UN NETWORKS
ಉಳ್ಳಾಲ: ಕೋಳಿ ಬಾಲಿನಿಂದ ಇರಿದು ಗಂಭೀರ ಗಾಯಗೊಂಡಿದ್ದ ಉಳ್ಳಾಲ ಬಂಡಿ ಕೊಟ್ಯ ನಿವಾಸಿ ನಿತಿನ್ ಜೋಗಿ(35) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾತರಿಯಾಗದೆ ಸಾವನ್ನಪ್ಪಿದ್ದಾರೆ . ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.

ಮೊಗವೀರಪಟ್ನ ನಿವಾಸಿ ರಜನೀಶ್ ಬಂಧಿತ. ಎ.7 ಭಾನುವಾರ ಉಳ್ಳಾಲ ಪ್ಯಾರೀಸ್ ಜಂಕ್ಷನ್ನಿನಲ್ಲಿರುವ ಉಳ್ಳಾಲ್ ವೈನ್ಸ್ ನಲ್ಲಿ ಕೆಲಸಕ್ಕಿದ್ದ ನಿತಿನ್, ಬಳಿ ದಿನನಿತ್ಯ ರಜನೀಶ್ ಬಂದು ಹರಟೆ ಮಾತನಾಡುತ್ತಿದ್ದ . ಮೊನ್ನೆ ದಿನ ರಜನೀಶ್ ಬಂದವ ಹರಟೆ ಹೊಡೆಯುತ್ತಾ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಇದು ವಿಕೋಪಕ್ಕೆ ತಿರುಗಿ ವೈನ್ಸ್ ಅಂಗಡಿಯಿಂದ ಸ್ವಲ್ಪ ದೂರದಲ್ಲಿರುವ ಡಾಲಿ ಬಾರ್ ಸಮೀಪ ನಿತಿನ್ ಬರುವಂತೆ ರಜನೀಶ್ ಕರೆದಿದ್ದಾನೆ. ಅಲ್ಲಿಗೆ ಬಂದಾಗ ಏಕಾಏಕಿ ರಜನೀಶ್ ತನ್ನ ಬಳಿಯಿದ್ದ ಕೋಳಿ ಬಾಲಿನಿಂದ , ನಿತಿನ್ ಹೊಟ್ಟೆಯ ಭಾಗಕ್ಕೆ ಇರಿದಿದ್ದಾನೆ. ಗಾಬರಿಗೊಂಡು ನಿತಿನ್ ಗಾಯದೊಂದಿಗೆ ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದತ್ತ ಒಬ್ಬನೇ ತೆರಳಿದ್ದನು. ಆದರೆ ಗಂಭೀರ ಗಾಯವಾಗಿದ್ದರಿಂದಾಗಿ ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆಸ್ಪತ್ರೆಯಲ್ಲಿ ಎ.10 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹತ್ಯೆಯಾದ ನಿತಿನ್ ತಂದೆ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.
ಊಟ ಮಾಡುತ್ತಿದ್ದ ಆರೋಪಿ: ಕೃತ್ಯ ಎಸಗಿದ ದಿನದಂದೇ ಆರೋಪಿ ರಜನೀಶ್, ತನ್ನ ಮನೆಗೆ ತೆರಳಿ ಏನೂ ನಡೆದಿಲ್ಲ ಎಂಬಂತೆ ಊಟ ಮಾಡುತ್ತಿದ್ದನು. ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಮನೆಗೆ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಹಲವು ಸಣ್ಣ ಪ್ರಕರಣಗಳು ಇವೆ.


