UN NETWORKS
ಕೊಣಾಜೆ : ಭಾರತದಲ್ಲಿ ಪಶ್ಚಿಮ ಬಂಗಾಳ ಹೊರತುಪಡಿಸಿದರೆ ಕರಾವಳಿ ಭಾಗದಲ್ಲಿ ಮಾತ್ರ ದೈವ ದೇವರ ಆರಾಧನೆ ಹೆಚ್ಚಾಗಿ ನಡೆಯುತ್ತಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷವಾದ ಆರಾಧನೆ ಇರುವುದರಿಂದ ಕರಾವಳಿಯನ್ನು ಪ್ರತಿನಿಧಿಸುವ ಮಂಗಳೂರು ವಿಶ್ವವಿದ್ಯಾಲಯದಲ್ಲಿ ದೇವತಾ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್, ಆರ್. ಶೆಟ್ಟಿ ಅಭಿಪ್ರಾಯಪಟ್ಟರು.
ಮಂಗಳಾ ಆಡಿಟೋರಿಯಂನಲ್ಲಿ ಗುರುವಾರ ನಡೆದ ಮಂಗಳೂರು ವಿಶ್ವವಿದ್ಯಾಲಯದ 40ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ದಕ್ಷಿಣ ಕನ್ನಡದ ಜನತೆ ಭಕ್ತಿ ಆರಾಧನೆಯಲ್ಲಿ ಹೆಚ್ಚಾಗಿ ನಂಬಿಕೆ ಇಟ್ಟವರು. ಹಾಗಾಗಿ ಮಂಗಳೂರು ವಿವಿಯಲ್ಲಿ ದೇವತಾ ಅಧ್ಯಯನ ಪೀಠ ಸ್ಥಾಪಿಸುವುದರಿಂದ ನಮ್ಮ ಸಂಸ್ಕೃತಿ, ಪರಂಪರೆ, ಸಂಪ್ರದಾಯ, ಆಚರಣೆಗಳ ಅಧ್ಯಯನ ಕೈಗೊಳ್ಳಲು ಸಾಧ್ಯ ಎಂದು ನುಡಿದರು. ಒರಿಸ್ಸಾ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಪತಿ ಪ್ರೊ.ಪಿ.ವಿ. ಕೃಷ್ಣ ಭಟ್ ಮಾತನಾಡಿ ಭಾರತೀಯ ಶಿಕ್ಷಣ ಕ್ರಮದಲ್ಲಿ ಬಹಳಷ್ಟು ಬದಲಾವಣೆ ಆಗಬೇಕಿದೆ. ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ಶ್ರೀಮಂತ ಸಾಂಪ್ರದಾಯಿಕ ಶಿಕ್ಷಣ ಕ್ರಮವನ್ನು ಯುವ ಜನತೆಗೆ ತಿಳಿಸಿಕೊಡುವಲ್ಲಿ ಸ್ವಲ್ಪ ಹಿಂದೆ ಬಿದ್ದಿದೆ ಎಂದು ಹೇಳಿದರು. ಪ್ರಸ್ತುತ ಕಾಲಘಟ್ಟದಲ್ಲಿ ಜಗತ್ತು ಸಂದಿಗ್ಧತೆಯಲ್ಲಿದೆ. ಮುಂದುವರಿದ ರಾಷ್ಟ್ರಗಳೆಂದರೆ ಅಮೇರಿಕಾ, ಯುರೋಪ್ ಮೊದಲಾದ ರಾಷ್ಟ್ರಗಳನ್ನು ಉಲ್ಲೇಖಿಸುವ ನಾವು ಕೇವಲ ಭೌತಿಕ ಸಮೃದ್ಧಿ ಮನುಷ್ಯನ ಜೀವನದ ಸಾರ್ಥಕತೆ ಎಂದುಕೊಂಡಿದ್ದೇವೆ. ಜಗತ್ತಿನಲ್ಲಿ ವ್ಯಾಪಿಸಿರುವ ಈ ಆಕಾಂಕ್ಷೆಗೆ ಸಾರ್ಥಕತೆ ಬೌದ್ಧಿಕ ಸಮೃದ್ಧಿ ಮಾತ್ರವಲ್ಲ ಎಂಬ ನೆಲೆಯಲ್ಲಿ ತಿಳಿಸಿಕೊಡುವ ಶಕ್ತಿ ಸಾಮರ್ಥ್ಯ ಭಾರತದಿಂದ ಮಾತ್ರ ಸಾಧ್ಯ ಎಂದು ನುಡಿದರು.
ಭಾರತೀಯ ವಿವಿಗಳು ಸ್ವತಂತ್ರ ವ್ಯಕ್ತಿತ್ವ ರೂಪಿಸುವಲ್ಲಿ ವಿಫಲವಾಗಿದ್ದು ಪಶ್ಚಿಮದ ರಾಷ್ಟ್ರಗಳನ್ನು ಅವಲಂಬಿಸುತ್ತಿರುವುದು ಅಷ್ಟೊಂದು ಶ್ರೇಯಸ್ಕರವಲ್ಲ. ಪರೀಕ್ಷೆಗೆ ಉತ್ತರ ಬರೆಯುವುದೇ ಸಾಧನೆ ಅಲ್ಲ. ಪ್ರತಿ ಕ್ಷೇತ್ರದಲ್ಲಿ ಸಿಗಬೇಕಾದ ಜ್ಞಾನವನ್ನು ಎಚ್ಚರಿಕೆಯಿಂದ ಕಾಪಾಡಬೇಕು. ಜ್ಞಾನ ಭಂಡಾರವನ್ನು ನಿರಂತರ ವೃದ್ಧಿಸಿಕೊಳ್ಳಬೇಕು. ಹಾಗೆಯೇ ಪದವಿಗೆ ನಮ್ಮಶಿಕ್ಷಣ ಸೀಮಿತವಾಗಬಾರದು. ಉತ್ತಮ ಬದುಕು ಕಟ್ಟಿ ಕೊಂಡರೆ ಸಾಲದು. ಸಮಾಜದ ಬದಲಾವಣೆಗೆ ನಮ್ಮ ಜ್ಞಾನ ಪೂರಕವಾಬೇಕು ಎಂಬ ಪಥದಲ್ಲಿ ನಮ್ಮ ಉನ್ನತ ಶಿಕ್ಷಣ ಸಾಗಬೇಕು ಎಂದರು. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಸನ್ಮಾನ ಎಂಬುವುದು ಕೇವಲ ಪದವಿ ಪಡೆದವರಿಗಷ್ಟೆ ಸೀಮಿತವಲ್ಲ ಎಂಬ ನೆಲೆಯಲ್ಲಿ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಅವರ ಕಲ್ಪನೆಯಂತೆ ಈ ಬಾರಿ ಇತರ ಕ್ಷೇತ್ರದ ಆರು ಸಾಧಕರನ್ನು ಸನ್ಮಾನಿಸಲಾಯಿತು.
ಮಂಗಳೂರು ವಿಶ್ವವಿದ್ಯಾಲಯ ಹಾಗೂ ಲಕ್ನೋದ ಡಾ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ. ಹನುಮಯ್ಯ, ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಶಿವಲಿಂಗಯ್ಯ ಹಾಗೂ ಮಂಗಳೂರು ವಿವಿಯ ಪ್ರೊ. ಶ್ರೀಪತಿ ಕಲ್ಲೂರಾಯ ಉಪಸ್ಥಿತರಿದ್ದರು. ಮಣ್ಣಿನ ಮೂಲಕ ಬದುಕನ್ನು ಅರಳಿಸಿಕೊಂಡಿರುವ 2018ರ ಸಾಲಿನ ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ ಪ್ರಶಸ್ತಿ ವಿಜೇತ ಸಾವಯವ ಕೃಷಿಕ ಬೆಳ್ತಂಗಡಿಯ ಬಿ.ಕೆ. ದೇವರಾಯ, ಖ್ಯಾತ ವಿಜ್ಞಾನಿ, ಡಾ. ಗೋಪಾಲ್ ಎಸ್. ಮುಗೇರಾಯ, ಮಡಿಕೇರಿಯ ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ.ವಿ.ಸಿದ್ದಿಲಾಶ್, ಕಾನೂನು ತಜ್ಞೆ ಶಿಕಲಾ ಗುರುಪುರ್, ತುಳು ಭಾಷಾ ವಿದ್ವಾಂಸ, ಅಂಕಣಕಾರ ಡಾ. ಗಣೇಶ್ ಅಮೀನ್ ಸಂಕಮಾರ್ ಹಾಗೂ ಚಲನಚಿತ್ರ ನಿರ್ದೇಶಕ ಅಭಯಸಿಂಹ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ ವಿಶ್ರಾಂತ ಕುಲಪತಿಗಳ ನುಡಿಚಿತ್ರ ಪ್ರದರ್ಶನ ನಡೆಯಿತು. ಕುಲಸಚಿವ ಪ್ರೊ. ಎ. ಎಂ. ಖಾನ್ ಸ್ವಾಗತಿಸಿದರು. ಪ್ರೊ. ಉದಯ ಬಾರ್ಕೂರು, ಪ್ರೊ. ರವೀಂದ್ರಾಚಾರಿ, ಪ್ರೊ. ಕಿಶೋರಿ ನಾಯಕ್, ದೈಹಿಕ ಶಿಕ್ಷಣ ನಿಕಾಯದ ಡೀನ್ ಪ್ರೊ. ಕಿಶೋರ್ ಕುಮಾರ್ ಸಿ.ಕೆ ಹಾಗೂ ಪ್ರೊ. ಶ್ರೀಧರ್ ಸನ್ಮಾನಪತ್ರ ವಾಚಿಸಿದರು. ಪ್ರೊ. ರವಿಶಂಕರ್ ರಾವ್ ಹಾಗೂ ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.
ವಿಶ್ವವಿದ್ಯಾಲಯದ ಕುಲಪತಿಗಳನ್ನು ಭ್ರಷ್ಟಾಚಾರ ಆರೋಪಿತ ಸ್ಥಾನದಲ್ಲಿ ನಿಲ್ಲಿಸುವಂತೆ ಮಾಡಿದ ಘಟನೆ ನಿಜಕ್ಕೂ ದುರಂತ. ವಿದ್ಯಾವಂತರು ಜೀವನದ ಮೌಲ್ಯಗಳನ್ನು ರಕ್ಷಿಸುವುದಿಲ್ಲ, ಕಾಪಾಡುವುದಿಲ್ಲ ಎಂದಾದರೆ ಸಮಾಜಕ್ಕೆ ಒಂದು ರೀತಿಯ ರಾಕ್ಷಸರ ಸ್ಥಾನ ಪಡೆಯುತ್ತಾರೆ.
ಪ್ರೊ. ಪಿ.ವಿ. ಕೃಷ್ಣ ಭಟ್
`ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂಬ ಪದದ ಬದಲಿಗೆ ಕೃಷಿತೋ ಜಾಸ್ತಿ ದುರ್ಭಿಕ್ಷಂ’ ಆಗಿದೆ. ಯುವ ಜನತೆ ಕೃಷಿಯಿಂದ ದೂರ ಸರಿದು ಐಟಿ , ಇತರ ಕ್ಷೇತ್ರದತ್ತ ವಾಲುತ್ತಿದ್ದಾರೆ. ಕೃೃಷಿ ಭೂಮಿ ಕಾಂಕ್ರೀಟ್ ಕಾಡು ಆಗಿದ್ದು ಭೂಮಿ ನೀರು ಹೀರಿಕೊಳ್ಳುತ್ತಿಲ್ಲ. ಗದ್ದೆಯಾದರೆ ನೀರು ಹೀರಿಕೊಳ್ಳುತ್ತದೆ. ಮಂಗಳೂರಿನಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ. ಬೆಳೆ ಬೆಳೆಯುವಾಗ ನೀರಿಲ್ಲ, ಫಸಲು ಕೊಯ್ಯುವ ಸಮಯದಲ್ಲಿ ಮಳೆ ಸುರಿಯುತ್ತಿದೆ. ಯುವಜನತೆ ಕೃಷಿಯಿಂದ ಯಾವತ್ತೂ ವಿಮುಖರಾಗಬೇಡಿ.
ಬಿ.ಕೆ. ದೇವರಾಯ
ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ ಪ್ರಶಸ್ತಿ ವಿಜೇತ ಕೃಷಿಕರು


