್ಸ್) ಮತ್ತು ಬಿ.ಎ (ಆನರ್ಸ್) ಕೋರ್ಸುಗಳು ಅಂತರ ರಾಷ್ಟ್ರೀಯ ಕೋರ್ಸುಗಳಿಗೆ ಅನುಗುಣವಾಗಿದ್ದು, ಹೆಚ್ಚು ಜಾಗತಿಕ ಮನ್ನಣೆಯನ್ನು ಹೊಂದಿರುತ್ತವೆ. ಈ ಕೋರ್ಸುಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರವೇಶ ಮತ್ತು ನಿರ್ಗಮನದ ಆಯ್ಕೆಗಳು ಸಿಗಲಿದ್ದು, ಶಿಕ್ಷಣಕ್ಕೆ ಹೆಚ್ಚಿನ ಗೌರವ ಮತ್ತು ಮನ್ನಣೆ ಗಳಿಸಬಹುದಾಗಿದೆ. ಉದಾಹರಣೆಗೆ, ವಿದ್ಯಾರ್ಥಿಗಳು ಮೂರು ವರ್ಷಗಳಲ್ಲಿ ತಮ್ಮಬಿ.ಎಸ್ಸಿ ಅಥವಾ ಬಿ.ಎ ಪದವಿಯೊಂದಿಗೆ ಕೋರ್ಸು ಮುಗಿಸಿ ತೆರಳಬಹುದು ಅಥವಾ ಮುಂದುವರಿಸಿ ನಾಲ್ಕನೇ ವರ್ಷ ಪೂರ್ಣಗೊಳಿಸಿ ಆನರ್ಸ್ ಪದವಿಯೊಂದಿಗೆ ಕೋರ್ಸನ್ನು ಮುಗಿಸಬಹುದು. ಹೆಚ್ಚುವರಿ ವರ್ಷದ ತರಬೇತಿಯು ಇಂಟರ್ನ್ ಶಿಪ್ ನೊಂದಿಗೆ ಸಂಶೋಧನೆ ಮತ್ತು ಉದ್ಯೋಗ ಕೌಶಲಗಳ ಅಭಿವೃದ್ಧಿಗೆ ಒತ್ತು ನೀಡುತ್ತದೆ. ಈ ಕೋರ್ಸುಗಳು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೂಚಿಸಿರುವಂತೆ ಪಾರ್ಶ್ವ ಪ್ರವೇಶ (ಲ್ಯಾಟರಲ್ ಎಂಟ್ರಿ) ಮತ್ತು ನಿರ್ಗಮನ ಆಯ್ಕೆಗಳನ್ನು ಹೊಂದಿರುತ್ತವೆ. ಎರಡೂ ಕೋರ್ಸುಗಳು ಆಯ್ಕೆ ಆಧಾರಿತ ಅಂಕ ಪದ್ಧತಿ (Choice Based Credit System) ಅನ್ನು ಆಧರಿಸಿದ್ದು, ಇದು ವಿದ್ಯಾರ್ಥಿಗಳಿಗೆ ಆಯ್ದ ವಿಷಯಗಳ ಮೂಲಕ ಅವರ ಆಸಕ್ತಿಗಳನ್ನು ಮುಂದುವರಿಸಲು ಸಹಕರಿಸುತ್ತದೆ ಎಂದು ಮಾಹಿತಿ ನೀಡಿದರು.
ಜೀವ ವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ (ಆನರ್ಸ್) ಕೋರ್ಸಿನಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಬಯಸುವ ಮತ್ತು ವಿದ್ಯಾಭ್ಯಾಸವನ್ನು ಮುಂದುವರಿಸ ಬಯಸುವ ವಿದ್ಯಾರ್ಥಿಗಳಿಗೆ ಸಮಕಾಲೀನ ಪ್ರಯೋಗಾಲಯ ತಂತ್ರಜ್ಞಾನಗಳ ಕೌಶಲಯುತ ತರಬೇತಿಯನ್ನು ನೀಡಲಾಗುತ್ತದೆ. ಈ ಕೋರ್ಸನ್ನು ನಡೆಸಲು ಅನುವಾಗಿರುವ ನಿಟ್ಟೆ ವಿಶ್ವವಿದ್ಯಾನಿಲಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (NUCSER) ಯು ಅತ್ಯಾಧುನಿಕ ಸಂಶೋಧನಾ ಸೌಲಭ್ಯಗಳನ್ನು ಹೊಂದಿದ್ದು, ವಿದ್ಯಾರ್ಥಿಗಳಿಗೆ ಅನ್ವಯಿಕ ಸಂಶೋಧನೆ ಮತ್ತು ಆಸ್ಪತ್ರೆಗೆ ಸಂಬಂಧಿಸಿದ ತರಬೇತಿಗೆ ಉತ್ತಮ ಅವಕಾಶಗಳನ್ನು ಹೊಂದಿರುವ ಜಸ್ಟಿಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಜೊತೆಗಿನ ತನ್ನ ಒಡನಾಟದಿಂದಾಗಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದರು.
ಮಾಧ್ಯಮ ಮತ್ತು ಸಂವಹನ ವಿಷಯದಲ್ಲಿ ಬಿ.ಎ (ಆನರ್ಸ್) ಪದವಿಯು ಆಧುನಿಕ ಮಾಧ್ಯಮ ಮತ್ತು ಸಾಂಸ್ಥಿಕ ಸಂವಹನದ ಸಮಕಾಲೀನ ಪಠ್ಯಕ್ರಮವನ್ನು ಹೊಂದಿದೆ. ಇದು ಕಲೆ ಮತ್ತು ಸಂಸ್ಕೃತಿ ಸಂವಹನ, ಸಾಮಾಜಿಕ ಮಾಧ್ಯಮ ಮಾರುಕಟ್ಟೆ, ದತ್ತಾಂಶ ಪತ್ರಿಕೋದ್ಯಮ, ಶಾಂತಿ ಪತ್ರಿಕೋದ್ಯಮ ಹಾಗೂ ಮಾಧ್ಯಮ ಹಿಸ್ಟ್ರಿಯಾನಿಕ್ಸ್ (ನಟನೆ) ಮಾದರಿಯ ಉದಯೋನ್ಮುಖ ಕೋರ್ಸುಗಳನ್ನು ಒಳಗೊಂಡಿದೆ. ಉದ್ಯಮಗಳಿಗೆ ಸಂಬಂಧಿಸಿದ ಉದ್ಯೋಗ ಕೌಶಲಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಈ ಕೋರ್ಸುಗಳು ಸಹಾಯಕವಾಗಲಿವೆ ಎಂದು ಡಾ. ಭಂಡಾರಿ ಅವರು ತಿಳಿಸಿದರು.

