
ಉಳ್ಳಾಲ: ಪುರಾಣ ಪ್ರಸಿದ್ಧ ಶ್ರೀ ಸೋಮನಾಥ ದೇವರ ಸಾನಿಧ್ಯದಲ್ಲಿ ನೂತನ ಬ್ರಹ್ಮರಥ ಸಮರ್ಪಣೆಯೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಎಪ್ರಿಲ್ 18ರಿಂದ 26ರ ವರೆಗೆ ನಡೆಯಲಿದ್ದು, ಈ ಪ್ರಯುಕ್ತ ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು ಬುಧವಾರ ಉಳ್ಳಾಲದ ಸಯ್ಯದ್ ಮದನಿ ದರ್ಗಾಗೆ ಭೇಟಿ ನೀಡಿ ಅಲ್ಲಿನ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್‍ರವರನ್ನು ಆಮಂತ್ರಣ ಪತ್ರಿಕೆ ನೀಡಿ ಆಮಂತ್ರಿಸಿದರು.
ಈ ಸಂದರ್ಭ ಮಾತನಾಡಿದ ಅವರು ಸುಮಾರು ಸಾವಿರದ ಐನೂರು ವರ್ಷಗಳ ಇತಿಹಾಸವಿರುವ ಈ ದೇವಸ್ಥಾನ ಉಳ್ಳಾಲ ಪ್ರದೇಶಕ್ಕೆ ಹೆಸರು ತಂದುಕೊಟ್ಟ ಪುಣ್ಯಕ್ಷೇತ್ರ, ಕಳೆದ ವರ್ಷ ಕೊರೋನಾ ಮಹಾಮಾರಿಯಿಂದಾಗಿ ಮುಂದೂಡಲ್ಪಟ್ಟಿತ್ತು. ಆದರೆ ದೇವರ ಯಾವುದೇ ಕಾರ್ಯ ಅವರ ಅನುಮತಿ ಸಮ್ಮತಿ ಬೇಕು, ಈಗ ಆಕಾಲ ಕೂಡಿ ಬಂದಿದೆ ಎಂದರು. ಅಲ್ಲದೆ ಸನ್ನಿಧಾನದಲ್ಲಿ ನಡೆಯುವ ಎಲ್ಲಾ ಕಾರ್ಯಗಳು ಯಾವುದೇ ವಿಘ್ನವಿಲ್ಲದೆ ಉತ್ತಮ ರೀತಿಯಲ್ಲಿ ನಡೆಸುವಂತಹ ಭಾಗ್ಯವನ್ನು ದೇವರು ಕಲ್ಪಿಸಿ ಕೊಡಲಿ. ಆ ಮೂಲಕ ಎಲ್ಲಾ ವರ್ಗಗಳ ಜನರು ಭಾಗವಹಿಸಿಕೊಂಡು ಸೌಹಾರ್ಧತೆಯನ್ನು ಮೆರೆಯುವುದರ ಜೊತೆಗೆ ನಾವು ದೇವರ ಮಕ್ಕಳು ಎಂಬ ದೃಷ್ಠಿಯಲ್ಲಿ ಒಂದಾಗಿ ಶಾಂತಿ ಸೌಹಾರ್ದತೆಯೊಂದಿಗೆ ಕೂಡಿ ಬಾಳುವಂತಹ ವ್ಯವಸ್ಥೆಗೆ ಕಾರಣರಾಗೋಣ ಎಂದು ಆಶಿಸಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಪದ್ಮನಾಭ ಶೆಟ್ಟಿ ವರ್ಕಾಡಿ ಮಾತನಾಡಿ ಉಳ್ಳಾಲದ ಪವಿತ್ರ ದರ್ಗಾದ ರಾಯರಲ್ಲಿ ಬೇಡಿಕೊಂಡು ಇಲ್ಲಿನ ಅಧ್ಯಕ್ಷರನ್ನ ಆಮಂತ್ರಿಸಿದ್ದೇವೆ ಈ ಮೂಲಕ ಸಮುದಾಯದ ಭಾಂದವರು ಎಲ್ಲಾ ವರ್ಗಗಳ ಜನರೂ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.
ಈ ಸಂದರ್ಭ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಟ್ರಸ್ಟೀ ರಾಮದಾಸ್, ಹಿರಿಯರುಗಳಾದ ಸೀತಾರಾಮ ಬಂಗೇರ, ಸುಧಾಕರ್ ಭಂಡಾರಿ, ಹಿರಿಯರುಗಳಾದ ಚೈಯ್ಯಬ್ಬ, ಇಸ್ಮಾಯಿಲ್ ಹಾಗೂ ದಿನೇಶ್ ಕಾಜವ ಉಪಸ್ಥಿತರಿದ್ದರು

