
ಉಳ್ಳಾಲ: ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಶನಿವಾರ ಮಧ್ಯಾಹ್ನದ ವೇಳೆ ಶಾರ್ಟ್ ಸರ್ಕ್ಯೂಟ್‍ನಿಂದ ಗುಜರಿ ಅಂಗಡಿಯಲ್ಲಿ ಬೆಂಕಿ ಹಿಡಿದು ಗುಜರಿ ವಸ್ತುಗಳು ಭಸ್ಮವಾಗಿವೆ, ಈ ಸಂದರ್ಭ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಲ್ಲಾಪು ಸಮೀಪದ ಆಡಂಕುದ್ರು ನಿವಾಸಿ ಐವನ್ ಡಿಸೋಜಾ ಎಂಬವರ ಜಾಗದಲ್ಲಿ ಬಾಡಿಗೆ ಆಧಾರದಲ್ಲಿ ನಡೆಸಲ್ಪಡುತ್ತಿರುವ ಅನ್ವರ್ ಎಂಬವರ ಗುಜರಿ ಅಂಗಡಿಯಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿದೆ. ಅಂಗಡಿಯೊಳಗೆ ಸಣ್ಣ ಮಟ್ಟಿನ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಏಕಾಏಕಿ ಬೆಂಕಿ ವ್ಯಾಪಿಸಿದೆ. ಘಟನೆ ನಡೆದಾಗ ಅಪಾಯ ಅರಿತ ಕಾರ್ಮಿಕರು ಅಂಗಡಿಯಿಂದ ಹೊರಬಂದು ಸಾಮಾನುಗಳನ್ನು ಹೊರಗಡೆ ಸಾಗಿಸಿದ್ದಾರೆ. ಕಾರ್ಮಿಕರು ಸಾಧ್ಯವಾದಷ್ಟು ಸಾಮಾಗ್ರಿಗಳನ್ನು ಹೊರಹಾಕುವ ಪ್ರಯತ್ನ ಮಾಡಿದ್ದರೂ ಬೆಂಕಿಯ ಕೆನ್ನಾಲಗೆಗೆ ಅಂಗಡಿ ಹೊತ್ತಿ ಉರಿದು ಒಳಗಡೆ ಉಳಿದ ಅಪಾರ ಪ್ರಮಾಣದ ಗುಜರಿ ವಸ್ತುಗಳು ಭಸ್ಮವಾಗಿವೆ. ಅಲ್ಲದೆ ಜನರೇಟರ್ ಮತ್ತು ಅಂಗಡಿಗೆ ತಾಗಿಕೊಂಡಿದ್ದ ತೆಂಗಿನ ಮರವೂ ಸುಟ್ಟು ಹೋಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

