UN NETWORKS
ಕೊಣಾಜೆ : ಗ್ರಂಥಸಂಪಾದನಾ ಶಾಸ್ತ್ರವನ್ನು ಪ್ರಾಚೀನ ಕಾಲದ ಗ್ರಂಥಸಂಪಾದನೆಗಳಿಗಷ್ಟೇ ಸೀಮಿತಗೊಳಿಸದೆ ಆಧುನಿಕ ಕಾಲದ ಹಸ್ತಪ್ರತಿ ಸಾಹಿತ್ಯ ಮತ್ತು ಜನಪದ ಮೌಖಿಕ ಪಠ್ಯಗಳ ಸಂಪಾದನೆಗೂ ಇದನ್ನು ವಿಸ್ತರಿಸುವ ಕಾರ್ಯ ಅಗತ್ಯವಾಗಿ ಆಗಬೇಕಿದೆ ಎಂದು ಹಾವೇರಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡ ಅವರು ಅಭಿಪ್ರಾಯಪಟ್ಟರು.

ಅವರು ಗುರುವಾರ ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಇದರ ಆಶ್ರಯದಲ್ಲಿ ವಿವಿಯಲ್ಲಿ ಕನ್ನಡ ಗ್ರಂಥ ಸಂಪಾದನೆ: ಹೊಸ ಚಿಂತನೆಗಳು ಎಂಬ ವಿಷಯದಲ್ಲಿ ಮೂರು ದಿನಗಳ ಕಾಲ ನಡೆದ ವಿಚಾರಸಂಕಿರಣದ ಸಮಾರೋಪ ಭಾಷಣದಲ್ಲಿ ಮಾತನಾಡಿದರು.ಪ್ರಾಚೀನ ಕಾಲದ ತಾಳೆಗರಿಯ ಕಾವ್ಯ ವಸ್ತುಶಾಸ್ತ್ರ ಗ್ರಂಥಗಳನ್ನು ಪ್ರಕಟಿಸುವ ಗ್ರಂಥ ಸಂಪಾದನಾ ಶಾಸ್ತ್ರಕ್ಕೆ ಮಹತ್ವದ ಸ್ಥಾನವಿದೆ. ಈ ಶಾಸ್ತ್ರವು ಸಂಕೀರ್ಣವಾದ ಮತ್ತು ಬೆಳವಣಿಗೊಳ್ಳುತ್ತಾ ಬಂದ ಅಧ್ಯಯನ ಶಿಸ್ತು ಆಗಿದೆ. ಗ್ರಂಥ ಸಂಪಾದನಾ ಶಾಸ್ತ್ರವು ಸಾಹಿತ್ಯ ಚರಿತ್ರೆಯ ಚರಿತ್ರೆ ಮತ್ತು ಕವಿ ಕೇಂದ್ರಿತ, ಕೃತಿ ಕೇಂದ್ರಿತ ಹಾಗೂ ಓದುಗ ಕೇಂದ್ರಿತ ವಿಮರ್ಶೆಗಳಿಗೆ, ಗ್ರಂಥ ಸಂಪಾದನೆಗಳಿಗೆ ಪ್ರೇರಣೆಯಾಗಿರುವುದನ್ನು ನಾವು ಪ್ರಮುಖವಾಗಿ ಗಮನಿಸಬೇಕು ಎಂದು ಹೇಳಿದರು.
ಜಾನಪದ ಗ್ರಂಥ ಸಂಪಾದನೆಯಲ್ಲಿ ಹಲವು ಮಾದರಿಗಳಿದ್ದು, ಕಲಾವಿದ-ಗಾಯಕ ಕೇಂದ್ರಿತ ಪಠ್ಯ ಸಂಗ್ರಹ ವಿಧಾನವು ಬಹಳ ಮುಖ್ಯವಾಗಿದೆ. ಜಾನಪದ ಪಠ್ಯಗಳನ್ನು ಸಂಗ್ರಹಿಸುವಾಗ ಜನಪದ ಕಲಾವಿದ ಮತ್ತು ಗಾಯಕರನ್ನು ಜನಪದ ಪರಂಪರೆಯ ಅಧಿಕೃತ ಒಡೆಯ ಎಂದು ಪರಿಗಣಿಸಬೇಕು. ಅವರ ಜ್ಞಾನವನ್ನು ಬಳಸಿಕೊಂಡು ಜನಪದ ಪಠ್ಯಗಳನ್ನು ಸಂಗ್ರಹಿಸಿ ಪ್ರಕಟಿಸುವ ಯೋಜನೆಗೆ ಹೆಚ್ಚಿನ ಮಹತ್ವವಿದೆ. ಈ ನಿಟ್ಟಿನಲ್ಲಿ ಸಿರಿ ಕಾವ್ಯ ಸಂಪಾದನೆಯನ್ನು ಒಂದು ಮಾದರಿ ಗ್ರಂಥ ಸಂಪಾದನೆಯ ಕ್ರಮ ಎಂದು ಗುರುತಿಸಬಹುದಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು, ಅಧ್ಯಯನ ಎಂಬುದು ಒಂದು ನಿರಂತರ ಪ್ರಕ್ರಿಯೆಯಾಗಿದೆ. ಕನ್ನಡ ಗ್ರಂಥ ಸಂಪಾದನೆಯಂತಹ ಪ್ರಮುಖವಾದ ವಿಚಾರಸಂಕಿರಣದಲ್ಲಿ ಯುವ ಸಮುದಾಯ, ವಿದ್ಯಾರ್ಥಿಗಳು ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ.ಕೆ.ಆರ್.ದುರ್ಗಾದಾಸ್, ಡಾ.ರಾಮಮೂರ್ತಿ, ವಿಚಾರ ಸಂಕಿರಣದ ಸಂಚಾಲಕ ಡಾ.ಬಸವರಾಜಪ್ಪ ಮೊದಲಾದವರು ಉಪಸ್ಥಿತರಿದ್ದರು. ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ.ಅಭಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿದರು. ಡಾ.ಶಂಕರ್ ವಂದಿಸಿದರು. ಸಂಶೋಧನಾ ವಿದ್ಯಾರ್ಥಿನಿ ಚಂದನಾ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು.
ಯುವ ಸಮುದಾಯ ಗ್ರಂಥ ಸಂಪಾದನೆಯದಂತಹ ಮಹತ್ವದ ಕಾರ್ಯದ ಮೂಲಕ ಜ್ಞಾನ ಕೌಶಲ್ಯವನ್ನು ವಿಸ್ತರಿಸುವ ಕಾರ್ಯದಲ್ಲಿ ಮುನ್ನಡೆಯಬೇಕು ಹಾಗೂ ಮೌಲ್ಯಯುತ ಸಮಾಜದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು.
ಪ್ರೊ.ಪಿ.ಎಸ್.ಯಡಡಿತ್ತಾಯ
ಕುಲಪತಿಗಳು
ಮಂಗಳೂರು ವಿವಿ


