UN NETWORKS
ಉಳ್ಳಾಲ : ರಾಜ್ಯದ ಅತೀದೊಡ್ಡ ಗ್ರಾಮ ಪಂಚಾಯತ್ ಆಗಿರುವ ಸೋಮೇಶ್ವರ ಗ್ರಾಮ ಪಂಚಾಯತ್ ಬುಧವಾರದಿಂದ ಪುರಸಭೆಯಾಗಿ ಕಾರ್ಯಾರಂಭ ಮಾಡಿದ್ದು ಉಳ್ಳಾಲ ನಗರಸಭೆಯ ಮುಖ್ಯಾಧಿಕಾರಿಯಾಗಿದ್ದ ವಾಣಿ ವಿ. ಆಳ್ವ ಅವರು ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.

ಸೋಮೇಶ್ವರ ಗ್ರಾಮ ಪಂಚಾಯತ್‍ನ ಅಧ್ಯಕ್ಷ ರಾಜೇಶ್ ಎ. ಉಚ್ಚಿಲ್ , ಉಪಾಧ್ಯಕ್ಷೆ ಸುಶೀಲಾ ಎಸ್.ನಾಯಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನೋಹರ ಗೌಡ ಅವರ ಉಪಸ್ಥಿತಿಯಲ್ಲಿ ವಾಣಿ ವಿ. ಆಳ್ವ ಅವರು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ರವಿಶಂಕರ್, ಮಾಜಿ ಉಪಾಧ್ಯಕ್ಷ ರಮೇಶ್ ಕೊಲ್ಯ, ಮಾಜಿ ಅಧ್ಯಕ್ಷ ಮೋಹನ್ ಶೆಟ್ಟಿ ಮತ್ತು ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಎ. ಉಚ್ಚಿಲ್ ಮಾತನಾಡಿ ಕಳೆದ 12 ವರ್ಷಗಳ ಹಿಂದೆ ಪಕ್ಷಾತೀತವಾಗಿ ಸೋಮೇಶ್ವರ ಗ್ರಾಮ ಪಂಚಾಯತ್ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಹೋರಾಟ ನಡೆದಿತ್ತು. ಎಲ್ಲರ ವಿಶ್ವಾಸವನ್ನು ತೆಗೆದುಕೊಂಡು ಗ್ರಾಮ ಪಂಚಾಯತ್ ಈವರೆಗೆ ಆಡಳಿತ ನಡೆಸಿದ್ದು, ಅನುದಾನ ಕಡಿಮೆಯಿದ್ದರೂ ಎಲ್ಲರ ಸಹಕಾರದೊಂದಿಗೆ ಗ್ರಾಮ ಪಂಚಾಯತ್ ಆಡಳಿತ ನಡೆಸುತ್ತಾ ಬಂದಿದ್ದಾರೆ. ಇದೀಗ ಪುರಸಭೆಯಾಗಿ ಮೇಲ್ದರ್ಜೆಗೇರಿದ್ದು ನೂತನ ಮುಖ್ಯಾಧಿಕಾರಿ ಅಧಿಕಾರ ಸ್ವೀಕರಿಸುವ ಮೂಲಕ ಪುರಸಭೆ ಕಾರ್ಯಾರಂಭ ಮಾಡಿದೆ. ಎಲ್ಲಾ ಕಡೆ ಗ್ರಾಮ ಪಂಚಾಯತ್ ಮೇಲ್ದರ್ಜೆಗೇರಿದರೂ ಆಭಿವೃದ್ಧಿಗೆ ಹೆಚ್ಚಿನ ಒತ್ತು ಸಿಕ್ಕಿಲ್ಲ. ಆದರೆ ಸೋಮೇಶ್ವರ ಅಂತಹ ಸಾಲಿನಲ್ಲಿ ಸೇರದೆ ಅಭಿವೃದ್ಧಿಯೊಂದಿಗೆ ಗ್ರಾಮದ ಎಲ್ಲಾ ಜನರಿಗೂ ಸೌಲಭ್ಯ ಸಿಗುವಂತಗಬೇಕು. ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಇನ್ನೂ ಕೆಲವು ದಿನಗಳು ಅಗತ್ಯವಿದ್ದು, ಈಗಿರುವ ಗ್ರಾಮ ಪಂಚಾಯತ್ ಸದಸ್ಯರು ಪುರಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದು ಮುಂದಿನ ಒಂದು ವರ್ಷದ ಅವಧಿಗೆ ಇದೇ ಸದಸ್ಯರು ತಮ್ಮ ವ್ಯಾಪ್ತಿಯ ಕಾರ್ಯಗಳು ಈ ಹಿಂದಿನಂತೆ ನಡೆಸಲಿದ್ದಾರೆ , ಮಖ್ಯಾಧಿಕಾರಿ ಅವರ ಮಾರ್ಗದರ್ಶನದಲ್ಲಿ ಪುರಸಭೆಯ ಕಾರ್ಯ ನಡೆಯಲಿದೆ ಎಂದರು.
ಮುಖ್ಯಾಧಿಕಾರಿ ವಾಣಿ ವಿ.ಆಳ್ವ ಮಾತನಾಡಿ ಗ್ರಾಮ ಪಂಚಾಯತ್ ಪುರಸಭೆಯಾಗಿ ಮೇಲ್ದರ್ಜೆಗೇರಿದಾಗ ಎಲ್ಲಾ ವ್ಯವಸ್ಥೆಗಳು ಬದಲಾವಣೆಯಾಗಲಿದ್ದು, ಕೆಲವು ದಿನಗಳ ಕಾಲ ನಾಗರಿಕರಿಗೆ ಅಡಚಣೆಯಾದರೂ ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ದೊರೆಯಲಿದ್ದು ಗ್ರಾಮದ ಜನರ ಸಹಕಾರ ಅಗತ್ಯ ಎಂದರು.


