UN NETWORKS
ಉಳ್ಳಾಲ : ಉಳ್ಳಾಲ ಭಾಗದಲ್ಲಿ ಶಾಶ್ವತ ನೀರು ಪೂರೈಕೆ ನಿಟ್ಟಿನಲ್ಲಿ 200 ಕೋಟಿಯ ಯೋಜನೆ ರೂಪಿಸಲಾಗಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. ಮಂಚಿಲದಲ್ಲಿ ನಿರ್ಮಿಸಲಾಗಿರುವ ಕೊಳವೆಬಾವಿಯಲ್ಲಿ ಉತ್ತಮ ನೀರು ಲಭಿಸಿ ಸ್ಥಳೀಯರ ಬಾಯಾರಿಕೆ ನೀಗಿಸುವಲ್ಲಿ ಸಹಕಾರಿಯಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಹೇಳಿದರು.

ಉಳ್ಳಾಲ ನಗರಸಭಾ ವ್ಯಾಪ್ತಿಯ 14ನೇ ವಾರ್ಡ್ ಮಂಚಿಲದಲ್ಲಿ 12.5ಲಕ್ಷ ವೆಚ್ಚದಲ್ಲಿ ಕೊಳವೆ ಬಾವಿ ಮತ್ತು ಮಂಚಿಲದಿಂದ ಮಾರ್ಗತಲೆವರೆಗೆ ಪೈಪ್ಲೈನ್ ವ್ಯವಸ್ಥೆ ಬುಧವಾರ ಸಾರ್ವಜನಿಕರಿಗೆ ಸಮರ್ಪಿಸಿ ಮಾತನಾಡಿದರು. ಮಂಚಿಲ, ಮಾರ್ಗತ್ತಲೆ, ಅಲೇಕಳ ಮತ್ತು ಉಳಿಯ ಪರಿಸರದಲ್ಲಿ ಶೈಕ್ಷಣಿಕ, ಧಾರ್ಮಿಕ ಕೇಂದ್ರಗಳಿದ್ದು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶ. ಈ ಪ್ರದೇಶದಲ್ಲಿ ಹಿಂದೆ ನೀರಿದ್ದರೂ ಸಮರ್ಪಕವಾಗಿಲ್ಲದ ಕಾರಣ ಸ್ಥಳೀಯ ಕೌನ್ಸಿಲರ್ ಅಯೂಬ್ ಹಾಗೂ ಇತರರ ಮನವಿ ಮೇರೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಮಂಚಿಲ ಮಸೀದಿಯ ಖತೀಬ್ ಇಸ್ಮಾಯಿಲ್ ಬುಖಾರಿ ದುವಾ ಮಾಡಿದರು. ವಾರ್ಡಿನ ಸದಸ್ಯರಾದ ಅಯ್ಯೂಬ್ ಮಂಚಿಲ, ನಗರಸಭೆ ಸದಸ್ಯರಾದ ವೀಣಾ, ಬಾಝಿಲ್ ಡಿಸೋಜ, ಮಂಚಿಲ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಮಕ್ಸೂದ್ ಖಾದರ್, ಸಫರ್ ಸ್ಪೋರ್ಟ್ಸ ಮತ್ತು ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷ ನಝೀರ್ ಹುಸೈನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್, ಮಾಜಿ ಅಧ್ಯಕ್ಷ ಸಫರ್ ಬಿ.ಎಂ.ಮುಸ್ತಫ, ಪ್ರಮುಖರಾದ ಯು.ಕೆ.ಯೂಸುಫ್, ರಫೀಕ್ ಯು.ಪಿ, ನಗರಸಭೆ ಆಯುಕ್ತ ಶ್ರೀನಿವಾಸಮೂರ್ತಿ, ಬಾವ ಹಾಜಿ, ಯು.ಎಂ.ಇಸ್ಮಾಯಿಲ್, ಹೆರಾಲ್ಡ್ ಡಿಸೋಜ, ಜಾನೆಟ್ ಡಿಸೋಜ, ಅರುಣ್ ಡಿಸೋಜ, ಗುತ್ತಿಗೆದಾರ ಯು.ವಿಜಯ, ನಝೀರ್ ಕೋಡಿ, ಎಂ.ಮುಸ್ತಫ ಮಾರ್ಗತಲೆ, ಆಸಿಫ್ ಮಾರ್ಗತಲೆ, ಮನ್ಸೂರ್ ಮಂಚಿಲ, ಖಾದರ್ ಮಂಚಿಲ, ಶರೀಫ್ ಮಂಚಿಲ, ಅಹ್ಮದ್ ಬಾವ ಕೊಟ್ಟಾರ ಮೊದಲಾದವರು ಉಪಸ್ಥಿತರಿದ್ದರು.
`ವಾರ್ಡಿನಲ್ಲಿ ಹಲವು ಸಮಯಗಳಿಂದ ಕುಡಿಯುವ ನೀರಿಗೆ ಸಮಸ್ಯೆಯಿತ್ತು, ಈ ಬಗ್ಗೆ ಸಚಿವರಲ್ಲಿ ಮಾಡಿದ ಮನವಿಗೆ ಸ್ಪಂದನೆ ಸಿಕ್ಕಿದೆ, ಮಂಚಿಲದಲ್ಲಿ ನಿರ್ಮಿಸಿದ ಕೊಳವೆಬಾವಿಯಲ್ಲಿ ಉತ್ತಮ ನೀರು ಸಿಕ್ಕಿರುವುದರಿಂದ, ಸ್ಥಳೀಯರ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ’.
ಅಯೂಬ್ ಮಂಚಿಲ, ಉಳ್ಳಾಲ ನಗರಸಭಾ ಸದಸ್ಯ


