ಉಳ್ಳಾಲ್‌ನ್ಯೂಸ್ ಡೆಸ್ಕ್
ಉಳ್ಳಾಲ: ಅಪ್ರಾಪ್ತೆಯೊರ್ವಳು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂಪಲ ಕೃಷ್ಣನಗರದಲ್ಲಿ ಬುಧವಾರ ನಸುಕಿನ ಜಾವ ಸಂಭವಿಸಿದ್ದು, ಆಕೆ ಬರೆದಿಟ್ಟಿರುವ ಡೆತ್ ನೋಟಲ್ಲಿ ಪೊಲೀಸ್ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉಲ್ಲೇಖಿಸಿದ್ದಾಳೆ.
ಕೃಷ್ಣನಗರ ನಿವಾಸಿ ನಿವೃತ್ತ ಶಿಕ್ಷಕಿ ಜಯಂತಿ ಎಂಬವರ ಸಾಕುಪುತ್ರಿ ಜ್ಯೋತಿ (೧೭) ಆತ್ಮಹತ್ಯೆಗೈದಿರುವ ಬಾಲಕಿ. ಬುಧವಾರ ನಸುಕಿನ ಜಾವ ತಾಯಿ ಜಯಂತಿ ಅವರು ಕುಂಪಲದ ಕೇಸರಿ ಮಿತೃ ವೃಂದದಲ್ಲಿ ನಡೆಯುತ್ತಿದ್ದ ಯೋಗ ತರಬೇತಿಗೆ ತೆರಳಿದಾಗ ಜ್ಯೋತಿ ಕೃತ್ಯ ಎಸಗಿದ್ದಾಳೆ. ಮನೆಗೆ ವಾಪಸ್ಸಾದಾಗ ಮನೆಯಲ್ಲಿ ಕೋಣೆಯ ಬಾಗಿಲು ಮುಚ್ಚಿದ್ದು, ನೆರೆಮನೆಯವರನ್ನು ಕರೆದು ಬಾಗಿಲು ಒಡೆದು ನೋಡಿದಾಗ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಗೈದ ಸ್ಥಿತಿಯಲ್ಲಿ ಜ್ಯೋತಿ ಮೃತದೇಹ ಪತ್ತೆಯಾಗಿದೆ. ಸೋಮೇಶ್ವರ ಪರಿಜ್ಞಾನ ಕಾಲೇಜಿನಲ್ಲಿ ಪಿಯುಸಿ ಮುಗಿಸಿರುವಾಕೆ, ಇದೀಗ ಬೆಸೆಂಟ್ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ಪದವಿಗೆ ಸೇರ್ಪಡೆಗೊಂಡು, ಇನ್ನಷ್ಟೇ ಕಾಲೇಜು ಆರಂಭವಾಗಬೇಕಿದೆ.
ಪ್ರಿಯತಮ ಪೊಲೀಸ್ ಕಿರುಕುಳ ಆರೋಪ :
ಆಕೆ ಬರೆದಿಟ್ಟಿರುವ ಡೆತ್ ನೋಟಲ್ಲಿ ಫೇಸ್ ಬುಕ್ ನಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿರುವ ಪ್ರವೀಣ್ ಸಾಲ್ಯಾನ್ ಎಂಬಾತನ ಪರಿಚಯವಾಗಿ , ಮೊಬೈಲ್ ನಂಬರನ್ನು ನೀಡಿದ್ದೆನು. ಬಳಿಕ ಪ್ರೀತಿ ಮಾಡಲು ಆರಂಭಿಸಿದ್ದು, ಒಂದು ಬಾರಿ ಮುಖಾಮುಖಿ ಮಾತನಾಡಿದ್ದೆ. ಬಳಿಕ ಸಂಬಂಧಿಕರಲ್ಲಿ , ಗೆಳೆಯರಲ್ಲಿ ಮಾತನಾಡದಂತೆ ಒತ್ತಡ ಹೇರುತ್ತಿದ್ದ. ಅಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನು ಒಡ್ಡುತ್ತಿದ್ದನಲ್ಲದೆ, ರೂ.೧ ಲಕ್ಷ ಹಣ, ಮತ್ತು ಚಿನ್ನಕ್ಕಾಗಿ ಬೆದರಿಸಿದ್ದನೆನ್ನಲಾಗಿದೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟಲ್ಲಿ ಬರೆದಿಟ್ಟಿದ್ದಾಳೆ.
ಸ್ಥಳಕ್ಕೆ ಎಸಿಪಿ ಕಲ್ಯಾಣಿ ಸೆಟ್ಟಿ, ಉಳ್ಳಾಲ ಠಾಣಾ ಧಿಕಾರಿ ಸವಿತೃ ತೇಜ, ಎಸ್.ಐ ಭಾರತಿ ಭೇಟಿ ನೀಡಿ ತನಿಖೆ ಕೈಗೆತ್ತಿಕೊಂಡಿದ್ದಾರೆ.






