UN NETWORKS
ಮುಡಿಪು : ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ ಅವರಂತಹ ಸಮರ್ಥ ನಾಯಕರನ್ನು ಮೂಲೆಗುಂಪು ಮಾಡಿದ್ದೇ ಮೋದಿ ಅವರ ಸಾಧನೆ ಎಂದು ಸಂಸದ, ಚಿತ್ರನಟ ಶತ್ರುಘ್ನ ಸಿನ್ಹ ಹೇಳಿದರು.











ಮುಡಿಪು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಮುಡಿಪು ಜಂಕ್ಷನ್ ನಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು ವಾಜಪೇಯಿ ಒಳ್ಳೆಯ ಸಮರ್ಥ ಆಡಳಿತಗಾರ ಸಾವನ್ನಪ್ಪಿದ್ದಾರೆ. ಅಡ್ವಾಣಿ , ಯಶವಂತ ಸಿನ್ಹ ಅವರಂತಹ ಧೀಮಂತ ನಾಯಕರ ಸ್ಥಿತಿ ನಿಮಗೆಲ್ಲರಿಗೂ ಗೊತ್ತಿದೆ. ಅಷ್ಟಕ್ಕೂ ಇಂದಿರಾ ಗಾಂಧಿಯವರು ಜೀವಿಸಿದ್ದರೆ ನಾನು ಕಾಂಗ್ರೆಸ್ಸಿನಲ್ಲೇ ಇರುತ್ತಿದ್ದೆ. ಹಲವು ಕಾರಣದಿಂದ ದೂರವಾದೆ. ಇದೀಗ ಡೇರಿಂಗ್, ಡ್ಯಾಶಿಂಗ್ ಯುವ ನಾಯಕ ರಾಹುಲ್ ಗಾಂಧಿ ಸಾರಥ್ಯ ಕಾಂಗ್ರೆಸ್ ಗೆ ಇರುವುದು ಯುವಜನತೆಯ ನಿರೀಕ್ಷೆ ಹೆಚ್ಚಿಸಿದೆ ಎಂದು ಮಾಜಿ ಸಂಸದ, ಚಿತ್ರನಟ ಶತ್ರುಘ್ನ ಸಿನ್ಹ ಹೇಳಿದರು. ಪಾಟ್ನಾದಿಂದ ಬಂದು ಸೌತ್ ಇಂಡಿಯಾದ ಮಂಗಳೂರು ಕ್ಷೇತ್ರದ ಮುಡಿಪಿನಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದೇನೆ. ಯಾವುದೇ ವಿಷಯಕ್ಕೆ ಬಂದರೂ ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ಮುಖ್ಯ, ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ. ಆದರೆ ಬಿಜೆಪಿ ಅದಕ್ಕೆ ತದ್ವಿರುದ್ಧವಾಗಿದೆ ಎಂದರು.
ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಕೇವಲ ಒಂದು ವರ್ಷದ ಅವಧಿಯಲ್ಲಿ ರಾಜಸ್ತಾನ, ಛತ್ತಿಸ್ ಗಡ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಆಡಳಿತ ತರುವ ಮೂಲಕ ಚಮತ್ಕಾರ ಮಾಡಿದ್ದಾರೆ. ದೇಶಕ್ಕೆ ಮಿಥುನ್ ರೈ ಅವರಂತಹ ಯುವ ನಾಯಕರ ಅಗತ್ಯವಿದ್ದು ಅವರನ್ನು ನೀವು ಇಲ್ಲಿ ಗೆಲ್ಲಿಸಿಕೊಟ್ಟರೆ ಅಲ್ಲಿ ರಾಹುಲ್ ಗಾಂಧಿ ಪ್ರಧಾನಿ ಪಟ್ಟಕ್ಕೇರಲಿದ್ದಾರೆ ಎಂದು ನುಡಿದರು. ಕೇಂದ್ರದಲ್ಲಿ ಮೋದಿ ಅವರದ್ದು ಒನ್ ಮ್ಯಾನ್ ಶೋ, ಟು ಮ್ಯಾನ್ ಆರ್ಮಿ ಎಂದು ಮೋದಿ ಹಾಗೂ ಅಮಿತ್ ಶಾ ಅವರನ್ನು ಕುಟುಕಿ ಮಾತನಾಡಿ, ನಾನು ಜಾತ್ಯತೀತ ತತ್ವದಲ್ಲಿ ಸರ್ವಧರ್ಮದಲ್ಲಿ ನಂಬಿಕೆ ಇರುವವನು. ಮೋದಿ ಆಡಳಿತದಲ್ಲಿ ಜಾತ್ಯತೀತ ತತ್ವ ಪಾಲನೆ ಆಗುತ್ತಿಲ್ಲ, ಪ್ರಜಾಪ್ರಭುತ್ವದ ನೆಲೆಯಲ್ಲಿ ಸರಕಾರ ನಡೆಯುತ್ತಿರಲಿಲ್ಲ. ಅದಕ್ಕಾಗಿ ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ನ ಸಮರ್ಥ ನಾಯಕ ಭಾವೀ ಪ್ರಧಾನಿ ಎಂದು ಬಿಂಬಿಸಲ್ಲಪಟ್ಟ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸೇರಿದೆ
ಎಂದರು. ಮೋದಿ ಕಳೆದ ಐದು ವರ್ಷದಲ್ಲಿ ತನ್ನ ವೈಯಕ್ತಿಕ ವರ್ಛಸ್ಸು ವೃದ್ಧಿಸಲು ಹತ್ತಿರ ಹತ್ತಿರ 90ಬಾರಿ ವಿದೇಶ ಪ್ರಯಾಣ ಮಾಡಿದ್ದಾರೆ. ಈ ಬಾರಿಯ ಚುನಾವಣಾ ಪ್ರಚಾರಕ್ಕಾಗಿ 10ಸಾವಿರ ಕೋಟಿ ರೂ. ವ್ಯಯಿಸಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಸುಧೀಂದ್ರ ಕುಮಾರ್ ಮರೋಳಿ ಮಾತನಾಡಿ ಈ ಬಾರಿಯ ಮಂಗಳೂರಿನ ಚುನಾವಣೆ ಮುಖ ಇರುವ ಮತ್ತು ಮುಖ ಇರದವರ ನಡುವಿನ ಚುನಾವಣೆ. ಬಿಜೆಪಿ ಅಭ್ಯರ್ಥಿ ತನ್ನ ಪ್ರಚಾರದುದ್ದಕ್ಕೂ ನನ್ನ ಮುಖ ನೋಡಿ ಓಟು ಕೊಡಬೇಡಿ, ಮೋದಿಯವರ ಮುಖನೋಡಿ ಓಟು ಕೊಡಿ ಎಂದು ಮತ ಕೇಳುತ್ತಿದ್ದು ಅದರರ್ಥ ಅವರು ತನ್ನ ಸೋಲನ್ನು ಒಪ್ಪಿಕೊಂಡಾಗಿದೆ ಎಂದು ನುಡಿದರು.
ಚುನಾವಣೆ ಎದುರಿಸುವಾಗ ಮೊದಲು ಚಾಯ್ ವಾಲಾ ಆದ್ರು. ಬಳಿಕ ಪಕೀರ ಅಂದ್ರು. ಪಕೀರ ಹತ್ತು ಲಕ್ಷ ರೂ. ಕೋಟು ಹಾಕ್ತಾರೆ, ದಿನಕ್ಕೆ ಮೂರು ಬಾರಿ ವಸ್ತ್ರ ಬದಲಿಸ್ತಾರೆ, ಮೇಕಪ್ ಗೆಂದೇ ತಂಡ ಇಟ್ಟುಕೊಂಡಿದ್ದಾರೆ. ಜನಪ್ರತಿನಿಧಿಗಳು ಮೇಕಪ್ ಮಾಡ್ತಾರೆ ಎಂಬುದು ನನಗೆ ಗೊತ್ತಾದದ್ದೆ ಮೋದಿ ಅವರಿಂದ, ಈಗ ಮೈ ಹೂಂ ಚೌಕೀದಾರ ಅಂತಿದ್ದಾರೆ. ಅದೇ ಚೌಕಿದಾರ ಹೆಸರನ್ನು ಜೈಲಿಗೆ ಹೋಗಿ ಬಂದ ಜನಾರ್ದನ ರೆಡ್ಡಿ ಹೇಳಿಕೊಂಡು ತಿರುತ್ತಿರುವುದು ನಾಚಿಗೆಕೇಡು ಎಂದು ನುಡಿದರು.

ಸಚಿವ ಯು. ಟಿ. ಖಾದರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕ ಶಕುಂತಲಾ ಶೆಟ್ಟಿ, ವಕ್ಫ್ ಜಿಲ್ಲಾಧ್ಯಕ್ಷ ಯು. ಕೆ. ಮೋನು, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಜೆಡಿಎಸ್ ಮುಖಂಡ ಎ.ಎ. ಹೈದರ್ ಪರ್ತಿಪ್ಪಾಡಿ, ವಿಜಯನಾಥ ವಿಠಲ ಶೆಟ್ಟಿ ಉಪಸ್ಥಿತರಿದ್ದರು.


