
ಉಳ್ಳಾಲ: ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸುತ್ತಿರುವ ಮಾದಕ ಪದಾರ್ಥಗಳ ದಂಧೆಕೋರರು ಡಾರ್ಕ್ ನೆಟ್ ಅನ್ನುವ ವೆಬ್ ಸೈಟ್ ಮೂಲಕ ದಂಧೆ ಆರಂಭಿಸಿದ್ದಾರೆ. ಕೊರಿಯರ್ ಮೂಲಕ ಪಾರ್ಸೆಲ್ ತರಿಸಿ ವ್ಯವಹಾರಗಳು ನಡೆಯುತ್ತಿವೆ. ಇದಕ್ಕೆ ಇತ್ತೀಚೆಗೆ ನೆದರ್‍ಲ್ಯಾಂಡ್‍ನಿಂದ ಉಡುಪಿಗೆ ಕೊರಿಯರ್ ಮುಖೇನ ಮಾದಕ ಪದಾರ್ಥ ಪಾರ್ಸೆಲ್ ಮಾಡಿರುವುದು ಉದಾಹರಣೆಯಾಗಿದೆ ಎಂದು ಮಂಗಳೂರು ದಕ್ಷಿಣ ಪೊಲೀಸ್ ಸಹಾಯಕ ಆಯುಕ್ತ ರಂಜಿತ್ ಬಂಡಾರು ಐಪಿಎಸ್ ಹೇಳಿದರು.
ಅವರು ನಿಟ್ಟೆ ವಿಶ್ವವಿದ್ಯಾಲಯ ದ ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿ ಯ ಮನೋವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ದೇರಳಕಟ್ಟೆ ಆವಿಷ್ಕಾರ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ` ಹೋಲಿಸ್ಟಿಕ್ ಮೆನೇಜ್‍ಮೆಂಟ್ ಆಫ್ ಸಬ್‍ಸ್ಟೆನ್ಸ್ ಯೂಸ್ ಡಿಸಾರ್ಡರ್ಸ್ ‘ ಅನ್ನುವ ವಿಚಾರದ ಕುರಿತು ಆಯೋಜಿಸಲಾದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಾದಕ ವಸ್ತುಗಳು ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳಿಗೆ ಇಲಾಖೆ ಹೆಚ್ಚಿನ ಗಮನ ನೀಡುತ್ತಿದೆ. ಆದರೂ ಪ್ರಕರಣಗಳು ಹೆಚ್ಚಾಗುತ್ತಿವೆ. ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಮಾದಕ ವ್ಯಸನಗಳ ಕುರಿತ ಪರಿಣಾಮಕಾರಿ ಕಾರ್ಯಾಚರಣೆಗಳು ನಡೆಯುತ್ತಿವೆ. ಡ್ರಗ್ ಪೆಡ್ಲರ್ಸ್ ಮತ್ತು ಕನ್ಸೂಮರ್‍ಗಳ ವಿರುದ್ಧ ಇಲಾಖೆ ನಿರಂತರ ಕಾರ್ಯಾಚರಣೆ ಕೈಗೊಳ್ಳುತ್ತಲೇ ಇದೆ. ಮಾದಕ ವಸ್ತುಗಳ ಸೇವನೆ ನಡೆಸುವವರೇ ಹೆಚ್ಚಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಅಪರಾಧಿಯನ್ನು ಪರೀಕ್ಷಿಸುವಾಗ ಮಾದಕ ವ್ಯಸನ ಸೇವನೆ ಪಾಸಿಟಿವ್ ವರದಿ ಬರುತ್ತಿದೆ. ಹೆಚ್ಚಾಗಿ 16-30ರ ಹರೆಯದವರೇ ಇಂತಹ ಕೃತ್ಯಗಳಲ್ಲಿ ತೊಡಗಿಸುತ್ತಿರುವುದರಿಂದ ಅಮೂಲ್ಯವಾದ ಮಾನವ ಸಂಪನ್ಮೂಲಗಳನ್ನೇ ಕಳೆದುಕೊಳ್ಳುತ್ತಿದ್ದೇವೆ. ದೇಶದುದ್ದಕ್ಕೂ ಮಾದಕ ವ್ಯಸನಗಳ ಸಮಸ್ಯೆಯೇ ಹೆಚ್ಚಾಗಿದೆ. ತನ್ನ ಕಾಶ್ಮೀರ ಭೇಟಿ ಸಂದರ್ಭದಲ್ಲೂ ಸಹುದ್ಯೋಗಿಗಳ ಜತೆಗೆ ಮಾತುಕತೆ ನಡೆಸಿದಾಗ ಕಾಶ್ಮೀರದಲ್ಲಿಯೂ ಮಾದಕ ವ್ಯಸನ ಸೇವನೆ ವ್ಯಾಪಕವಾಗಿರುವುದು ಬೆಳಕಿಗೆ ಬಂತು. ಅಲ್ಲದೆ ಭಯೋತ್ಪಾಧನೆ ಮತ್ತು ಮಾದಕ ವ್ಯಸನಗಳಿಗೆ ಬಹಳಷ್ಟು ನಂಟುಗಳಿರುವುದು ತಿಳಿದುಬಂತು. ಕಾಶ್ಮೀರಕ್ಕೆ ಹೆರೋಯಿನ್, ಕೊಕೈನ್ ನಂತಹ ಮಾದಕ ಪದಾರ್ಥಗಳು ಪಾಕಿಸ್ತಾನದಿಂದ ಬಂದರೆ, ಮಂಗಳೂರು ಮತ್ತು ಕೇರಳ ಭಾಗಕ್ಕೆ ಆಂಧ್ರಪ್ರದೇಶದಿಂದ ಮಾದಕ ಪದಾರ್ಥಗಳ ಸಾಗಾಟ ನಡೆಯುತ್ತಿದೆ. ಈ ಬಗ್ಗೆ ಖಚಿತ ಮಾಹಿತಿಯಂತೆ ಮಂಗಳೂರು ಪೊಲೀಸರು ಇತ್ತೀಚೆಗೆ ಗುಂಡ್ಯ ಭಾಗದಲ್ಲಿ ಕಾರ್ಯಾಚರಣೆಗೆ ಇಳಿದರೂ, ಅದು ಯಶಸ್ವಿಯಾಗಲಿಲ್ಲ. ಆದರೂ ಕಾರ್ಯಚರಣೆ ನಿರಂತರವಾಗಿದೆ. ಕಾನೂನುಗಳ ತೊಡಕಿನಿಂದ ಅಪರಾಧಿಗಳು ಶಿಕ್ಷೆಯಿಂದ ಹೊರಬರುತ್ತಿದ್ದಾರೆ. ಆರೋಪಿತನ ಬಂಧನದ ವೇಳೆ ಹಲವು ನಿಯಮಾವಳಿಗಳನ್ನು ಪಾಲಿಸಲು ಪೊಲೀಸರಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಬಿಡುಗಡೆಗೊಂಡು ಮತ್ತೆ ಅಂತಹ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಆಘಾತಕಾರಿ. ಜಿಲ್ಲೆಯ ಕೆಲವು ಮೆಡಿಕಲ್ ಸ್ಟೋರ್ ಗಳಲ್ಲಿಯೂ ಕೋಡ್ ವರ್ಡ್ ಮೂಲಕ ಮಾದಕ ಪದಾರ್ಥಗಳ ಮಾರಾಟ ನಡೆಯುತ್ತಿದೆ. ಇತ್ತೀಚೆಗೆ ಮಂಗಳೂರಿನಲ್ಲಿ 16 ರ ಹರೆಯದ ಯುವಕನಿಗೆ ಮೆಡಿಕಲ್ ನಿಂದ ನೈಟ್ರೋವಿಟ್ ಗುಳಿಗೆಯನ್ನು ನೀಡಿ ಪೊಲೀಸ್ ಪೇದೆಯೊಬ್ಬರ ಕೊಲೆಗೆ ಯತ್ನಿಸಲಾಗಿತ್ತು. ಎಂದರು.
ನಿಟ್ಟೆ ಫಾರೆನ್ಸಿಕ್ ವಿಭಾಗದ ಮುಖ್ಯಸ್ಥ ಡಾ. ಮಹಾಬಲೇಶ್ ಹೆಗ್ಡೆ ಮಾತನಾಡಿ,
ದೇಶದಲ್ಲಿ ನಾರ್ಕೊ ಟೆರರಿಸಂ ಅಪಾಯಕಾರಿಯಾದ ಬೆಳವಣಿಗೆಯಾಗಿದೆ. ಜಾಗತಿಕವಾಗಿ ಇದು ಬಹಳಷ್ಟು ಪರಿಣಾಮವನ್ನು ಬೀರುತ್ತಿದೆ. ಎನ್ ಡಿಪಿಎಸ್ ಕಾಯ್ದೆ 1961 ರಲ್ಲಿ ಗಣನೆಗೆ ಬಂತಾದರೂ 1984 ರಲ್ಲಿ ಜಾರಿಗೆ ಬಂತು. 23 ವರ್ಷಗಳ ಬಳಿಕ ತಡವಾಗಿ ಜಾರಿಗೆ ಬಂತು. ಅದಾಗಲೇ ದೇಶದಲ್ಲಿ ಮಾದಕ ಪದಾರ್ಥಗಳ ವ್ಯವಹಾರ ಜೋರಾಗಿತ್ತು. ಶೇ.80 ಕಾನೂನುಬಾಹಿರ ಮಾದಕ ಪದಾರ್ಥಗಳಿದ್ದರೆ, ಶೇ.20 ಕಾನೂನುಬದ್ಧ ಪದಾರ್ಥಗಳು ಇವೆ. ಇದರಿಂದಾಗಿ ಮಾದಕ ವ್ಯಸನಗಳ ವಿರುದ್ಧ ಕಠಿಣ ಕಾನೂನು ಜಾರಿಯಾಗುತ್ತಿಲ್ಲ. ಪೊಲೀಸರಿಗೂ ಕ್ರಮ ಕಷ್ಟಸಾಧ್ಯವಾಗುತ್ತಿದೆ. ವಿದ್ಯಾರ್ಥಿಗಳು ಅಮಲು ಪದಾರ್ಥಗಳ ಚಟಕ್ಕೆ ಒಳಗಾಗುವವರನ್ನು ಅಪರಾಧಿ ಎಂದು ಬಿಂಬಿಸುವುದರ ಬದಲು ಅವರಿಗೆ ಮನಪರಿವರ್ತನೆಗೆ ಕೌನ್ಸಿಲಿಂಗ್ ಒಳಪಡಿಸುವ ಅನಿವಾರ್ಯತೆ ಇದೆ. ಈ ಕುರಿತು ಯುಜಿಸಿಗೂ ಪತ್ರವನ್ನು ಬರೆದಿರುವೆ ಎಂದ ಅವರು ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು, ಬೀದಿ ಸೇದುವವರಿಗಾಗಿ ಜಾರಿಯಾಗಿರುವ ಕೋಪ್ಟಾ ಕಾಯ್ದೆ ಮಂಗಳೂರಿನಲ್ಲಿ ಉತ್ತಮವಾಗಿ ಜಾರಿಯಾಗಿದೆ ಎಂದರು.
ಈ ಸಂದರ್ಭ ಮನೋವೈದ್ಯಕೀಯ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಶ್ರೀನಿವಾಸ್ ಭಟ್ ಉಪಸ್ಥಿತರಿದ್ದರು.

