UN NETWORKS
ಉಳ್ಳಾಲ: ಯುಡಿಎಫ್ ಬೆಂಬಲಿತ ಅಭ್ಯರ್ಥಿ ರಾಜಮೋಹನ್ ಉನ್ನಿತ್ತಾನ್ ಕಾಸರಗೋಡು ಸಂಸದರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಮಂಜೇಶ್ವರದ ಲೀಗ್ ಕಾರ್ಯಕರ್ತರು ಧ್ವಜದೊಂದಿಗೆ ಕರ್ನಾಟಕ ಗಡಿಭಾಗ ತಲಪಾಡಿಯಲ್ಲಿ ವಿಜಯೋತ್ಸವ ಆಚರಿಸುವುದನ್ನು ವಿರೋಧಿಸಿದ ಉಳ್ಳಾಲ ಪೊಲೀಸರ ವಿರುದ್ಧ ಯುಡಿಎಫ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ, ಪೊಲೀಸ್ ವಾಹನ ಜಖಂಗೊಳಿಸಲು ಯತ್ನಿಸಿರುವ ಘಟನೆ ತಲಪಾಡಿ ಟೋಲ್ ಗೇಟ್ ಸಮೀಪ ಶನಿವಾರ ಸಂಜೆ ಸಂಭವಿಸಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.





ಕೇರಳದ ತೂಮಿನಾಡು ಕಡೆಯಿಂದ ಕರ್ನಾಟಕದ ತಲಪಾಡಿ ಟೋಲ್ ಸಮೀಪಕ್ಕೆ ಮುಸ್ಲಿಂ ಲೀಗ್ ಧ್ವಜ ಹಾರಿಸಿಕೊಂಡು ಬಂದ ನಾಲ್ವರು ಬೈಕ್ ಸವಾರರು ಘೋಷಣೆಗಳನ್ನು ಕೂಗುತ್ತಾ ವಿಜಯವನ್ನು ಆಚರಿಸುತ್ತಿದ್ದರು. ಇದನ್ನು ತಲಪಾಡಿ ನಿವಾಸಿಗಳು ವಿರೋಧಿಸಿದಾಗ ಎರಡು ಕಡೆಯಿಂದ ಮಾತಿನಚಕಮಕಿ ನಡೆದು ಎರಡು ಬೈಕ್ ವಾಪಸ್ಸಾಗಿತ್ತು. ಸ್ವಲ್ಪ ಹೊತ್ತಿನ ನಂತರ ಕೇರಳದ ಕೆಎಸ್ ಆರ್ಪಿ ಪೊಲೀಸರ ವಾಹನ ತಲಪಾಡಿಗೆ ಬಂದು ಅಲ್ಲಿ ಸೇರಿದ್ದ ಯುವಕರನ್ನು ` ತೆರಳುವಂತೆ ಸೂಚಿಸಿದ್ದಾರೆ. ಆ ಬಳಿಕ ಮತ್ತೆ ಸುಮಾರು 50 ಬೈಕುಗಳಲ್ಲಿ ಮುಸ್ಲಿಂ ಲೀಗ್ ಧ್ವಜ ಹಿಡಿದುಕೊಂಡು ತಲಪಾಡಿಗೆ ತಂಡ ಬರುತ್ತಿರುವುದಾಗಿ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ತಕ್ಷಣಕ್ಕೆ ತಲಪಾಡಿ ಭಾಗಕ್ಕೆ ಆಗಮಿಸಿದ್ದಾರೆ. ಈ ವೇಳೆ ಬೈಕುಗಳಲ್ಲಿ ಇದ್ದ ಲೀಗ್ ಕಾರ್ಯಕರ್ತರು ಕರ್ನಾಟಕ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗು ವಾತಾವರಣ ನಿರ್ಮಾಣವಾಯಿತು. ಉಳ್ಳಾಲ ಠಾಣೆಗೆ ಸೇರಿದ ಸಾಗರ ರಕ್ಷಾ ಕವಚ ವಾಹನವನ್ನು ಜಖಂಗೊಳಿಸಲು ತಂಡ ಯತ್ನಿಸಿತ್ತು. ಈ ವೇಳೆ ಕೆರಳಿದ ಪೊಲೀಸರು ಲಾಠಿ ಚಾರ್ಜ್ ಆರಂಭಿಸಿದಾಗ ವಾಹನಗಳನ್ನು, ಧ್ವಜಗಳನ್ನು ಬಿಟ್ಟು ಲೀಗ್ ಕಾರ್ಯಕರ್ತರು ಓಡಿ ಪರಾರಿಯಾದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನೆ ಸಂಬಂಧ ಹಲವು ದ್ವಿಚಕ್ರ ವಾಹನಗಳು ಹಾಗೂ ಧ್ವಜಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಸ್ ಗೆ ಕಲ್ಲು : ಚಿಕ್ಕಮಗಳೂರಿನ ಮೂಡಿಗೆರೆಯಿಂದ ತ್ರಿಕ್ಕರಿಪುರ ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದ ಮಂದಿಯಿದ್ದ ಕರ್ನಾಟಕ ಸಾರಿಗೆ ಬಸ್ಸಿಗೆ ಗಡಿಪ್ರದೇಶದಲ್ಲಿ ದುಷ್ಕರ್ಮಿಗಳು ಕಲ್ಲೆಸೆದು ಗಾಜು ಪುಡಿಗಟ್ಟಿದ್ದಾರೆ. ಮುಖಕ್ಕೆ ಬಟ್ಟೆ ಕಟ್ಟಿ ಕೈಯಲ್ಲಿ ಮುಸ್ಲಿಂ ಲೀಗ್ ಧ್ವಜ ಹಿಡಿದುಕೊಂಡು ಬಂದ ಯುವಕರ ತಂಡ ಬಸ್ಸಿನ ಗಾಜಿಗೆ ಕಲ್ಲು ತೂರಾಟ ನಡೆಸಿದೆ. ಘಟನೆಯಿಂದ ಬಸ್ಸಿನಲ್ಲಿದ್ದ ಮಹಿಳೆಯರು, ಮಕ್ಕಳು ಗಾಬರಿಗೊಂಡಿದ್ದಾರೆ ಎಂದು ಬಸ್ಸಿನಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಅವರು ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಕೇರಳ ಪೊಲೀಸರಿಗೆ, ಉಳ್ಳಾಲ ಪೊಲೀಸರಿಗೆ ಸೂಚಿಸಿದರು.
ಸ್ಥಳದಲ್ಲಿ ಡಿಸಿಪಿ ಹನುಮಂತರಾಯ, ಎಸಿಪಿ ರಾಮರಾವ್, ಎಸ್.ಐ ಗೋಪಿಕೃಷ್ಣ ಟಿ.ಆರ್, ಎಸ್.ಐ ಗುರುವಪ್ಪ ಕಾಂತಿ ಸಹಿತ ನಾಲ್ಕು ಕೆಎಸ್ ಆರ್ ಪಿ ಪೊಲೀಸ್ ಪಡೆಯನ್ನು ಸೂಕ್ತ ಬಂದೋಬಸ್ತಿಗೆ ನಿಯೋಜಿಸಲಾಗಿದೆ


