UN NETWORKS
ಉಳ್ಳಾಲ : ಸಾಕ್ಷರತಾ ಆಂದೋಲನ ಸಂದರ್ಭ, ಮುನ್ನೂರು ಯುವಕ ಮಂಡಲ ಉಳ್ಳಾಲದಾದ್ಯಂತ ಇಡೀ ಪ್ರದೇಶದ ಪ್ರಾತಿನಿಧ್ಯ ವಹಿಸಿ ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡಂತಹ ಏಕೈಕ ಸಂಸ್ಥೆ. ಪ್ರಜಾಸತ್ತಾತ್ಮಕ ನಿಲುವಿನ ತೀರ್ಮಾನದಿಂದ ಯುವಕ ಮಂಡಲ ಸುವರ್ಣ ಸಂಭ್ರಮವನ್ನು ಯಶಸ್ವಿಯಾಗಿ ಆಚರಿಸುವಂತಾಗಿದೆ ಎಂದು ಪತ್ರಕರ್ತ ಹಾಗೂ ಸಿನಿಮಾ ನಟ ಮೈಮ್ ರಾಮದಾಸ್ ಹೇಳಿದರು.

ಅವರು ಕುತ್ತಾರುಪದವು ಮುನ್ನೂರು ಯುವಕ ಮಂಡಲ ಕಲಾವೇದಿಕೆಯಲ್ಲಿ ಭಾನುವಾರ ಜರಗಿದ ಕುತ್ತಾರು ಮುನ್ನೂರು ಯುವಕ ಮಂಡಲ ಇದರ ಸುವರ್ಣ ಮಹೋತ್ಸವದ ಸಂಭ್ರಮದ 11ನೇ ಕಾರ್ಯಕ್ರಮ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದೆ ಶಿಕ್ಷಣ ಕೊಡುವ ಉದ್ಧೇಶದಿಂದ ಯುವಕಮಂಡಲಗಳು ಹುಟ್ಟಿಕೊಂಡಿತ್ತು. ಅನೇಕ ಶಿಕ್ಷಣ ವಂಚಿತರಿಗೆ ಶಿಕ್ಷಣದ ತರಬೇತಿಯ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವಂತಹ ಪ್ರಯತ್ನ ಉಳ್ಳಾಲ ಭಾಗದಲ್ಲಿ ಮುನ್ನೂರು ಯುವಕ ಮಂಡಲದ ಮೂಲಕ ಆಗಿದೆ. ಸದಸ್ಯರ ಬದ್ಧತೆಯಿಂದಾಗಿ ಯುವಕಮಂಡಲ ವರ್ಷಗಳಿಂದ ಬೆಳೆಯಲು ಸಾಧ್ಯವಾಗಿದೆ. ಮುಂದೆಯೂ ಸಮಾಜಮುಖಿ ಕಾರ್ಯಚಟುವಟಿಕೆಗಳಿಂದ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮ ಉದ್ಘಾಟಿಸಿದ ದ.ಕ ಜಿಲ್ಲಾ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಯಾದವ ಶೆಟ್ಟಿ ಮಾತನಾಡಿ ಜಿಲ್ಲೆಯ ಕೆಲವೇ ಯುವಕಸಂಘಗಳಲ್ಲಿ ಮುನ್ನೂರು ಯುವಕ ಮಂಡಲ ನಿರಂತರ ಚಟುವಟಿಕೆಗಳ ಮೂಲಕ ಮನುಕುಲದ ಕಾರ್ಯಗಳ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಸಾಮಾಜಿಕ, ರಾಜಕೀಯ ಪ್ರಜ್ಞೆಯನ್ನು ಮೂಡಿಸುವ ಕೆಲಸದ ಜೊತೆಗೆ ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ಸಂಘ, ಜಾತಿ, ಧರ್ಮ ಬದಿಗಿಟ್ಟು ಸಮಾಜದ ಒಳಿತಿಗಾಗಿ ದುಡಿದ ಯುವಕ ಮಂಡಲ. ಕೇವಲ ಧರ್ಮ , ವ್ಯಕ್ತಿಯ ಆಧಾರದಲ್ಲಿ ದೇಶ ಕಟ್ಟಲು ಅಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ. ಚಿಂತನೆ ಇಲ್ಲದ ಕ್ರಿಯೆ ಅಮಾನುಷ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕಲಾವಿದ ಉಮೇಶ್ ಬೋಳಾರ್, ರಾಜಶ್ರೀ.ಯಸ್ ಶೆಣೈ, ವಿದುಷಿ ನಯನ, ನವೀನ್ ಪಿಲಾರ್, ಪತ್ರಕರ್ತ ಮೋಹನ್ ಕುತ್ತಾರ್, ರೋಷನ್ ಫೆರಾವೋ, ದಿನೇಶ್ ಅತ್ತಾವರ್, ದೇವದಾಸ್ ಸನಿಲ್ ಮುಂಡೋಳಿ, ತ್ಯಾಂಪು ಮೂಲ್ಯ ದೆಪ್ಪೆಲಿಮಾರ್, ರಾಮಪ್ಪ ಮೂಲ್ಯ, ಭೋಜ ಶೆಟ್ಟಿ ಕುತ್ತಾರು, ಕೆ.ಆರ್.ನಾಥ್, ಶ್ರೀನಿವಾಸ್ ಅಶೋಕ್ ಶೆಟ್ಟಿ , ಪದ್ಮಾವತಿ ಯಸ್ ಶೆಟ್ಟಿ, ಸುಹಾಸಿನಿ ಬಬ್ಬುಕಟ್ಟೆ, ಹೇಮಚಂದ್ರ ಬಬ್ಬುಕಟ್ಟೆ, ಕುಮಾರಿ ಭವ್ಯಾ, ವೀಕ್ಷಿತಾ, ಕೃತಿಕಾ ಆಳ್ವ, ಶೇಖ್ ಶಹೀಂ ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ, ಕರ್ನಾಟಕ ಲೋಕಾಯುಕ್ತ ಇದರ ವಿಶೇಷ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ, ಆತ್ಮಶಕ್ತಿ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಚಿತ್ತರಂಜನ್ ಬೋಳಾರ, ಕೊಲ್ಯ ಶ್ರೀ ಕುಂಭೇಶ್ವರ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲ್ ಸಾಲ್ಯಾನ್ ಕಣ್ವತೀರ್ಥ, ಉದ್ಯಮಿ ಬಾಲಕೃಷ್ಣ ಕುಂಜತ್ತೂರು, ಗೌರವಾಧ್ಯಕ್ಷ ಹರೀಶ್ ಮುಂಡೋಳಿ , ಮುನ್ನೂರು ಯುವಕ ಮಂಡಲದ ಅಧ್ಯಕ್ಷ ಎಸ್.ಶಶೀಂದ್ರ ಕುಕ್ಯಾನ್ ಉಪಸ್ಥಿತರಿದ್ದರು.

ಜಯ ದೇಸೋಡಿ ಸ್ವಾಗತಿಸಿದರು. ಕೃಷ್ಣಪ್ಪ ಸಾಲ್ಯಾನ್ ಪ್ರಸ್ತಾವನೆಗೈದರು. ಮನೋಹರ ಕಾರ್ಯಕ್ರಮ ನಿರೂಪಿಸಿದರು. ಐತಪ್ಪ .ಕೆ ವಂದಿಸಿದರು.


