
ಉಳ್ಳಾಲ: ವೈಯಕ್ತಿಕ ಸುಖ ದು:ಖಗಳನ್ನು ಬದಿಗೊತ್ತಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಗೃಹರಕ್ಷಕರ ಪಾತ್ರ ಬಹಳ ದೊಡ್ಡದು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಜೊತೆ ಗೃಹರಕ್ಷಕರು ನಿರಂತರ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ತ್ಯಾಗದ ಸೇವೆಯನ್ನು ಗುರುತಿಸಿ ರೇಷನ್ ಕಿಟ್ ನೀಡಿದ ಕಾರಣದಿಂದ ಗೃಹರಕ್ಷಕರು ಮತ್ತಷ್ಟು ಹುರುಪಿನಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀಮೋಹನ್ ಚೂಂತಾರು ಹೇಳಿದರು.
ಅವರು ಜಿಲ್ಲಾ ಗೃಹರಕ್ಷಕ ದಳದ ಉಳ್ಳಾಲ ಘಟಕಕ್ಕೆ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಚಾರಿಟೇಬಲ್ ಟ್ರಸ್ಟ್ ಇದರ ಸಿಎಸ್ ಆರ್ ವತಿಯಿಂದ ಕಲ್ಲಾಪು ಆಡಂಕುದ್ರು ಸಂತ ಜೋಸೆಫರ ಅನುದಾನಿತ ಶಾಲೆಯಲ್ಲಿ ಸೋಮವಾರದಂದು ನೀಡಲಾದ ಉಚಿತ ರೇಷನ್ ಕಿಟ್ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಇದರ ಮಂಗಳೂರು ಘಟಕದ ಮಾರುಕಟ್ಟೆ ಪ್ರಬಂಧಕ ಫರ್ತಾನ್ ಮಾತನಾಡಿ , 45 ಮಂದಿ ಗೃಹರಕ್ಷಕರಿಗೆ ಆಹಾರ ಕಿಟ್ ಅನ್ನು ವಿತರಿಸಲಾಗಿದೆ. ಬಂದ ಆದಾಯದಲ್ಲಿ ಶೇ.5 ರಷ್ಟನ್ನು ಸಮಾಜ ಸೇವೆಗೆ ಸಂಸ್ಥೆ ವಿನಿಯೋಗಿಸುತ್ತಿದೆ. ಆಹಾರ, ವೈದ್ಯಕೀಯ ಹಾಗೂ ಬಡ ವರ್ಗದ ಮನೆಯೊಂದರ ಮೇಲ್ಛಾವಣಿ ದುರಸ್ತಿಗೆ ಸಹಾಯವನ್ನು ಸಂಸ್ಥೆ ಪ್ರಸ್ತುತ ವರ್ಷದಲ್ಲಿ ಮಾಡಿದೆ ಎಂದರು.
ಈ ಸಂದರ್ಭ ಸಂಸ್ಥೆ ಸ್ಟೋರ್ ಹೆಡ್ ಶರತ್ ಚಂದ್ರನ್, ಕಾರ್ತಿಕ್ ಕುಮಾರ್ ಉಪಸ್ಥಿತರಿದ್ದರು. ಸುನಿಲ್ ಸ್ವಾಗತಿಸಿದರು. ಭಾಸ್ಕರ್ ಎಂ. ವಂದಿಸಿದರು.

