
ಉಳ್ಳಾಲ: ರೈತರು ಬೀದಿಯಲ್ಲಿ, ಬಡವರು ಸಂಕಷ್ಟದಲ್ಲಿದ್ದರೂ ಕಿವಿ ಕಣ್ಣು ಕಾಣಿಸದ ಮೋದಿ ಸರಕಾರ ಅಂಬಾನಿ, ಅಧಾನಿಯವರ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ತೊಡಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದೊಡ್ಡಿದ ಅಹಿಂಸಾ ರೀತಿಯ ಚಳವಳಿ ಕೇಂದ್ರದ ಬಿಜೆಪಿ ಸರಕಾರವನ್ನು ಕಿತ್ತೊಗೆಯುವವರೆಗೂ ಕಾಂಗ್ರೆಸ್ ನಡೆಸಲಿದೆ ಎಂದು ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದರು.
ಅವರು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ದರ ರೂ.100 ಕ್ಕೆ ಏರಿಕೆಯಾಗಿರುವುದನ್ನು ಖಂಡಿಸಿ ಕುತ್ತಾರು ಯೆನೆಪೋಯ ಆಸ್ಪತ್ರೆ ಬಳಿಯ ಪೆಟ್ರೋಲ್ ಬಂಕ್ ನಲ್ಲಿ ಭಾನುವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸರಕಾರ ತಪ್ಪು ದಾರಿಯಲ್ಲಿದ್ದಾಗ ತಿದ್ದುವ ಕೆಲಸ ವಿರೋಧ ಪಕ್ಷ ಮಾಡಬೇಕಿದೆ. ಅದನ್ನು ಕಾಂಗ್ರೆಸ್ ಮಾಡುತ್ತಿದ್ದರೂ ಪ್ರಧಾನಿ ಕಿವಿ, ಕಣ್ಣು ಇಲ್ಲದಂತೆ ವರ್ತಿಸುತ್ತಿದ್ದಾರೆ. ಕ್ರೂಡ್ ಆಯಿಲ್ ಗೆ 65 ರೂ. ಇಳಿಕೆಯಾದರೂ ಸರಕಾರ ಅದನ್ನು ದೇಶದಲ್ಲಿ ಜಾರಿ ಮಾಡದೇ ಬಡವರನ್ನು ಸಂಕಷ್ಟಕ್ಕೆ ದೂಡಿ ಹಾಕಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿ, ಇತಿಹಾಸದಲ್ಲಿ ಪೆಟ್ರೋಲ್ ದರ 100 ರೂ. ಎಂದಿಗೂ ಆಗಿರಲಿಲ್ಲ. ಇದು ಬಿಜೆಪಿಯ ಸಾಧನೆ. ನೆರೆ ರಾಷ್ಟ್ರಗಳಾದ ಬರ್ಮಾ, ಪಾಕಿಸ್ತಾನ, ಬಾಂಗ್ಲಾ ದೇಶದಲ್ಲಿ ತೈಲ ಬೆಲೆ ಕಡಿಮೆಯಿರುವಾಗ, ಭಾರತದಲ್ಲಿ ಶೇ.60 % ತೆರಿಗೆ ಹಾಕುವ ಮೂಲಕ ಬಡಜನರ ತಲೆಗೆ ಕಲ್ಲು ಹೊತ್ತು ಹಾಕುವಂತಹ ವಾತಾವರಣ ನಿರ್ಮಿಸಲಾಗಿದೆ. ರಿಕ್ಷಾ , ಬಸ್ , ವಾಹನ ಚಾಲಕರಿಗೆ ಪ್ರತಿಯೊಬ್ಬರಿಗೂ ಸಂಧಿಗ್ಧ ಸ್ಥಿತಿಯಲ್ಲಿ ಭಾರೀ ಹೊಡೆತ ಆಗಿದೆ. ದಿನದ ವೇತನ ಪೆಟ್ರೋಲಿಗೆ ಕಾಯ್ದಿರಿಸಬೇಕಿದೆ. ರೂ.700 ದಿನದ ವೇತನವಾಗಿದ್ದಲ್ಲಿ, 500 ರೂ ಪೆಟ್ರೋಲಿಗೆ ಹಾಕಬೇಕಿದೆ. ಮುಂದೆ ಜೀವನ ನಡೆಸಲು ಹಣವೇ ಇಲ್ಲದಂತಾಗಿದೆ. ಬಿಜೆಪಿ ಸರಕಾರ ಕಿತ್ತೊಗೆದ ನಂತರವಷ್ಟೇ ನೆಮ್ಮದಿಯ ವಾತಾವರಣ ಸಾಧ್ಯ ಎಂದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ತಾ.ಪಂ ಮಾಜಿ ಸದಸ್ಯ ಮುಸ್ತಾಫ ಮಲಾರ್, ಜಿ.ಪಂ ಮಾಜಿ ಸದಸ್ಯ ಎನ್.ಎಸ್ ಕರೀಂ, ಬೆಳ್ಮ ಗ್ರಾ.ಪಂ ಅಧ್ಯಕ್ಷ ಅಬ್ದುಲ್ ಸತ್ತಾರ್, ತಾ.ಪಂ ಸದಸ್ಯ ಜಬ್ಬಾರ್ ಬೋಳಿಯಾರ್, ಕೋಟೆಕಾರು ಪ.ಪಂ ಸದಸ್ಯ ಮಹಮ್ಮದ್ ಪುಷ್ಠಿ, ಮುನ್ನೂರು ಗ್ರಾ.ಪಂ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಸದಸ್ಯ ಅಬ್ದುಲ್ ಅಝೀಝ್ ಸಿ.ಆರ್.ಕೆ, ಅಲ್ಪಸಂಖ್ಯಾತ ಘಟಕ ಉಳ್ಳಾಲ ವಲಯದ ಅಧ್ಯಕ್ಷ ಆಲ್ವಿನ್ ಡಿಸೋಜ, ಯುವಕಾಂಗ್ರೆಸ್ ಮಾಜಿ ಅಧ್ಯಕ್ಷ ಸಿ.ಎಂ ರವೂಫ್, ಅಬುಸಾಲಿ ಕಿನ್ಯಾ, ಕಿನ್ಯಾ ಗ್ರಾ.ಪಂ ಮಾಜಿ ಸದಸ್ಯ ಹಮೀದ್ ಕಿನ್ಯಾ , ಬ್ಲಾಕ್ ಕಾರ್ಯದರ್ಶಿ ಇಕ್ಭಾಲ್ ಸಾಮಣಿಗೆ , ಅಝರ್ ಕೋಡಿಜಾಲ್, ಅಭಿಷೇಕ್ ಉಳ್ಳಾಲ್, ಪುರುಷೋತ್ತಮ್ ಅಂಚನ್, ಪುರುಷೋತ್ತಮ್ ಶೆಟ್ಟಿ, ಉಪಸ್ಥಿತರಿದ್ದರು.
ಕ್ರಿಕೆಟ್ ದಿರಿಸು ಧರಿಸಿದ ಯುವಕಾಂಗ್ರೆಸ್ ಮಾಜಿ ಅಧ್ಯಕ್ಷ ಸಿ.ಎಂ ರವೂಫ್ ಪೆಟ್ರೋಲ್ ಪಂಪ್ ನಲ್ಲಿ ಕ್ರಿಕೆಟ್ ಆಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.

