
ಉಳ್ಳಾಲ: ಸೇತುವೆಯಿಂದ ಜಿಗಿದು ಆತ್ಮಹತ್ಯೆ ನಡೆಸುವವರ ಶೋಧ ಕಾರ್ಯಗಳಿಗೆ ಜಿಲ್ಲಾಡಳಿತದಿಂದ ಲಕ್ಷಾಂತರ ಹೊರೆಯಾಗುತ್ತಿದ್ದು, ಇಂತಹ ಖರ್ಚು ಮಾಡುವುದನ್ನು ಉಳಿಸುವ, ಆತ್ಮಹತ್ಯೆ ನಡೆಸದಂತೆ ಮನಪರಿವರ್ತಿಸುವ ಸಲುವಾಗಿ ನೇತ್ರಾವತಿ ಸೇತುವೆಯುದ್ದಕ್ಕೂ ಫೆನ್ಸಿಂಗ್ ಮತ್ತು ಸಿಸಿಟಿವಿಯನ್ನು ಅಳವಡಿಸಲಾಗಿದೆ ಎಂದು ಮಂಗಳೂರು ಉತ್ತರ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಅವರು ಮುಡಾ ಅಭಿವೃದ್ಧಿ ಪ್ರಾಧಿಕಾರ 63 ಲಕ್ಷ ರೂ. ವೆಚ್ಚದಲ್ಲಿ ನೇತ್ರಾವತಿ ಸೇತುವೆಗೆ ನಿರ್ಮಿಸಿದ ಫೆನ್ಸಿಂಗ್ ಮತ್ತು ಸಿಸಿಟಿವಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಜನ ಕೆಟ್ಟ ಸಂದರ್ಭದಲ್ಲಿ ನೇತ್ರಾವತಿ ಸೇತುವೆಯನ್ನೇ ಅವಲಂಬಿಸಿ ಆತ್ಮಹತ್ಯೆ ನಡೆಸುತ್ತಿದ್ದರು. ಒಂದು ವರ್ಷದಲ್ಲಿ ಅಂದಾಜು 10-15 ರಷ್ಟು ಮಂದಿ ಆತ್ಮಹತ್ಯೆಗೈದಿರುವ ಪ್ರಕರಣಗಳು ನಡೆದಿವೆ. ಅಲ್ಲದೆ ಅಂತರಾಷ್ಟ್ರೀಯ ಮಟ್ಟದ ಉದ್ಯಮಿ ಸಿದ್ದಾರ್ಥ್ ಕೂಡಾ ಆತ್ಮಹತ್ಯೆ ನಡೆಸಿರುವುದು , ಮಂಗಳೂರಿನ ಪಾಲಿಗೆ ನೇತ್ರಾವತಿ ಸೇತುವೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು. ಆತ್ಮಹತ್ಯೆ ಸಂದರ್ಭ ಜಿಲ್ಲಾಡಳಿತ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳ, ಕರಾವಳಿ ಕಾವಲು ಪಡೆ , ಮೀನುಗಾರರು ಎಲ್ಲರೂ ಸೇರಿಕೊಂಡು ಶೋಧ ಕಾರ್ಯಕ್ಕರ ಲಕ್ಷಾಂತರ ವೆಚ್ಚ ಮಾಡಲಾಗುತ್ತಿದೆ. ಇದು ಜಿಲ್ಲಾಡಳಿತಕ್ಕೆ ಹೊರೆಯಾಗಿ ಪರಿಣಮಿಸಿತ್ತು. ಇವೆಲ್ಲದನ್ನು ಗಮನದಲ್ಲಿಟ್ಟುಕೊಂಡು ಮುಂದೆ ಯಾರು ಆತ್ಮಹತ್ಯೆ ನಡೆಸದಂತೆ ಶಾಶ್ವತ ಪರಿಹಾರವಾಗಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್ ಮಾತನಾಡಿ, ತಡೆಬೇಲಿ, ಕ್ಯಾಮರಾ ಅಳವಡಿಸುವ ಮೂಲಕ ಮುಡಾ ಕಾರ್ಯಕ್ರಮ ಹಾಕಿ ಲೋಕಾರ್ಪಣೆಗೊಳಿಸಿದೆ. ನೇತ್ರಾವತಿ ಸೇತುವೆ ಆತ್ಮಹತ್ಯೆ ಮಾಡುವವರ ಪ್ರಮುಖ ಸ್ಥಳವಾಗಿ ಮಾರ್ಪಟ್ಟಿತ್ತು, ಶಾಸಕ ವೇದವ್ಯಾಸ್ ಅವರ ಕಾಳಜಿಯಂತೆ ಮುಡಾ ವತಿಯಿಂದ ತ್ವರಿತ ಕಾಮಗಾರಿ ನಡೆಸಿ, ಇದೀಗ ಪೂರ್ಣಗೊಳಿಸಲಾಗಿದೆ.
700 ಮೀ ಉದ್ದದ ಸೇತುವೆಯಲ್ಲಿ ನಾಲ್ಕು ಕಡೆಗಳಲ್ಲಿ 2800 ಮೀ ತಡೆಬೇಲಿ ಹಾಕಲಾಗಿದೆ. ಜೊತೆಗೆ ನಾಲ್ಕು ಸಿಸಿಟಿವಿಗಳನ್ನು ನಾಲ್ಕು ಮೂಲೆಗಳಲ್ಲಿ ಅಳವಡಿಸಲಾಗಿದೆ. ಇದು ನೇತ್ರಾವತಿ ನದಿಗೆ ಕಸ ಎಸೆಯುವವರ ವಿರುದ್ಧವೂ ಕಾರ್ಯಾಚರಿಸಲಿದೆ. ಕ್ಯಾವiರಾ ನಿರ್ವಹಣೆಯ ಜವಾಬ್ದಾರಿಯನ್ನು ಕಂಕನಾಡಿ ಪೊಲೀಸ್ ಠಾಣೆಗೆ ವಹಿಸಲಾಗಿದೆ. ಈಗಾಗಲೇ ಮಂಗಳೂರು ಪೊಲೀಸ್ ಕಮೀಷನರ್ ಮೌಖಿಕವಾಗಿ ಒಪ್ಪಿಗೆಯನ್ನು ನೀಡಿದ್ದು, ಶೀಘ್ರವೇ ಒಪ್ಪಿಗೆ ಪತ್ರದ ವ್ಯವಹಾರವೂ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ವೀಣಾ ಮಂಗಳ, ಮುಡಾ ಕಮೀಷನರ್ ದಿನೇಶ್ ಕುಮಾರ್, ಕಂಕನಾಡಿ ಠಾಣಾಧಿಕಾರಿ ಅಶೋಕ್ ಕುಮಾರ್, ಮನಪಾ ನಾಮನಿರ್ದೇಶಿತ ಸದಸ್ಯ ಭಾಸ್ಕರ ಚಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.


