ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಉಳ್ಳಾಲದ ಕಡಲ್ಕೊರೆತ ಪ್ರದೇಶಗಳಲ್ಲಿ ತಾತ್ಕಾಲಿಕ ಮತ್ತು ಶಾಶ್ವತ ಕಾಮಗಾರಿಗಳು ನಡೆಯುತ್ತಿದ್ದು, ಸದ್ಯ ವಿಪರೀತ ಗಾಳಿಯಿಂದ ಹಾನಿಗೊಳಗಾದ ಮನೆಯವರಿಗೆ ಸಂರಕ್ಷಣೆ ನೀಡುವಂತೆ ಮುಖ್ಯಮಂತ್ರಿ ಜತೆಗೆ ಚರ್ಚಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಬುಧವಾರ ಉಳ್ಳಾಲದ ಮೊಗವೀರಪಟ್ಣ, ಕೋಡಿ, ಕೋಟೆಪುರ, ಕೈಕೋ, ಹಿಲೇರಿಯಾನಗರ , ಉಚ್ಚಿಲ ಕಡಲ್ಕೊರೆತ ಉಂಟಾದ ಪ್ರದೆಶಗಳಿಗೆ ಭೇಟಿ ನೀಡಿದರು.

ಕೇಂದ್ರದಲ್ಲಿ ಯುಪಿಎ ಸರಕಾರವಿದ್ದ ಸಂದರ್ಭ ತಲಪಾಡಿಯಿಂದ ಕಾರವಾರ ಹಾಗೂ ಗುಜರಾತಿನ ಕರಾವಳಿ ಪ್ರದೇಶಗಳಿಗೆ ಕಡಲ್ಕೊರೆತಕ್ಕೆ ಶಾಶ್ವತ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ. ಅದರಲ್ಲಿ ಉಳ್ಳಾಲವನ್ನು ಪೈಲಟ್ ಸ್ಕೀಂ ಯೋಜನೆಗೆ ಸರಕಾರ ಸೂಚಿಸಿದೆ. ಉಳ್ಳಾಲದ ಒಂದೆಡೆ ತಾತ್ಕಾಲಿಕ ಹಾಗೂ ಇನ್ನೊಂದೆಡೆ ಶಾಶ್ವತ ಯೋಜನೆಯ ಪ್ರಥಮ ಹಂತದ ಕಾಮಗಾರಿ ಆರಂಭವಾಗಿದೆ. ಶಾಶ್ವತ ಕಾಮಗಾರಿಯು ಮೂರು ವರ್ಷದಲ್ಲಿ ಮುಗಿಸುವ ಭರವಸೆಯನ್ನು ಗುತ್ತಿಗೆ ಪಡೆದ ಕಂಪೆನಿ ನೀಡಿದೆ. ಬ್ರೇಕ್ ವಾಟರ್ ನ ಪ್ರಾಥಮಿಕ ಹಂತದ ಬರ್ಮ, ತಡೆ ಕಟ್ಟುವ ಕೆಲಸಗಳು ನಡೆಯುತ್ತಿದೆ. ಇದರಿಂದ ಉಳ್ಳಾಲ ಆಸುಪಾಸಿನಲ್ಲಿ ಕಡಲುಕೊರತೆ ತೀವ್ರಗೊಂಡಿದೆ. ಈ ಕಾರಣದಿಂದ ಬ್ರೇಕ್ ವಾಟರ್ ಕಾಮಗಾರಿಯನ್ನು ಮರುವಿನ್ಯಾಸಗೊಳಿಸಲು ತೀರ್ಮಾನಿಸಲಾಗುವುದು. ಉಳ್ಳಾಲ ಸುತ್ತಮುತ್ತಲ ಕಡಲಕೊರತೆಯಿಂದ ಜನಸಾಮಾನ್ಯರಿಗೆ ತೊಂದರೆ ತಪ್ಪಿಸಲು ಅಗತ್ಯ ನೆರವು ನೀಡಲು ಸರಕಾರ ಬದ್ದವಾಗಿದೆ. ಅಗತ್ಯಬಿದ್ದಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲಾಗುವುದು. ಸ್ಥಳೀಯಾಡಳಿತವು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದೆ. ಈಗಾಗಲೇ ಮನೆ ಹಾನಿಗೀಡಾದವರಿಗೆ ತುರ್ತು ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೇ, ಈ ಬಗ್ಗೆ ಬಂದರು ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
ಈ ಸಂದರ್ಭ ಉಳ್ಳಾಲ ನಗರಸಭೆ ಅಧ್ಯಕ್ಷೆ ಗಿರಿಜಾ ಬಾಯಿ, ಉಪಾಧ್ಯಕ್ಷೆ ರಝಿಯಾ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮಂಗಳೂರು ತಹಶೀಲ್ದಾರ್ ಜೀನ್ ತಾವ್ರೋ, ಬಂದರು ಇಲಾಖೆ ಅಭಿಯಂತರ ಮಾದೇಗೌಡ, ಉಳ್ಳಾಲ ನಗರಸಭೆ ಮುಖ್ಯಾಧಿಕಾರಿ ರೂಪಾ.ಟಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.



