UN NETWORKS
ತೊಕ್ಕೊಟ್ಟು : ತೊಕ್ಕೊಟ್ಟಿನಲ್ಲಿ ಅತ್ಯುತ್ತಮ ಸುಸಜ್ಜಿತ ಅಬ್ಬಕ್ಕ ಭವನ ನಿರ್ಮಿಸುವ ನಿಟ್ಟಿನಲ್ಲಿ ಎಂಟು ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದ್ದು ಗೃಹ ಮಂಡಳಿ ಟೆಂಡರ್ ಪಡೆದಿದ್ದು ಶೀಘ್ರ ಕಾಮಗಾರಿ ಆರಂಭಿಸಲಾಗುವುದು, ಅಧ್ಯಯನ ಪೀಠಕ್ಕೂ ಅಗತ್ಯ ಅನುದಾನ ದೊರಕಿಸಲು ಎಲ್ಲಾ ರೀತಿಯಲ್ಲೂ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.


ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ನಡೆಯಲಿರುವ 2019-20ನೇ ಸಾಲಿನ ಅಬ್ಬಕ್ಕ ಉತ್ಸವದ ಪೂರ್ವಭಾವಿಯಾಗಿ ಗುರುವಾರ ತೊಕ್ಕೊಟ್ಟಿನಲ್ಲಿ ನಡೆದಾ ಸಭೆ ಉದ್ಘಾಟಿಸಿ ಮಾತನಾಡಿದರು.
ಸ್ವಂತ ಹಣ ಖರ್ಚು ಮಾಡಿಕೊಂಡು ಅಬ್ಬಕ್ಕ ಉತ್ಸವ ಆರಂಭಿಸಲಾಗಿದ್ದು, ಸರ್ಕಾರದಿಂದ ಅನುದಾನ ಬಂದ ಬಳಿಕವೂ ಉತ್ಸವ ಸಮಿತಿಗೆ ಕಪ್ಪುಚುಕ್ಕೆ ಬರುವಂತಹ ಮಾತುಗಳನ್ನು ಹೇಳಿಲ್ಲ, ಉಳ್ಳಾಲ ಭಾಗದ ಜನ ಅಬ್ಬಕ್ಕ ಹೆಸರಲ್ಲಿ ಎಲ್ಲರೂ ಒಗ್ಗಟ್ಟಾಗಬೇಕಿದೆ. ಈ ಬಾರಿಯೂ ಅಬ್ಬಕ್ಕ ಉತ್ಸವ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದ್ದು ಬೇಡಿಕೆಯನ್ನು ಮನ್ನಿಸಿ ಅಸೈಗೋಳಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಉತ್ಸವ ಸಮಿತಿ ಮೂಲಕ ಇನ್ನಿತರ ಸಾಮಾಜಿಕ ಕೆಲಸಗಳೂ ನಡೆಯಬೇಕು. ಉತ್ತಮವಾಗಿ ಕೆಲಸ ಮಾಡುವ ಯಾವುದೇ ಸಂಘಟನೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಸೀತಮ್ಮ ಜಿ.ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ನೃತ್ಯಗುರು ಮೋಹನ್ ಕುಮಾರ್ ಉಳ್ಳಾಲ್,ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ, ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಕೃಷ್ಣಪ್ಪ ಸಾಲ್ಯಾನ್, ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್, ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್ ನ ಧರ್ಮಗುರು ಫಾ.ಜೆ.ಬಿ.ಸಲ್ದಾನ, ಉತ್ಸವ ಸಮಿತಿಯ ಗೌರವಾಧ್ಯಕ್ಷ ಸದಾನಂದ ಬಂಗೇರ, ಹೈದರ್ ಪರ್ತಿಪ್ಪಾಡಿ, ಸುವಾಸಿನಿ ಬಬ್ಬುಕಟ್ಟೆ, ಆನಂದ ಕೆ.ಅಸೈಗೋಳಿ, ಗೀತಾ ಬಾಯಿ ಮುಖ್ಯ ಅತಿಥಿಗಳಾಗಿದ್ದರು.ಸಮಿತಿಯ ಅಧ್ಯಕ್ಷ ದಿನಕರ್ ಉಳ್ಳಾಲ್ ಸ್ವಾಗತಿಸಿದರು. ಕೆ.ಎಂ.ಕೆ.ಮಂಜನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.
‘ಅಬ್ಬಕ್ಕ ಉತ್ಸವ ಆರ್ಥಿಕ ಕಾರಣದಿಂದ ನಿಂತಾಗ ಶಾಸಕ ಯು.ಟಿ.ಖಾದರ್ ಯಾವುದೇ ಕಾರಣಕ್ಕೂ ಉತ್ಸವ ನಿಲ್ಲಿಸಬೇಡಿ ಎಂದು ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಕರೆದೊಯ್ದು 25 ಲಕ್ಷ ಅನುದಾನ ಕೊಡಿಸಿದ್ದರು’
ದಿನಕರ್ ಉಳ್ಳಾಲ್, ಉತ್ಸವ ಸಮಿತಿಯ ಅಧ್ಯಕ್ಷ


