UN NETWORKS
ಉಳ್ಳಾಲ : ಬಿಜೆಪಿ ಅಭ್ಯರ್ಥಿ ನಳಿನ್ ಕಟೀಲ್ ನಾಲಾಯಕ್, ಗೂಂಡಾ ಸಂಸದ, ಈ ನಿಟ್ಟಿನಲ್ಲಿ ಎಲ್ಲರೂ ಬಿಜೆಪಿಯನ್ನು ಸೋಲಿಸುವ ಪ್ರಯತ್ನ ಮಾಡಬೇಕಿದೆ ಎಂದು ಸಿಪಿಎಂ ಪಕ್ಷದ ರಾಜ್ಯ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ ಹೇಳಿದರು.


ಸಿಪಿಎಂ ಉಳ್ಳಾಲ ವಲಯ ಸಮಿತಿ ಆಶ್ರಯದಲ್ಲಿ ತೊಕ್ಕೊಟ್ಟು ಕ್ಲಿಕ್ ಸಭಾಂಗಣದಲ್ಲಿ ಭಾನುವಾರ ಜರಗಿದ ರಾಜಕೀಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಐದು ವರ್ಷಗಳಿಗೊಮ್ಮೆ ಕಾಣುವ ಸಂಸದ ಜನಪರವಾಗಿರದೆ ಜನವಿರೋಧಿ ನೀತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಗೆ ಬೆಂಕಿ ಹಚ್ಚುವ ಘೋಷಣೆಗಳನ್ನು ಕೂಗುವ ಸಂಸದ ನಾಲಾಯಕ್ ಹಾಗೂ ಗೂಂಡಾ ಆಗಿದ್ದಾರೆ. ಇಂತಹ ಅಭ್ಯರ್ಥಿ ಹಾಗೂ ಬಿಜೆಪಿ ಪಕ್ಷವನ್ನು ಯಾರೂ ಬೆಂಬಲಿಸಬಾರದು ಎಂದ ಅವರು ಪ್ರಧಾನಿ ಮೋದಿ ತಮ್ಮ ಮೇಕಪ್ ಗೆ ರೂ.75,000 ಖರ್ಚು ಮಾಡುವವರು, ದೇಶದ ಕಾವಲುಗಾರ ಅನ್ನುತ್ತಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗಿದ್ದಾಗ ಅವರ ದಿನ ಖರ್ಚು ಕೇವಲ ರೂ.10. ಪ್ರಧಾನಿಯಾದ ಆರಂಭದಲ್ಲಿಯೇ ಅಮೆರಿಕಾ, ಪಾಕಿಸ್ತಾನದ ಪ್ರಧಾನಿಗಳನ್ನು ಕರೆಸುವ ಮೂಲಕ ಭಾರತದ ವಿದೇಶಾಂಗ ನೀತಿಯನ್ನೇ ಬದಲಾವಣೆಗೊಳಿಸಿದರು. ಹಿಂದಿನ ವಿದೇಶಾಂಗ ನೀತಿ ಜಗತ್ ಪ್ರಸಿದ್ಧವಾಗಿತ್ತು. ಸಾಮ್ರಾಜ್ಯಶಾಹಿ ದೇಶ ಅಮೆರಿಕಾಕ್ಕೆ ಬದ್ಧ ವಿರೋಧ ನೀತಿಯಲ್ಲಿತ್ತು. ಆದರೆ ಇದೀಗ ಅಮೆರಿಕಾದ ಪ್ರತಿ ಮಾತಿಗೆ ಧ್ವನಿ ತೆಗೆಯುವವರು ಭಾರತದ ಪ್ರಧಾನಿಯಾಗಿದ್ದಾರೆ. ಇರಾಕ್, ವೆನಿಜ್ಯುವೆಲಾ ಕಡಿಮೆ ದರದಲ್ಲಿ ಗ್ಯಾಸ್ ತರಲು ತೀರ್ಮಾನಿಸಿದಾಗ ಅದನ್ನು ಅಮೆರಿಕಾ ಪಡೆಯದಂತೆ ಭಾರತಕ್ಕೆ ಸೂಚಿಸಿತು. ದೇಶದ ಸರಕಾರಿ ಸಾಮ್ಯದ ಸಂಸ್ಥೆಗಳನ್ನು ಖಾಸಗೀಕರಣವನ್ನು ಮಾಡುವ ಮೂಲಕ ತಮಗೆ ಬೇಕಾದವರನ್ನು ಪ್ರಧಾನಿ ಮೋದಿ ಇನ್ನಷ್ಟು ಶ್ರೀಮಂತರನ್ನಾಗಿಸಿದ್ದಾರೆ. ಗುಜರಾತ್ ಮಾಡೆಲ್ ನಲ್ಲಿ ಮತಯಾಚಿಸುತ್ತಿದ್ದವರು ಇದೀಗ ಚೌಕಿದಾರ್ ಮಾಡೆಲ್ನಲ್ಲಿ ಮತಯಾಚಿಸುತ್ತಿರುವುದು ದುರಂತ. ಪ್ರಕರಣಗಳಿಗೆ ಸಂಬಂಧಿಸಿ ನ್ಯಾಯಾಲಯದಲ್ಲಿ ಮೆಜಿಸ್ಟ್ರೇಟ್ ಗಳಿಗೆ ಧಮ್ಕಿ ಹಾಕಿ ದ ಮೋದಿ ಮತ್ತು ಅಮಿತ್ ಷಾ ಜೈಲಿನಲ್ಲಿರಬೇಕಿತ್ತು. ಆಸ್ಪತ್ರೆಗಳಲ್ಲಿ ಆಮ್ಲಜನಕ ಒದಗಿಸಲಾಗದ ಸರಕಾರ, ಆಂಬ್ಯುಲೆನ್ಸ್ ವ್ಯವಸ್ಥೆಯಿಲ್ಲದೆ 8 ಕಿ.ಮೀ ಉದ್ದಕ್ಕೇ ಹೆಣ ಹೊರುವಂತಹ ಸ್ಥಿತಿ ದೇಶದಲ್ಲಿವೆ. ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ ಜೆಎನ್ ಯು ವಿದ್ಯಾರ್ಥಿಗಳನ್ನು ನಕ್ಸಲೈಟ್ ಆಗಿ ಬಿಂಬಿಸುತ್ತದೆ. ದಲಿತರನ್ನು ಅಸ್ಪೃಶ್ಯರಾಗಿ ವರ್ತಿಸಿ ದೌರ್ಜನ್ಯವೆಸಗುತ್ತಿದೆ. ಹಿಂದುತ್ವದ ಹೆಸರಿನಲ್ಲಿ ಕೋಮುವಾದ ನಡೆಸುತ್ತಿದೆ. ರಫೇಲ್ ಹಗರಣಗಳ ಕಡತಗಳು ತನ್ನ ಇಲಾಖೆಗಳಿಂದಲೇ ಸೋರಿಕೆಯಾದರೂ ಪ್ರಧಾನಿ ತನ್ನನ್ನು ದೇಶಕ್ಕೆ ಚೌಕಿದಾರ ಅನ್ನುತ್ತಿರುವುದು ಹಾಸ್ಯಾಸ್ಪದ. ದೇಶದಲ್ಲಿ ಲಲಿತ್ ಮೋದಿ, ನೀರವ್ ಮೋದಿ ಕಳ್ಳರಾಗಿದ್ದಾರೆ. ಮುಂದಿನ ದಿನಗಳಲ್ಲಿ ನರೇಂದ್ರ ಮೋದಿಯೂ ಜೈಲುಪಾಲಾಗಲಿದ್ದಾರೆ ಎಂದರು.
ಸಿಪಿಎಂ ರಾಜ್ಯ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ಬಾಲಕೃಷ್ಣ ಶೆಟ್ಟಿ, ವಲಯ ಸಮಿತಿ ಸದಸ್ಯರುಗಳಾದ ಮಹಾಬಲ.ಟಿ.ದೆಪ್ಪೆಲಿಮಾರ್, ರೋಹಿದಾಸ್ ಭಟ್ನಗರ, ಸಂಜೀವ ಪಿಲಾರು, ಲೋಕಯ್ಯ ಪಾನೀರು, ಜಯಂತ್ ಅಂಬ್ಲಮೊಗರು, ನಾರಾಯಣ ತಲಪಾಡಿ, ಅಶೋಕ್ ಶೆಟ್ಟಿ, ಚಂದ್ರಹಾಸ ಪಿಲಾರು, ವಿಲಾಸಿನಿ ತೊಕ್ಕೊಟ್ಟು, ವಕೀಲರುಗಳಾದ ರಾಮಚಂದ್ರ ಬಬ್ಬುಕಟ್ಟೆ, ನಿತಿನ್ ಕುತ್ತಾರ್, ಸುಂದರ ಕುಂಪಲ ಉಪಸ್ಥಿತರಿದ್ದರು.
ಯು. ಜಯಂತ ನಾೈಕ್ ಸ್ವಾಗತಿಸಿದರು. ಪದ್ಮಾವತಿ.ಯಸ್ ಶೆಟ್ಟಿ ವಂದಿಸಿದರು.

`ರಾಹುಲ್ ಗಾಂಧಿ ಅಮೂಲ್ ಬೇಬಿ ಹೌದು’
ಕೇರಳದ ಸಿಪಿಎಂ ನೇತಾರ ಅಚ್ಚುತಾನಂದನ್ ಹೇಳಿರುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಮೂಲ್ ಬೇಬಿ ಹೌದು. ಇಲ್ಲವಾದಲ್ಲಿ ಸಂಘಪರಿವಾರವನ್ನು ಇಲ್ಲವಾಗಿಸಿದ ಕೇರಳದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾರೆಯೇ? ಎಂದು ಪ್ರಶ್ನಿಸಿದ ಅವರು ವಯನಾಡ್ ನಲ್ಲಿ ಸಿಪಿಎಂ ಅಭ್ಯರ್ಥಿ ಎದುರು ಕಣಕ್ಕಿಳಿದಿರುವುದರಲ್ಲಿ ಅರ್ಥವಿಲ್ಲ. ದೇಶದಲ್ಲಿ ಕೋಮುವಾದ ಬಿಜೆಪಿಯನ್ನು ಹಿಮ್ಮೆಟ್ಟಿಸುವ ಪ್ರಯತ್ನದಲ್ಲಿರುವ ಮಿತ್ರ ಪಕ್ಷಗಳ ವಿರುದ್ಧವೇ ಸಮರ ಸಾರಿರುವುದು ಸರಿಯಲ್ಲ ಎಂದು ವಸಂತ ಆಚಾರಿ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಉಳ್ಳಾಲ ವಲಯ ಸಮಿತಿ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.


