ಸೋಮೇಶ್ವರ: ಸಮುದ್ರದ ಅಲೆಗಳ ರಭಸ ಕಳೆದ ಎರಡು ದಿನಗಳಿಂದ ಜೋರಾಗಿದ್ದು, ಪರಿಣಾಮ ಸೋಮೇಶ್ವರ ಉಚ್ಚಿಲ ಪ್ರದೇಶದಿಂದ ಬಟ್ಟಪ್ಪಾಡಿ ರಸ್ತೆ ಸಂಪರ್ಕ ಕಡಿತವಾಗುವ ಭೀತಿ ಮತ್ತೆ ಎದುರಾಗಿದೆ.
2019 ರಲ್ಲಿ ರಸ್ತೆ ಸಮುದ್ರಕ್ಕೆ ಕೊಚ್ಚಿ ಹೋಗಿ ಸ್ಥಳೀಯರು ಪರದಾಡುವಂತಾಗಿತ್ತು. ಪ್ರದೇಶದ ರಸ್ತೆ ಸಂಪರ್ಕ 5 ತಿಂಗಳ ಕಾಲ ಕಡಿದುಹೋಗಿತ್ತು. ಆನಂತರ ಮತ್ತೆ ಕಲ್ಲುಗಳನ್ನು ಹಾಕಿ ರಸ್ತೆ ನಿರ್ಮಿಸಲಾಗಿತ್ತು. ಕಳೆದ ವರ್ಷವೂ ದುರಸ್ತಿಗೊಳಿಸಿದ್ದ ರಸ್ತೆ ಸಂಪೂರ್ಣ ಸಮುದ್ರಪಾಲಾಗಿ ಕಲ್ಲು ಬಂಡೆಗಳ ಮೇಲಿನಿಂದ ಸಾಗುವಂತಾಗಿತ್ತು. ಇದೀಗ ಮತ್ತೆ ಸರಿಪಡಿಸಿರುವ ರಸ್ತೆ ಮತ್ತೆ ಸಮುದ್ರಪಾಲಾಗುವ ಭೀತಿಯನ್ನು ಎದುರಿಸುತ್ತಿದೆ. ಬುಧವಾರ ಬೆಳಗ್ಗಿನಿಂದ ರಸ್ತೆಗೆ ಸಮುದ್ರದ ಅಲೆಗಳು ಅಪ್ಪಳಿಸಲು ಆರಂಭವಾಗಿದೆ. ರಸ್ತೆ ಸಂಪೂರ್ಣ ಮತ್ತೆ ಸಮುದ್ರಪಾಲಾಗುವುದರಲ್ಲಿ ಸಂಶಯವಿಲ್ಲ.



