UN NETWORKS
ಕೋಟೆಕಾರ್ : ನಾವು ಜೀವನ ಸಾಗಿಸಲು ಇರುವ ದಾರಿಯನ್ನು ಸರ್ಕಾರ ತೋರಿಸಿಕೊಟ್ಟಿದ್ದು ಅವುಗಳಲ್ಲಿ ಕುಕ್ಕುಟ ವಿತರಣೆಯೂ ಒಂದಾಗಿದೆ, ಏಳು ವಾರಗಳ ಬಳಿಕ ಕೋಳಿಗಳ ಫೊಟೋ ಕಳಿಸಿದರೆ ಉತ್ತಮ ಕೋಳಿಗಳಿಗೆ ಬಹುಮಾನ ನೀಡಲು ಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಅಭಿಪ್ರಾಯಪಟ್ಟರು.








ಜಿಲ್ಲಾ ಪಂಚಾಯಿತಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಶುಕ್ರವಾರ ಸೋಮೇಶ್ವರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಫಲಾನುಭವಿಗಳಿಗೆ ಕೋಟೆಕಾರ್ ಪಶು ಆಸ್ಪತ್ರೆಯಲ್ಲಿ ನಡೆದ ಕುಕ್ಕುಟ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಡಿಮೆ ಖರ್ಚಿನಲ್ಲಿ ಕೋಳಿಗಳನ್ನು ಸಾಕಲು ಸಾಧ್ಯವಿದ್ದು, ಪರಿಸರ ಸ್ವಚ್ಛಗೊಳಿಸುವ ಮೂಲಕ ಸ್ವಚ್ಛ ಭಾರತ ಕನಸನ್ನೂ ಸಾಕಾರಗೊಳಿಸುತ್ತದೆ. ಗಿರಿರಾಜ ಕೋಳಿಗಳ ಸಾಕಾಣೆಯಿಂದ ಮೊಟ್ಟೆ ಮತ್ತು ಮಾಂಸದಿಂದಲೂ ಉತ್ತಮ ಆದಾಯ ಪಡೆಯಬಹುದು. ಸರ್ಕಾರ ಕೋಳಿ ಮಾತ್ರವಲ್ಲದೆ ಆಡು, ದನಗಳನ್ನೂ ನೀಡಿ ನೆಮ್ಮದಿಯ ಜೀವನಕ್ಕೆ ಅವಕಾಶ ಮಾಡಲಾಗುತ್ತಿದೆ. ಸರ್ಕಾರ ನೀಡುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡಾಗ ಸ್ವಾವಲಂಭಿ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು. ಮುಖ್ಯ ಪಶು ವೈದ್ಯಾಧಿಕಾರಿ ಡಾ.ನಾಗರಾಜ್ ಮಾತನಾಡಿ, ಒಂದು ಗಿರಿರಾಜ ಕೋಳಿಗೆ ನೂರು ರೂಪಾಯಿಯಿದ್ದರೂ ಬೆಂಗಳೂರನಿಂದ ಬರುವ ಗಿರಿರಾಜ ಕೋಳಿಗಳನ್ನು ಐದು ವಾರ ಬೆಳೆಸಿ ಜಿಲ್ಲಾ ಪಂಚಾಯಿತಿ ಮೂಲಕ ಎಸ್ಸಿಎಸ್ಟಿಯವರಿಗೆ ಉಚಿತ ಹಾಗೂ ಇತರರಿಗೆ ಶೇ.10 ದರದಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸೋಮೇಶ್ವರ ಪುರಸಭೆ ಅಧ್ಯಕ್ಷ ರಾಜೇಶ್ ಉಚ್ಚಿಲ್, ಮುನ್ನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರೀಶ್ ಭಂಡಾರಬೈಲ್, ಕೋಟೆಕಾರ್ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಭಾರತಿ, ಸದಸ್ಯರಾದ ಹರಿಶ್ಚಂದ್ರ, ಪ್ರಫುಲ್ಲಾ, ಪಾವೂರು ಪಶು ವೈದ್ಯಾಧಿಕಾರಿ ಡಾ.ರೇಖಾ, ತಲಪಾಡಿ ಹಿರಿಯ ಪಶು ವೈದ್ಯಾಧಿಕಾರಿ ಡಾ.ರಚನಾ, ಪಶು ಪರೀಕ್ಷಕರಾದ ಅಣ್ಣಪ್ಪ ನಾಯ್ಕ್, ಚಂದ್ರಹಾಸ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಪಶು ವೈದ್ಯಾಧಿಕಾರಿ ಡಾ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.


