




ಉಳ್ಳಾಲ: ಕೊರೊನ ಪಾಸಿಟಿವ್‍ನಿಂದ ಎಲ್ಲರೂ ದೂರ ಹೋಗುತ್ತಿರುವ ಕಾಲಘಟ್ಟದಲ್ಲಿ ಟಿ.ಜಿ. ರಾಜಾರಾಮ್ ಭಟ್ ಅವರ ನೇತೃತ್ವದಲ್ಲಿ ಹಿಂದೂ ಸಂಘಟನೆಗಳ ಯುವಕರ ತಂಡದ ಶ್ರಮದಾನದ ಮೂಲಕ ಧನಾತ್ಮಕ ಚಿಂತನೆಯೊಂದಿಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬವೊಂದಕ್ಕೆ “ಆಸರೆ” ಯೋಜನೆಯಡಿ ಸುಂದರ ಮನೆ ನಿರ್ಮಿಸಿಕೊಟ್ಟಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು ಇದು ಇಡೀ ಸಮಾಜಕ್ಕೆ ಪಾಸಿಟಿವ್ ಕಾರ್ಯವಾಗಿದೆ ಎಂದು ಆರ್ ಎಸ್ ಎಸ್ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಶೇಡಿಗುಂಡಿಯ ನಾರಾಯಣ ಪೂಜಾರಿ ಅವರಿಗೆ ಕೈರಂಗಳ ಪುಣ್ಯಕೋಟಿನಗರದ ಶಾರದಾಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ. ರಾಜಾರಾಮ್ ಭಟ್ ನೇತೃತ್ವದಲ್ಲಿ ದಾನಿಗಳು, ಸಂಘಟನೆಗಳು, ಸ್ವಯಂಸೇವಕರ ಸಹಕಾರದಲ್ಲಿ ನಿರ್ಮಿಸಲಾದ “ಆಸರೆ” ನೂತನ ಮನೆಯ ಕೀಲಿ ಕೈಯನ್ನು ನಾರಾಯಣ ಪೂಜಾರಿ ಕುಟುಂಬಕ್ಕೆ ಹಸ್ತಾಂತರಿಸಿ, ಮನೆಯೊಳಗೆ ದೀಪ ಬೆಳಗಿಸಿದ ಬಳಿಕ ಅಂಗಳದಲ್ಲಿ ತುಳಸಿಗಿಡ ನೆಟ್ಟು ಮಾಧ್ಯಮದ ಜೊತೆಗೆ ಅವರು ಮಾತನಾಡಿದರು.
ಟಿ.ಜಿ. ರಾಜಾರಾಮ್ ಭಟ್ ಅವರ ಅವಿರತ ಶ್ರಮದಿಂದ ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರು, ಅನೇಕ ಸಂಘಟನೆ ಸಹಕಾರದಲ್ಲಿ ಒಂದು ಸುಂದರ ಮನೆ ನಿರ್ಮಾಣವಾಗಿದ್ದು ಒಂದು ಬಡ ಕುಟುಂಬಕ್ಕೆ ಆಸರೆ ಆಗಿದೆ. ದೇಶದಲ್ಲಿ 80ಶೇ. ಹಿಂದೂಗಳಿದ್ದು ಅದಕ್ಕೆ ಆಧಾರ ನಮ್ಮ ಧರ್ಮ ಸಂಸ್ಕøತಿಯ ಕೇಂದ್ರ ಬಿಂದುವಾಗಿರುವ ಮನೆಯೇ ಪ್ರಮುಖವಾಗಿದ್ದು ಅದು ಜೀವನ ಮೌಲ್ಯ ಬೆಳೆಸುವ ಕೇಂದ್ರವಾಗಿದ್ದು ಅಂತಹ ದೇವಸ್ಥಾನವೇ ಇಲ್ಲಿ ನಿರ್ಮಾಣ ಆಗಿದೆ. ಒಟ್ಟಿನಲ್ಲಿ ಆಸರೆ ಇಲ್ಲದ ನಾರಾಯಣ ಪೂಜಾರಿ ಕುಟುಂಬಕ್ಕೆ ಒಂದು ಸುಂದರ ಮನೆ ಯಲ್ಲಿ ಬದುಕುವ ಸೌಭಾಗ್ಯ ಪ್ರಾಪ್ತವಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ , ದಿ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಬೆಂಗಳೂರಿನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್‍ಹೌಸ್, ಸ್ಥಳದಾನಿ ದೋಸೆಮನೆ ಶಂಕರ ಭಟ್, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ನರಸಿಂಹ ಮಾಣಿ, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸಚಿನ್ ಮೋರೆ ಸೇರಿದಂತೆ ಹಿಂದು ಸಂಘಟನೆಯ ಪ್ರಮುಖರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮನೆ ನಿರ್ಮಾಣದಲ್ಲಿ ಉಚಿತ ಕಾಮಗಾರಿ ನಡೆಸಿಕೊಟ್ಟವರು, ಶ್ರಮದಾನ ಗೈದವರು ಮತ್ತು ದಾನಿಗಳನ್ನು ಗೌರವಿಸಲಾಯಿತು.
ಕೈರಂಗಳ ಪುಣ್ಯಕೋಟಿನಗರದ ಶಾರದಾಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ. ರಾಜಾರಾಮ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.
*ಕಳೆದ ಲಾಕ್ ಡೌನ್ ನಲ್ಲಿ ನಾರಾಯಣ ಪೂಜಾರಿ ಅವರ ಮನೆಗೆ ಆಹಾರ ಕಿಟ್ ನೀಡಲು ಬಂದ ಸಂಧರ್ಭದಲ್ಲಿ ಆ ಕುಟುಂಬದ ದಯನೀಯ ಸ್ಥಿತಿಯನ್ನ ಕಂಡು ದೇಶದಲ್ಲಿ ಪ್ರಜಾಪ್ರಭುತ್ವ ಆಡಳಿತ ಇದೆಯೋ ಎಂದು ಪ್ರಶ್ನಿಸುವಂತಿತ್ತು. ಸಹೃದಯಿಗಳ ಸಹಕಾರದಿಂದ ಅಂದು ನಾರಾಯಣ ಅವರಿಗೆ ಸೂರನ್ನು ನಿರ್ಮಿಸಿ ಕೊಡಲು ಮಾಡಿದ ಸಂಕಲ್ಪವು ಇಂದು ಸಾಕಾರಗೊಂಡಿದೆ.
ಟಿ.ಜಿ. ರಾಜಾರಾಂ ಭಟ್
ಮನೆ ನಿರ್ಮಾಣದ ರೂವಾರಿ
ಹಿಂದೂಗಳು ಕನಿಷ್ಠ ಮೂರು ಮಕ್ಕಳನ್ನಾದರೂ ಮಾಡಿ !
ಹಿಂದೂಗಳಲ್ಲಿ ಸಂಖ್ಯೆ ಬಹಳ ಕಡಿಮೆಯಾಗಿದೆ. ಮಕ್ಕಳಾಗುವುದು ಭಾರೀ ಅಗತ್ಯ. ಏನೂ ಮಾಡಲು ಸಾಧ್ಯವಿಲ್ಲದೇ ಇದ್ದಲ್ಲಿ ಕನಿಷ್ಟ ಮೂರು ಮಕ್ಕಳನ್ನಾದರೂ ಮಾಡಿ. ಗಂಭೀರವಾದ ಸ್ಥಿತಿಯಲ್ಲಿ ಹಿಂದೂಗಳಿದ್ದಾರೆ ಎಂದು ಭಟ್ ಹೇಳಿದರು.

