ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಜಿಲ್ಲೆಯಲ್ಲಿ ತುಳು ಭಾಷೆ ಆಡುಭಾಷೆಯಾದರೆ, ತುಳು ಚಿತ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ತುಳುವರ ಮನ ಗೆಲ್ಲುತ್ತಿದೆ. ಆದರೆ ತುಳು ಲಿಪಿಗೆ ಈವರಗೆ ಯಾವುದೇ ಮಾನ್ಯತೆ ದೊರೆತಿಲ್ಲ. ಆದರೆ ಅದಕ್ಕೂ ಮನ್ನಣೆ ಸಿಗಬೇಕು ಅನ್ನುವ ದೃಷ್ಟಿಯನ್ನು ಇಟ್ಟುಕೊಂಡು ಹಲವು ರೀತಿಯಲ್ಲಿ ಶ್ರಮಿಸುತ್ತಿರುವ ಉಳ್ಳಾಲದ ನಿವಾಸಿಯೋರ್ವರು ತುಳು ಲಿಪಿಯಲ್ಲಿ ತಮ್ಮ ಬೈಕಿನ ನಂಬರ್ ಪ್ಲೇಟನ್ನು ಹಾಕುವ ಮೂಲಕ ತುಳು ಲಿಪಿಯಲ್ಲಿನ ಅಂಕಿ ಅಂಶದ ಬಗ್ಗೆಯೂ ಪರಿಚಯ ಮಾಡಲು ಹೊರಟಿದ್ದಾರೆ.
ಉಳ್ಳಾಲಬೈಲು ನಿವಾಸಿ ಜಿ.ವಿ.ಸುಧಾಕರ್ ಉಳ್ಳಾಲ್ ಅವರು ತಮ್ಮ ಬೈಕಿನ ನೋಂದಾವಣಿ ಸಂಖ್ಯೆಯನ್ನು ತುಳು ಅಂಕಿ ಲಿಪಿಯಲ್ಲಿ ಹಾಕಿದ್ದಾರೆ. ತುಳು ಭಾಷೆ ಅಧ:ಪತನಕ್ಕೆ ಹೋಗಿದೆ. ಇತ್ತೀಚೆಗೆ ನಡೆದಂತಹ ವಿಶ್ವ ತುಳುವೆರೆ ಸಮ್ಮೇಳನದಂತಹ ಕಾರ್ಯಕ್ರಮದಿಂದಾಗಿ ತುಳು ಭಾಷೆಯ ಲಿಪಿಯೂ ಇರುವುದರ ಪರಿಚಯ ಜನರಿಗೆ ಆಗಿತ್ತು. ಅಲ್ಲದೆ ಲಿಪಿಯ ಪರಿಚಯ ಯುವಪೀಳಿಗೆಗೆ ಆಗಬೇಕು ಅನ್ನುವ ದೃಷ್ಟಿಯನ್ನು ಇಟ್ಟುಕೊಂಡು ತುಳು ಪಠ್ಯಪುಸ್ತಕವನ್ನು ಜಿ.ವಿ. ಸುಧಾಕರ್ ಅವರು ಬಿಡುಗಡೆಗೊಳಿಸಿ, ಅದರ ಕಲಿಕಾ ತರಬೇತಿಯನ್ನು ಬೆಂಗಳೂರು, ಕಾರ್ಕಳ, ಮಂಗಳೂರಿನ ತುಳು ಅಕಾಡೆಮಿಯಲ್ಲಿ ನಡೆಸಿದ್ದಾರೆ. ಇದೀಗ ತುಳು ಲಿಪಿ ಕಲಿಕೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬೈಕಿನ ನಂಬರ್ ಪ್ಲೇಟಿಗೆ ತುಳು ಅಂಕಿ ಲಿಪಿಯನ್ನು ಅಳವಡಿಸಿದ್ದಾರೆ. ಇದು ಇನ್ನಷ್ಟು ಜನರಿಗೆ ಪ್ರೇರಣೆಯಾಗಿ, ತುಳು ಲಿಪಿಯನ್ನು ಕಲಿಯುವಂತಾಗಲಿ ಅನ್ನುವ ಆಶಯ ಸುಧಾಕರ್ ಅವರದ್ದಾಗಿದೆ.








