UN NETWORKS
ಉಳ್ಳಾಲ : ಉಳ್ಳಾಲದಲ್ಲಿ ಕಡಲ್ಕೊರೆತ ಬುಧವಾರದಂದು ಮುಂದುವರಿದಿದೆ. ಕೈಕೋ ಕಿಲಿರಿಯಾನಗರದಲ್ಲಿರುವ ಎಂಟು ಮನೆಮಂದಿ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಸೋಮೇಶ್ವರ-ಉಚ್ಚಿಲ ಭಾಗದಲ್ಲಿ ಒಂದು ಮನೆ ಸಂಜೆ ವೇಳೆ ಸಮುದ್ರದ ಪಾಲಾಗಿದೆ.






ಖಲೀಲ್, ಝೊಹರಾ, ಜೈನಬಾ, ಝೊಹರಾ ರಹೀಂ, ಜುಬೇರಾ, ನಸೀಮಾ ಹಾಗೂ ಮನೆ ಕಳೆದುಕೊಂಡ ಮೈಮುನಾ ಇಕ್ಬಾಲ್ ಮತ್ತು ಝೊಹರಾ ಎಂಟು ಕುಟುಂಬಗಳು ಕೋಟೆಕಾರು ಮತ್ತು ಉಳ್ಳಾಲಬೈಲಿನಲ್ಲಿರುವ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಂಡಿದ್ದೇವೆ ಎಂದು ಖಲೀಲ್ ತಿಳಿಸಿದರು. ಮಂಗಳವಾರ ರಾತ್ರಿಯಿಡೀ ಅಲೆಗಳು ಹೊಡೆತ ವಿಪರೀತವಾಗಿತ್ತು. ಅಪಾಯದಂಚಿನಲ್ಲಿರುವ ಮನೆಗಳಿಗೆ ಭಾಗಶ: ಹಾನಿಯಾಗುತ್ತಿದೆ. ಸ್ಥಳೀಯ ಮನೆಗಳ ಅಂಗಳಕ್ಕೆ ಸಮುದ್ರ ನೀರು ಇಕ್ಕಟ್ಟಾಗುವುದರಿಂದ ಅಲ್ಲಿ ಉಳಿಯಲು ಕಷ್ಟವಾಗುತ್ತಿದೆ. ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಉಳ್ಳಾಲ ಬೀಚ್ ಸಮೀಪವಿರುವ ಅಲ್ಬುಕರ್ಕ್ ಅವರಿಗೆ ಸೇರಿದ ಸಮ್ಮರ್ ಸ್ಯಾಂಡ್ ರೆಸಾಟ್ ್ ಗೋಡೆಗಳಿಗೂ ಅಲೆಗಳು ಸಂಜೆ ಹೊತ್ತಿನಲ್ಲಿ ಹೊಡೆಯಲು ಆರಂಭವಾಗಿದೆ. ಕಟ್ಟಡ ತೀರಾ ಅಪಾಯದಂಚಿನಲ್ಲಿದೆ. ಸೋಮೇಶ್ವರ-ಉಚ್ಚಿಲ ಭಾಗದಲ್ಲಿ ಅಬೂಬಕರ್ ಎಂಬವರ ಮನೆ ಅರ್ಧದಷ್ಟು ಹಾನಿಯಾಗಿದೆ. ನಾಗೇಶ್ , ವಿಶ್ವನಾಥ್ ಎಂಬವರ ಮನೆಯೂ ಭಾಗಶ: ಹಾನಿಯಾಗಿದೆ. ಮಂಗಳವಾರ ಎರಡು ಮನೆಗಳ ಶೆಡ್ ಸಂಪೂರ್ಣ ಸಮುದ್ರಪಾಲಾಗಿತ್ತು.
ತೆಂಗಿನ ಮರಗಳು ನಾಶ: ಕಡಲ್ಕೊರೆತದಿಂದಾಗಿ ವರ್ಷಗಳಿಂದ ಸಮುದ್ರ ತೀರದಲ್ಲಿದ್ದ ತೆಂಗಿನ ಮರಗಳು ಸಮುದ್ರಪಾಲಾಗಿವೆ. ಮೂರು ದಿನಗಳಲ್ಲಿ 20 ಕ್ಕೂ ಅಧಿಕ ತೆಂಗಿನಮರ ಸಮುದ್ರಪಾಲಾಗಿವೆ. ತಡರಾತ್ರಿ ಹಾಗೂ ಮಧ್ಯಾಹ್ನ ವೇಳೆ ಅಲೆಗಳ ಅಬ್ಬರ ಹೆಚ್ಚಾಗುತ್ತಾ ಅನಾಹುತ ಸಂಭವಿಸುತ್ತಿದೆ.
`ಮಾತನ್ನು ಕೇಳುತ್ತಿಲ್ಲ’ : ಸಹಾಯಕ ಕಮೀಷನರ್
ಉಳ್ಳಾಲ ಭಾಗದಲ್ಲಿ ಎರಡು ದಿನಗಳಿಂದ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸುತ್ತಿದ್ದೇವೆ. ಆದರೆ ಅಧಿಕಾರಿಗಳ ಮಾತನ್ನು ಸ್ಥಳೀಯರು ಕೇಳುತ್ತಿಲ್ಲ. ಇದರಿಂದ ಸ್ಪಂಧಿಸಲು ಸಾಧ್ಯವಾಗುತ್ತಿಲ್ಲ. ಈ ಹಿಂದೆಯೇ ತೀರಾ ಅಪಾಯದಂಚಿನಲ್ಲಿರುವ ಮನೆಗಳಿಗೆ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ಆದರೆ ಮತ್ತೆ ಮನೆಗಳನ್ನು ಮರುನಿರ್ಮಿಸಿ ಅಲ್ಲೇ ಕುಳಿತುಕೊಳ್ಳುತ್ತಿದ್ದಾರೆ. ಸರಕಾರದಿಂದ ಸ್ವಲ್ಪ ಪ್ರಮಾಣದ ಪರಿಹಾರ ನೀಡಲು ಸಾಧ್ಯ. ಶಾಶ್ವತ ವ್ಯವಸ್ಥೆ ಅಥವಾ ಬಾಡಿಗೆ ಮನೆ ಮಾಡಿ ಕೊಡಲು ಅವಕಾಶವಿಲ್ಲ. ಜನ ತಾಳ್ಮೆಯಿಂದ ವರ್ತಿಸಿದಲ್ಲಿ ಮುಂದಿನ ಕ್ರಮ ನಿರ್ವಹಿಸಲು ಸಾಧ್ಯ ಎಂದು ಸಹಾಯಕ ಕಮೀಷನರ್ ರವಿಚಂದ್ರ ನಾಯಕ್ ಹೇಳಿದರು.
ಹೋಂ ಗಾರ್ಡ್ಗಳ ನಿಯೋಜನೆ : ಕಡಲ್ಕೊರೆತ ಪ್ರದೇಶಗಳಿಗೆ 24 ಹೋಂಗಾರ್ಡ್ಗಳನ್ನು ಬುಧವಾರ ನಿಯೋಜಿಸಲಾಗಿದೆ. ಎಂಟು ಕಡೆಗಳಲ್ಲಿ ಮೂವರಂತೆ ನಿಲ್ಲಿಸಲಾಗಿದ್ದು, ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆಗಳು ಹಾಗೂ ಸಾರ್ವಜನಿಕರು ಸಮುದ್ರಕ್ಕೆ ಇಳಿಯದಂತೆ ನೋಡುವಂತೆ ಹೋಂಗಾರ್ಡ್ ಕಮಾಂಡೆಂಟ್ ಡಾ. ಮುರಲೀಮೋಹನ್ ಚೂಂತಾರು ಹೇಳಿದ್ದಾರೆ.


