*** ಲೇಖನ
ಇಸ್ಲಾಂನ ಪ್ರಮುಖ ಅಂಗಗಳಲ್ಲಿ ಒಂದಾದ ರಂಝಾನ್ ಮಾಸವು ಅತ್ಯಂತ ಪವಿತ್ರ ಮಾಸವಾಗಿ ಮುಸ್ಲಿಮರನ್ನು ಪ್ರಪಂಚದ ಎದುರಿಗೆ ಪರಿಚಯಿಸುತ್ತಿದೆ.

ಇಸ್ಲಾಂನ ತತ್ವಗಳಲ್ಲಿ ನಿಮ್ಮ ನೆರೆಮನೆಯವನು ಹಸಿದಿರುವಾಗ ನೀನು ಊಟ ಮಾಡುವುದು ಶ್ರೇಯಸ್ಕರವಲ್ಲ ಎಂಬುದನ್ನು ಸಾರುತ್ತದೆ, ಅದರಂತೆ ಹಸಿವು ಎಂದರೇನು? ಹಸಿವಿನಿಂದ ಕೂಡಿರುವ ಬಡವನ ಕಳವಳ, ತುಮುಲಗಳೇನು? ಎನ್ನುವುದನ್ನು ಇಸ್ಲಾಂ ವಿಶ್ವಾಸಿಗನಿಗೆ ರಂಝಾನ್ ಮಾಸವು ಅರ್ಥ ಮಾಡಿಕೊಡುತ್ತದೆ. ಬಡವ ಬಲ್ಲಿದನೆಂಬ ಬೇಧವಿಲ್ಲದೆ, ಹಸಿವು, ದಾಹ ಇದರ ಸಂಕಟಗಳನ್ನು ಮನುಷ್ಯನು ಅರ್ಥಮಾಡಿಕೊಳ್ಳುವಂತಾಗಿದೆ. ಆದರೆ ಇಸ್ಲಾಮಿನ ಪ್ರಕಾರ ಬರೇ ಉಪವಾಸವಿದ್ದರೆ ಸಾಲದು, ಈ ಉಪವಾಸದಲ್ಲಿ ಮನಸ್ಸಿನ ಎಲ್ಲಾ ವಿಕಾರಗಳನ್ನು ತ್ಯಜಿಸಿ ಉಪವಾಸದಲ್ಲಿ ಅತ್ಯಂತ ಪರಿಶುದ್ದ ಆಗಿರುವುದೇ ರಂಝಾನ್ ಮಾಸದ ತಿರುಳಾಗಿದೆ.
ಆಚರಣೆ ಹೇಗೆ?: ಸೂರ್ಯ ಉದಯವಾಗುವ ಮೊದಲು ಎದ್ದು, ಮುಂಜಾನೆಗೂ ಮುನ್ನ ಅಗತ್ಯಕ್ಕೆ ತಕ್ಕಂತಿರುವ ಉಪಹಾರಗಳನ್ನು ಸೇವಿಸುವ ಮುಸ್ಲಿಂ ಬಾಂಧವರು ತದನಂತರ ಮುಂಜಾವಿನ ನಮಾಜನ್ನು ನೆರವೇರಿಸುತ್ತಾರೆ. ಸಂಜೆಯ ತನಕವೂ ಉಳಿದ ನಮಾಜುಗಳನ್ನು ನಿರ್ವಹಿಸಿ ಸೂರ್ಯ ಅಸ್ತಂಗತನಾಗುವ ಸಮಯದಲ್ಲಿ ಉಪವಾಸವನ್ನು ಇಫ್ತಾರ್ ಎಂಬ ಹೆಸರಿನಲ್ಲಿ ಉಪವಾಸವನ್ನು ತ್ಯಜಿಸುತ್ತಾರೆ. ಹಣ್ಣುಹಂಪಲುಗಳ ಸೇವನೆಯೊಂದಿಗೆ ಉಪಹಾರವನ್ನು ಸೇವಿಸುತ್ತಾರೆ. ಇಸ್ಲಾಮಿನ ಪ್ರಕಾರ ರಂಝಾನ್ ತಿಂಗಳು ಎಲ್ಲಾ ಪಾಪಗಳಿಂದ ಮುಕ್ತವಾಗಿದ್ದು, ಸ್ವರ್ಗದ ಬಾಗಿಲುಗಳನ್ನು ತೆರೆದುಕೊಂಡಿರುವ ಮಾಸವಾಗಿರುತ್ತದೆ, ಬಡ ಬಗ್ಗರಿಗೆ ದಾನ ಧರ್ಮವೂ ಸಹ ಈ ಮಾಸದಲ್ಲಿ ನೈಜ ಮುಸ್ಲಿಮನಾದವನು ಕಡ್ಡಾಯವಾಗಿ ಮಾಡಲೇಬೇಕು. ಕರುಣೆ, ಸಹೋದರತೆ ಎಲ್ಲವೂ ಈ ಮಾಸದಲ್ಲಿ ಮಿಳಿತವಾಗಿದ್ದು, ಸಹನೆ ಸಾಕಾರದ ತಿಂಗಳೆಂದೇ ರಂಝಾನ್ ಗುರುತಿಸಲ್ಪಡುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಉಪವಾಸವನ್ನು ಆಚರಿಸುತ್ತಿದ್ದರೆ, ರೋಗದಿಂದ ನರಳುವವರು ಹಾಗೂ ಅತೀ ಚಿಕ್ಕ ಮಕ್ಕಳಿಗೆ ಇಸ್ಲಾಂ ಉಪವಾಸದಿಂದ ವಿನಾಯಿತಿ ಇದೆ.


