UN NETWORKS
ಸೋಮೇಶ್ವರ : ಶ್ರಾವಣ ಅಮವಾಸ್ಯೆ ಪ್ರಯುಕ್ತ ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಸುಮಾರು ಐದು ಸಾವಿರ ಮಂದಿ ಶುಕ್ರವಾರ ಸಮುದ್ರಸ್ನಾನಗೈಯುವ ಮೂಲಕ ಕೃತಾರ್ಥರಾದರು.ಬೆಳಗ್ಗಿನಿಂದಲೇ ಜಡಿಮಳೆ ಇದ್ದರೂ ಶ್ರೀ ಕ್ಷೇತ್ರಕ್ಕೆ ಭಕ್ತರು ಬೆಳಗ್ಗೆ ನಾಲ್ಕು ಗಂಟೆಯಿಂದ ಮಧ್ಯಾಹ್ನ ಒಂದೂವರೆ ಗಂಟೆ ತನಕ ಆಗಮಿಸಿ, ಮೊದಲು ಗದಾತೀರ್ಥದಲ್ಲಿ ಸ್ನಾನ ಮಾಡಿ ಬಳಿಕ ಸಮುದ್ರ ಸ್ನಾನ ಮಾಡಿ ಅಲ್ಲಿಂದ ಶ್ರೀ ಸೋಮನಾಥನ ದರ್ಶನ ಪಡೆದು ಧನ್ಯರಾದರು.










ಶುಕ್ರವಾರ ಸಮುದ್ರದಲ್ಲಿ ಬೃಹತ್ ಅಲೆಗಳ ಹೊಡೆತ ಇದ್ದರೂ ತೀರ್ಥಸ್ನಾನಗೈಯಲು ಬರುವ ಭಕ್ತರ ರಕ್ಷಣೆಗಾಗಿ ಉಳ್ಳಾಲ ಮೊಗವೀರಪಟ್ನದ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ಬೆಳಗ್ಗೆ ನಾಲ್ಕು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆ ತನಕ ಸಹಕಾರ ನೀಡಿದರು. ಭಕ್ತರು ಸಮುದ್ರದ ಉಪ್ಪುನೀರಿನ ತೀರ್ಥಸ್ನಾನಗೈದು ಪಾಪ ವಿಮೋಚನೆ ಮತ್ತು ಚರ್ಮರೋಗ, ಸಿಡುಬು, ಅರ್ಬುಧ, ಅಸ್ತಮಾ ಮೊದಲಾದ ರೋಗ ಬಾಧೆಗಳ ನಿವಾರಣೆಗೆ ಶ್ರೀ ಸೋಮನಾಥ ಸನ್ನಿಧಿಯಲ್ಲಿ ಪ್ರಾರ್ಥಿಸಿದರು.ಕಳೆದ ಹಲವು ವರ್ಷಗಳಲ್ಲಿ ಆಗಮಿಸಿದ ಭಕ್ತರ ಸಂಖ್ಯೆಯನ್ನು ಪರಿಗಣಿಸಿದಾಗ ಈ ಬಾರಿ ಶ್ರಾವಣ ಅಮಾವಸ್ಯೆ ದಿನ ಸುರಿಯುತ್ತಿದ್ದ ಜಡಿ ಮಳೆಯಿಂದಾಗಿ ತೀರ್ಥ ಸ್ನಾನ ಮಾಡಿದ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಹಾಗಿದ್ದರೂ ಸೋಮನಾಥನ ಸನ್ನಿಧಿಯಲ್ಲಿ ಶ್ರಾವಣ ಅಮವಾಸ್ಯೆ ಸಮುದ್ರ ಸ್ನಾನಕ್ಕೆ ವಿಶೇಷತೆ ಇರುವುದರಿಂದ ದಕ್ಷಿಣ ಕನ್ನಡದ ವಿವಿಧ ಭಾಗ, ಕಾಸರಗೋಡು ಹಾಗೂ ಉಡುಪಿಯಿಂದಲೂ ಭಕ್ತರು ಆಗಮಿಸಿದ್ದರು.ದೇವಸ್ಥಾನದ ಪಕ್ಕದ ಗದಾತೀರ್ಥದಲ್ಲಿಯೂ ಸ್ನಾನಗೂಯುವ ಭಕ್ತರ ಸಂಖ್ಯೆ ಇಳಿಮುಖವಾಗಿತ್ತು. ಗದಾತೀರ್ಥದಲ್ಲಿ ಸ್ನಾನಗೈದ ಬಳಿಕ ಮೂಲ ನಂಬಿಕೆ ಸಂಪ್ರದಾಯದ ಪ್ರಕಾರ ವೀಳ್ಯದೆಲೆ ಮತ್ತು ಅಡಕೆಯನ್ನು ಸಮುದ್ರಕ್ಕೆ ಸಮರ್ಪಿಸಿ ನಂತರ ತೀರ್ಥಸ್ನಾನಗೈದರು.
ವರಸೆ ಬದಲಿಸಿದ ಕತ್ತಿ ಮಾರಾಟಗಾರರು: ಶ್ರಾವಣ ಅಮವಾಸ್ಯೆ ಸಂದರ್ಭ ಈ ಕ್ಷೇತ್ರಕ್ಕೆ ಕತ್ತಿ ಮಾರಾಟಗಾರರ ದಂಡು ಬರುತ್ತದೆ. ಕತ್ತಿ ಮಾರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಇದ್ದುದರಿಂದ ಕಡಿಮೆ ಲಾಭದಲ್ಲಿ ಮಾರುತ್ತಿದ್ದೇವೆ ಎಂದು ಮಾರಾಟಗಾರರೊಬ್ಬರು ತಿಳಿಸಿದ್ದಾರೆ.
ನನಗೆ 73ವರ್ಷ, ಕಳೆದ ನಲ್ವತ್ತ ಐದು ವರ್ಷದಿಂದ ತೀರ್ಥಸ್ನಾನ ಮಡುತ್ತಿದ್ದೇನೆ. ಆ ದಿನಗಳಲ್ಲಿ ಕೊಣಾಜೆಯಿಂದ ನಡೆದುಕೊಂಡು ಬರುತ್ತಿದ್ದೆವು. ಈಗಲೂ ತೀರ್ಥಸ್ನಾನಕ್ಕೆ ತಪ್ಪದೆ ಬರುತ್ತಿದ್ದೇನೆ.
ಚರ್ಮರೋಗ ನಿವಾರಣೆ, ಸಿಡುಬು ವಾಸಿಯಾಗಲು ಈ ದಿನ ಸ್ನಾನ ಮಾಡುವ ನಂಬಿಕೆ ಅನಾದಿ ಕಾಲದಿಂದಲೂ ಇದೆ.
ಮುತ್ತುಶೆಟ್ಟಿ
ಸದಸ್ಯರು
ಕೊಣಾಜೆ ಗ್ರಾಮ ಪಂಚಾಯಿತಿ ಸೋಮನಾಥ


