UN NETWORKS
ಕೊಣಾಜೆ : ಹಿರಿಯರು ಕಿರಿಯರಿಗೆ ನೀಡುವ ಮಾರ್ಗದರ್ಶನದ ಫಲವಾಗಿ ಕೊಣಾಜೆಯಲ್ಲಿ ಕೋಮು ಸಾಮರಸ್ಯ ಇಂದಿಗೂ ಗಟ್ಟಿಯಾಗಿದೆ, ಗ್ರಾಮಕ್ಕೆ ಮಂಗಳೂರು ವಿಶ್ವವಿದ್ಯಾಲಯ ಮುಕುಟಪ್ರಾಯ ಇದ್ದಂತೆ. ಈ ಗ್ರಾಮ ಇತರ ಗ್ರಾಮಗಳಿಗೆ ಮಾದರಿ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಎ.ಎಂ.ಖಾನ್ ಅಭಿಪ್ರಾಯಪಟ್ಟರು.





ಮಂಗಳೂರು ವಿಶ್ವವಿದ್ಯಾಲಯ, ಕೊಣಾಜೆ ಗ್ರಾಮ ಪಂಚಾಯಿತಿ, ಮಂಗಳಾ ಗ್ರಾಮೀಣ ಯುವಕ ಸಂಘ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮಂಗಳೂರು ವಿವಿ ಎನ್ಎಸ್ಎಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಕೊಣಾಜೆ ಕಲ್ಲಿಮಾರ್ ಗದ್ದೆಯಲ್ಲಿ ಎರಡು ದಿನ ನಡೆದ ‘ಕೊಣಾಜೆ ಗ್ರಾಮೋತ್ಸವ-2019’ರ ವಿವಿಯ ಮಂಗಳ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಜಿಲ್ಲಾ ರಾಜ್ಯಪಾಲ ರೊನಾಲ್ಡ್ ಗೋಮ್ಸ್, ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯೆ ಪದ್ಮಾವತಿ ಪೂಜಾರಿ, ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮಂಗಳೂರು ವಿವಿ ಎನ್ಎಸ್ಎಸ್ ಘಟಕ ವಿನುತಾ ರೈ, ಮಂಗಳಾ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಅಬ್ದುಲ್ ರಹ್ಮಾನ್ ಎ.ಕೆ., ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ವಿಜಯ ಕುಮಾರ್ ಪಾವೂರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ರಾವ್ ಮುಖ್ಯ ಅತಿಥಿಗಳಾಗಿದ್ದರು.
ಗ್ರಾಮೋತ್ಸವ ಸಮಿತಿಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಸ್ವಾಗತಿಸಿದರು.
ಸಂಚಾಲಕ ರವೀಂದ್ರ ರೈ ಕಲ್ಲಿಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ತ್ಯಾಗಂ ಹರೇಕಳ ಬಹುಮಾನಿತರ ಹೆಸರು ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಅಚ್ಚುತ ಗಟ್ಟಿ ಹಾಗೂ ಸುರೇಖ ಹರೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಗ್ರಾಮೋತ್ಸವ ಸಮಿತಿಯ ಕೋಶಾಧಿಕಾರಿ ಅಬ್ದುಲ್ ನಾಸೀರ್ ಕೆ.ಕೆ. ವಂದಿಸಿದರು.
‘ನಾಲಗೆ ಆಚಾರವಿಲ್ಲದಂತಾಗಬಾರದು, ಮಾತು ಸಾಮರಸ್ಯ ಕದಡವಂತಿರಬಾರದು. ಗ್ರಾಮ ಸ್ವಚ್ಛವಾಗಬೇಕಾದರೆ ಮೊದಲು ಮನಸ್ಸು ಸ್ವಚ್ಛವಾಗಿರಬೇಕು, ಗ್ರಾಮಸ್ಥರ ಮನಸ್ಸುಗಳು ಒಂದಾಗಿದ್ದನ್ನು ಕಾಣುವಾಗ ಭಾರತ ಇಲ್ಲೇ ಇದೆ ಎನ್ನುವಂತೆ ಕಾಣುತ್ತಿದೆ’
ಪ್ರೊ.ಪಿ.ಎಸ್.ಯಡಪಡಿಯತ್ತಾಯ, ಮಂಗಳೂರು ವಿವಿ ಕುಲಪತಿ


