UN NETWORKS
ಉಳ್ಳಾಲ : ವಿದ್ಯಾರ್ಥಿ ನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಶಕ್ತಿನಗರ ನಿವಾಸಿ ಸುಶಾಂತ್ ನನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಿಂದ ಗುರುವಾರ ಬಿಡುಗಡೆಗೊಳಿಸಿ , ಉಳ್ಳಾಲ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಜೂ.29 ರಂದು ಕಾರ್ಕಳ ಕಾಲೇಜಿನಿಂದ ಮನೆಗೆ ಮರಳುತ್ತಿದ್ದ ಬಗಂಬಿಲ ನಿವಾಸಿ ದೀಕ್ಷಾ(21) ಳನ್ನು ಅಡ್ಡಗಟ್ಟಿ ಸುಶಾಂತ್ ಚೂರಿಯಿಂದ 12 ಬಾರಿ ಇರಿದು, ತಾನೂ ಕುತ್ತಿಗೆಗೆ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದ. ಘಟನೆ ಬಳಿಕ ಇಬ್ಬರನ್ನು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ದೀಕ್ಷಾ ಸ್ಥಿತಿ ಇನ್ನೂ ಗಂಭೀರವಾಗಿದೆ. ಸುಶಾಂತ್ ಎರಡು ದಿನಗಳಲ್ಲೇ ಚೇತರಿಸಿಕೊಂಡಿದ್ದ. ಒತ್ತಡಕ್ಕೆ ಒಳಗಾಗಿದ್ದ ಸುಶಾಂತ್ ನನ್ನು ಮಾನಸಿಕ ರೋಗಿಗಳ ವಿಭಾಗದಲ್ಲಿರಿಸಿ ಚಿಕಿತ್ಸೆಯನ್ನೂ ನೀಡಲಾಗಿತ್ತು. ಇಂದು ಐದು ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರೇಮ ವೈಫಲ್ಯವೇ ಕಾರಣ: ತಾನು ದೀಕ್ಷಾಳನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆಯಾಗುವ ಉದ್ದೇಶ ಇಟ್ಟುಕೊಂಡಿದ್ದನು. ಕಾರ್ಕಳದ ಕಾಲೇಜು ತೆರಳಿದ ಬಳಿಕ ದೀಕ್ಷಾ ತನ್ನ ಸಂಪರ್ಕವನ್ನೇ ಕಡಿತಗೊಳಿಸಿದ್ದಳು. ಕರೆ ಮಾಡಿದರೂ ಸ್ವೀಕರಿಸದ ಹಿನ್ನೆಲೆಯಲ್ಲಿ ಜಿಗುಪ್ಸೆಗೊಂಡಿದ್ದ. ಈ ನಡುವೆ ಕಾರ್ಕಳದಲ್ಲಿ ದೀಕ್ಷಾ ಹೆತ್ತವರು ನೀಡಿದ ದೂರಿನಂತೆ ಪ್ರಕರಣವೂ ದಾಖಲಾಗಿತ್ತು. ಆನಂತರ ತಾನೂ ಬದುಕಬಾರದು, ಪ್ರೀತಿಯೂ ಉಳಿಯಬಾರದು ಅನ್ನುವ ಮನಸ್ಸು ಮಾಡಿ, ದೀಕ್ಷಾ ಕೊಲೆಗೆ ಸಂಚು ರೂಪಿಸಿ ಕೃತ್ಯವೆಸಗಿದ್ದಾನೆ ಎಂದು ಪೊಲೀಸ್ ವಿಚಾರಣೆ ವೇಳೆ ಸುಶಾಂತ್ ತಿಳಿಸಿದ್ದಾನೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸುಶಾಂತ್ ವಿರುದ್ಧ 307 ಕೊಲೆಯತ್ನ ಹಾಗೂ 309 ಆತ್ಮಹತ್ಯೆಗೆ ಯತ್ನ ಎರಡು ಕಾಯಿದೆಗಳಡಿ ಪ್ರಕರ ದಾಖಲಾಗಿದೆ.
ದೀಕ್ಷಾ ವೆಂಟಿಲೇಟರ್ ತೆಗೆದ ವೈದ್ಯರು:
ಚಿಂತಾಜನಕ ಸ್ಥಿತಿಯಲ್ಲಿದ್ದ ದೀಕ್ಷಾ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ. ವೈದ್ಯರು ವೆಂಟಿಲೇಟರ್ ತೆಗೆದಿದ್ದು, ಸಂಬಂಧಿಕರಲ್ಲಿ ಸ್ವಲ್ಪ ಮಾತನಾಡಿರುವುದಾಗಿ ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ. 5 ಎಂ.ಎಲ್ ನಷ್ಟು ನೀರು ಕುಡಿಸಲಾಗಿದೆ. ಆರೋಗ್ಯ ಸ್ಥಿತಿಯಲ್ಲಿ ಮತ್ತೆ ಸುಧಾರಣೆ ಆದಲ್ಲಿ ಇನ್ನಷ್ಟು ನೀರು ಕುಡಿಯಬಹುದು. ಆ ಬಳಿಕ ಚೇತರಿಕೆ ಆದಲ್ಲಿ ಜ್ಯೂಸನ್ನು ಕುಡಿಸಬಹುದು. ಎಡ ಕೈಯಲ್ಲಿ ಪ್ಲಾಸ್ಟಿಕ್ ಸರ್ಜರಿ ಸಂಬಂಧ ಚಿಕಿತ್ಸೆ ನಡೆಯಲಿದೆ ಅನ್ನುವುದು ವೈದ್ಯರ ಅಭಿಪ್ರಾಯವಾಗಿದೆ.


