UN NETWORKS
ಉಳ್ಳಾಲ : ಲೋಕಸಭಾ ಚುನಾವಣೆ ಸಂದರ್ಭ ಮಂಗಳೂರು ಕ್ಷೇತ್ರದಲ್ಲಿ ಚುನಾವಣಾ ಕಿಚ್ಚು ಹಚ್ಚಲಾಗಿತ್ತು. ಕಳೆದ ಬಾರಿ ಜಿಲ್ಲೆಯಲ್ಲಿ ಶಾಸಕರು ಇರಲಿಲ್ಲ, ಈ ಬಾರಿ ಏಳು ಶಾಸಕರಿದ್ದು ನಾವೆಲ್ಲಾ ಸೇರಿ ಉಳ್ಳಾಲವನ್ನು ಹೆಚ್ಚು ಗಮನ ಹರಿಸುತ್ತೇವೆ, ಐದು ವರ್ಷದ ಅವಧಿಯಲ್ಲಿ ಜಿಲ್ಲೆಗೆ ನೆನಪಿಡುವಂತಹ ಯೋಜನೆ ತರಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದರು.


ಮಂಗಳೂರು ಕ್ಷೇತ್ರ ಬಿಜೆಪಿ ವತಿಯಿಂದ ಭಾನುವಾರ ಅಡ್ಕ ಶ್ರೀ ಭಗವತೀ ಸಭಾ ಮಂದಿರದಲ್ಲಿ ನಡೆದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ಕಳೆದ 28 ವರ್ಷಗಳಿಂದ ಬಿಜೆಪಿ ಸಂಸದನ ಸ್ಥಾನ ಉಳಿಸಿಕೊಂಡು ಬಂದಿದ್ದು ಮಂಗಳೂರು ಕ್ಷೇತ್ರ ಮಾತ್ರ. ಮೋದಿ 2014ರಲ್ಲಿ ಮೋದಿ ಪ್ರಧಾನಿಯಾದಾಗ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಬಗ್ಗೆ ಹೇಳಿದ್ದರು. ಇಂದು ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನ ಪಡೆಯಲೂ ಅನರ್ಹವಾಗಿದ್ದು ಮೋದಿಯವರ ಮಾತು ನಿಜವಾಗಿದೆ ಎಂದು ಅಭಿಪ್ರಾಯಪಟ್ಟರು.ವಿದಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಇಂದು ಬಿಜೆಪಿ ಹಳ್ಳಿಗಳಲ್ಲೂ ಬಲಿಷ್ಠಗೊಂಡು ದೇಶದಲ್ಲಿ ಅಧಿಕಾರಕ್ಕೆ ಬರಲು ರಾಷ್ಟ್ರಕ್ಕಾಗಿ ತೋರಿಸಿದ ಬದ್ದತೆ ಕಾರಣ. ಮಂಗಳೂರು ಕ್ಷೇತ್ರದಲ್ಲಿ ಕಾರ್ಯಕರ್ತರ ಅತ್ಯಂತ ಹೆಚ್ಚು ದುಡಿಮೆ, ಅತ್ಯಂತ ಕಡಿಮೆ ಖರ್ಚಾಗಿ ಅತ್ಯಂತ ಹೆಚ್ಚು ಮತಗಳಿಂದ ಬಿಜೆಪಿ ಜಯ ಗಳಿಸಿದೆ ಎಂದರು.ಸರ್ಕಾರ ಒಳ್ಳೆಯ ಕೆಲಸ ಮಾಡುವ ಶಕ್ತಿ ಕಳೆದುಕೊಂಡಿದೆ. ಬಡ, ರೈತ ವರ್ಗಕ್ಕೆ ಸವಲತ್ತು ಕೊಡುವ ಶಕ್ತಿ ಕಳೆದುಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನ ಕರೆಯುವುದು ಶ್ಲಾಘನೀಯ, ಆದರೆ ಮುಂದಿನ ಸದನ ಯಾವ ಆಧಾರದಲ್ಲಿ ನಡೆಸುತ್ತೀರಿ ಎನ್ನುವ ಆತಂಕ ಇದೆ ಎಂದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ.ಜಯರಾಂ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ್, ಕಾರ್ಯದರ್ಶಿಗಳಾದ ಸತೀಶ್ ಕುಂಪಲ, ನಮಿತಾ ಶ್ಯಾಂ, ಚಂದ್ರಶೇಖರ ಉಚ್ಚಿಲ್ ಉಪಸ್ಥಿತರಿದ್ದರು.
ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಸ್ವಾಗತಿಸಿದರು. ಮನೋಜ್ ಆಚಾರ್ಯ ವಂದಿಸಿದರು. ಹರಿಯಪ್ಪ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.


