UN NETWORKS
ಕೊಣಾಜೆ: ಹಬ್ಬ ಹರಿದಿನಗಳನ್ನು ನಾವು ಸಾರ್ವಜನಿಕವಾಗಿ ಆಚರಿಸುವುದರಿಂದ ಅದರ ಪ್ರಾಮುಖ್ಯತೆ ಹೆಚ್ಚುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಸರ್ವಧರ್ಮಗಳ ಜನರ ಪಾಲ್ಗೊಳ್ಳುವಿಕೆಯಿಂದ ಒಳಗೊಳ್ಳುವಿಕೆ, ಸೌಹಾರ್ದತೆ, ಸಾಮರಸ್ಯದ ಭಾವ ಬೆಳೆಯಲು ಸಾಧ್ಯವಾಗುತ್ತದೆ. ಕೊಣಾಜೆಯಲ್ಲಿ ಮೊಸರುಕುಡಿಕೆ ಉತ್ಸವದ ಅಂಗವಾಗಿ ನಡೆದ ಸರ್ವಧರ್ಮ ಸಮನ್ವಯ ಕಾರ್ಯಕ್ರಮ ಅನುಕರಣೀಯವಾದುದು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಹೇಳಿದರು.

ಅವರು ಕೊಣಾಜೆಯ ಮಂಗಳ ಗ್ರಾಮೀಣ ಯುವಕ ಸಂಘ, ಮೊಸರು ಉತ್ಸವ ಸಮಿತಿ ಕೊಣಾಜೆ, ನಾಗಬ್ರಹ್ಮ ಪ್ರಗತಿಪರ ಸ್ವಸಹಾಯ ಸಂಘ ಕೊಣಾಜೆ ಇದರ ಆಶ್ರಯದಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೊಣಾಜೆಯಲ್ಲಿ ಶುಕ್ರವಾರ ನಡೆದ 16ನೇ ವರ್ಷದ ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಹಾಗೂ ಸರ್ವಧರ್ಮ ಸಮನ್ವಯ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಶ್ರೀಮಂತಿಯನ್ನು ನಾವು ಹಣದಲ್ಲಿ ಅಳೆಯಲು ಸಾಧ್ಯವಿಲ್ಲ. ಶ್ರೀಮಂತಿಕೆ ಇರುವುದು ಹೃದಯ ವೈಶಾಲ್ಯತೆಯಲ್ಲಿ. ಪರಸ್ಪರ ಒಬ್ಬರಿಗೊಬ್ಬರು ಸಹಕಾರ ನೀಡುವುದರೊಂದಿಗೆ ಸಮಾಜದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕಿದೆ. ಮಂಗಳೂರು ವಿವಿಯು ಹಾಗೂ ಪರಿಸರದ ಜನರ ಸಹಕಾರದೊಂದಿಗೆ ಮುನ್ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಾಜಿ ಮಂಡಲ ಪ್ರದಾನರಾದ ಇಬ್ರಾಹಿಂ ಕೋಡಿಜಾಲ್ ಅವರು, ನಾವು ಯಾವುದೇ ಧರ್ಮದಲ್ಲಿರಲಿ ಮೊದಲು ನಾವು ಮಾನವ ಧರ್ಮ ಏನೆಂಬುದನ್ನು ಅರ್ಥ ಮಾಡಿಕೊಂಡು ಮುನ್ನಡಯಬೇಕು ಎಂದು ಹೇಳಿದರು. ಪೆರ್ಮನ್ನೂರು ಚರ್ಚ್ನ ಧರ್ಮಗುರು ಡಾ.ಜೆ.ಬಿ.ಸಲ್ದಾನ ಅವರು ಮಾತನಾಡಿ, ಸಮಾಜದ ಹತ್ತು ಜನರು ಸೇರಿ ಮಾಡುವ ಇಂತಹ ಆಚರಣೆಗಳಿಗೆ ವಿಶೇಷವಾದ ಮಹತ್ವವಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಿವೃತ್ತ ಯೋಧ ಉಮಾನಾಥ ರೈ, ಪತ್ರಕರ್ತ ಆಸೀಫ್, ಪ್ರಗತಿಪರ ಕೃಷಿಕರಾದ ಲಕ್ಷ್ಮಣ ಪೂಜಾರಿ, ಸೀತಾರಾಮ ಗಟ್ಟಿ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕವಾಗಿ ಸಾಧನೆಗೈದ ಲಿಖಿತ ಸಿ.ಎಸ್, ಪವನ್ ಬಿ, ಅಂಕಿತಾ ಅವರನ್ನು ಸನ್ಮಾನಿಸಲಾಯಿತು. ಹಾಗೂ ನೂತನವಾಗಿ ನೇಮಕಗೊಂಡ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ರೈ ಹರೇಕಳ ಅವರು ವಹಿಸಿದ್ದರು. ಸಮಾರಂಭದಲ್ಲಿ ಕೊಣಾಜೆ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ಕಾರ್ಯಾಧ್ಯಕ್ಷರಾದ ಪ್ರಸಾದ್ ರೈ ಕಲ್ಲಿಮಾರ್, ಕೋಶಾಧಿಕಾರಿ ರವೀಂದ್ರ ಬಂಗೇರ, ನಿವೃತ್ತ ಶಿಕ್ಷಕ ಜಯಪ್ರಸಾದ್, ಸಮಾಜಸೇವಕ ಜಾನ್ ಮಾರ್ಷಲ್ ಸಲ್ದಾನ, ಪಂಚಾಯಿತಿ ಸದಸ್ಯರಾದ ವೇದಾವತಿ ಗಟ್ಟಿ, ಮುತ್ತು ಶೆಟ್ಟಿ, ಅಬ್ದುಲ್ ರಹಿಮಾನ್, ಪೂರ್ಣಿಮಾ ಶೆಟ್ಟಿ, ಹರೀಶ್ ಪೂಜಾರಿ, ಸುನಿಲ್ ಕುಮಾರ್ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮೊಸರುಕುಡಿಕೆ ಸಮಿತಿಯ ಅಧ್ಯಕ್ಷರಾದ ಅಚ್ಯುತಗಟ್ಟಿ ಸ್ವಾಗತಿಸಿದರು, ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಕೋಡಿಜಾಲ್ ವಂದಿಸಿದರು. ಶಿಕ್ಷಕಿ ಸುರೇಖಾ ಹರೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.


