UN NETWORKS
ಕೊಣಾಜೆ : ಬದುಕಿನಲ್ಲಿ ಬಹುಮುಖ ಆಯ್ಕೆಗಳನ್ನು ನಾವು ರೂಢಿಸಿಕೊಳ್ಳಬೇಕು. ಜೀವನದ ಪ್ರತಿ 10-15 ವರ್ಷಗಳಿಗೊಮ್ಮೆ ನಮ್ಮನ್ನು ನಾವು ಮರು ಅನ್ವೇಷಿಸಬೇಕು. ವೃತ್ತಿ ಜೊತೆ ಜೊತೆಗೆ ನಟನೆಯಂಥಹ ಆಸಕ್ತಿಯ ವಿಚಾರಗಳಲ್ಲಿ ನಾವು ತೊಡಗಿಸಿಕೊಳ್ಳಬೇಕು ಎಂದು ಮಲಯಾಳಂ ಮತ್ತು ಮರಾಠಿ ಚಿತ್ರರಂಗದ ಜನಪ್ರಿಯ ನಿರ್ದೇಶಕ ಪ್ರಕಾಶ್ ಬಾರೆ ಹೇಳಿದ್ದಾರೆ.

ಮಂಗಳೂರು ವಿ.ವಿ.ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಮಂಗಳವಾರ ಕೊಣಾಜೆಯ ಮಂಗಳೂರು ವಿ.ವಿ. ಆವರಣದ ಮಂಗಳಾ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯಮಟ್ಟದ ಸಿನಿಮಾ ಉತ್ಸವ `ರಿಪ್ಲೆಕ್ಷನ್ 2019′ ಉದ್ಘಾಟಿಸಿ ಅವರು ಮಾತನಾಡಿದರು. ಇತರ ರಂಗಗಳ ಹಾಗೆ ಸಿನಿಮಾ ರಂಗದಲ್ಲೂ ನ್ಯಾಸಿಸಂ ಪ್ರವೃತ್ತಿ ಇದೆ. ಯಾವುದೇ ಕಲಾ ಪ್ರಕಾರ , ಮನರಂಜನೆಯನ್ನು ಯಾರೋ ಬಂದು ನಮ್ಮ ಮೇಲೆ ಹೇರುವ ಹಾಗಿರಬಾರದು. ನಮ್ಮ ಸ್ವಾತಂತ್ರ್ಯದ, ಆಯ್ಕೆಯ ಸಿನಿಮಾಗಳನ್ನು ನೋಡುವ ಅವಕಾಶ ಇರಬೇಕು. ಸಿನಿಮಾ ಉತ್ಸವಗಳಲ್ಲಿ ಈ ಅವಕಾಶ ದೊರಕುತ್ತದೆ. ಅಂತರ್ಜಾಲ ತಾಣಗಳು ನಮಗೆ ಇಂತಹ ಮುಕ್ತ ಅವಕಾಶ ಒದಗಿಸಿಕೊಡುತ್ತಿವೆ ಎಂದು ಅವರು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿ.ವಿ.ಯ ಪ್ರಭಾರ ಕುಲಪತಿ ಪ್ರೊ.ಕಿಶೋರಿ ನಾಯಕ್ ಕೆ. ಮಾತನಾಡಿ, ವಾಣಿಜ್ಯ ಚಲನಚಿತ್ರಗಳು ಏಕತಾನತೆಯನ್ನು ಉತ್ತೇಜಿಸುತ್ತಿವೆ. ಇಂತಹ ಚಲನಚಿತ್ರೋತ್ಸವಗಳು ಏಕತಾನತೆಯ ಪ್ರಯೋಗಗಳಿಗೆ ಸವಾಲು ಹಾಕಬೇಕು. ಸಿನಿಮಾ ಮಾತ್ರವಲ್ಲ, ಎಲ್ಲಾ ರಂಗಗಳಲ್ಲೂ ಬದಲಾವಣೆಗಳನ್ನು ತರಬೇಕಾದರೆ ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಸಿನಿಮಾ ನಿರ್ದೇಶಕ ಅಭಯಸಿಂಹ ಮುಖ್ಯ ಅತಿಥಿಯಾಗಿದ್ದರು. ಉತ್ಸವದ ವಿದ್ಯಾರ್ಥಿ ಸಂಚಾಲಕ ಸಂದೀಪ್ ಕೆ. ಹಾಜರಿದ್ದರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಎಲ್.ಧರ್ಮ ಸ್ವಾಗತಿಸಿದರು. ಅತಿಥಿ ಉಪನ್ಯಾಸಕ ಶಶಿಧರ ಮಂಚಿ ವಂದಿಸಿದರು. ವಿದ್ಯಾರ್ಥಿ ಚರಣ್ ನಿರೂಪಿಸಿದರು. ಹರ್ಷಿತ್ ಪಡ್ರೆ ಆಶಯ ನುಡಿಗಳನ್ನಾಡಿದರು.
ಉದ್ಘಾಟನೆ ಬಳಿಕ ಅಭಯಸಿಂಹ ನಿರ್ದೇಶನದ ಪಡ್ಡಾಯಿ ಚಿತ್ರ ಪ್ರದರ್ಶನ, ಚಿತ್ರತಂಡದೊಂದಿಗೆ ಸಂವಾದ ಏರ್ಪಡಿಸಲಾಗಿತ್ತು. ಚಿತ್ರೋತ್ಸವ ಪ್ರಯುಕ್ತ ಶುದ್ಧಿ, ಅಮ್ಮಚ್ಚಿಯೆಂಬ ನೆನಪು, ಹೆಬ್ಬೆಟ್ ರಾಮಕ್ಕ, ನಾತಿಚರಾಮಿ ಚಿತ್ರಗಳ ಪ್ರದರ್ಶನ ವ್ಯವಸ್ಥೆಗೊಳಿಸಲಾಗಿದೆ. ಬುಧವಾರವೂ ಚಿತ್ರೋತ್ಸವ ಮುಂದುವರಿಯಲಿದ್ದು, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.
ಸಿಂಕ್ ಸೌಂಡ್ ತಂತ್ರಬಳಸಿದ ಮೊದಲ ತುಳು ಚಿತ್ರ ಪಡ್ಡಾಯಿ
ಸಿನಿಮಾದ ಚಿತ್ರೀಕರಣವಾಗುವಾಗಲೇ ಬಳಸಿದ ಧ್ವನಿ ಆಧರಿಸಿದ ಸಿಂಕ್ ಸೌಂಡ್ ತಂತ್ರಜ್ಞಾನ ಅಳವಡಿಸಿದ ಮೊದಲ ತುಳು ಚಿತ್ರ ಪಡ್ಡಾಯಿ ಎಂದು ಚಿತ್ರದ ನಿರ್ದೇಶಕ ಅಭಯಸಿಂಹ ತಿಳಿಸಿದ್ದಾರೆ. ಮಂಗಳೂರು ಮಂಗಳೂರು ವಿ.ವಿ.ಯಲ್ಲಿ ರಾಜ್ಯಮಟ್ಟದ ತುಳುಚಿತ್ರೋತ್ಸವದಲ್ಲಿ ಪಡ್ಡಾಯಿ ಚಿತ್ರ ಪ್ರದರ್ಶನದ ಬಳಿಕ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
ಈ ತಂತ್ರಜ್ಞಾನದಲ್ಲಿ ವಿಭಿನ್ನ ಧ್ವನಿ ಫಲಿತಾಂಶ ಬರುತ್ತದೆ. ಎಲ್ಲರೂ ರಂಗಭೂಮಿ ಕಲಾವಿದರೇ ಸಿನಿಮಾದಲ್ಲಿ ಪಾಲ್ಗೊಂಡಿರುವುದು ವಿಶೇಷ. ಮನುಷ್ಯನ ಮನಸ್ಸಿನಲ್ಲಿರುವ ಆಶಯವೇ ದೈವದ ನುಡಿ ರೂಪದಲ್ಲಿ ವ್ಯಕ್ತಿಗೊಳ್ಳುವ ತತ್ವ, ಬಡ ಮಹಿಳೆಯ ಶ್ರೀಮಂತಿಕೆಯ ಮೋಹ, ಇಲ್ಲಿ ರೂಪಕವಾಗಿ ಬಳಸಿದ ಪರಿಮಳದ ಕಲ್ಪನೆ, ಶೃಂಗಾರ ದೃಶ್ಯಗಳು ಇವೆಲ್ಲ ಕಥೆಗೆ ಪೂರಕವಾಗಿಯೇ ನಿರೂಪಿತವಾಗಿವೆ ಎಂದು ಅವರು ಪ್ರಶೆಗಳಿಗೆ ಉತ್ತರಿಸುತ್ತಾ ತಿಳಿಸಿದರು.
ನಟ ಚಂದ್ರಹಾಸ ಉಳ್ಳಾಲ ಮಾತನಾಡಿ, ಇಡೀ ಚಿತ್ರದಲ್ಲಿ ಬಳಸಿದ ಕಡಲು ಚಿತ್ರಕ್ಕೆ ದೊಡ್ಡ ಕ್ಯಾನ್ವಾಸ್ ಕಲ್ಪಿಸಿದೆ. ಸಿನಿಮಾಗೋಸ್ಕರ ಆಳ ಸಮುದ್ರಕ್ಕೆ ತೆರಳಿ ಆಳ ಸಮುದ್ರ ಮೀನುಗಾರಿಕೆ ದೃಶ್ಯಗಳನ್ನು ಚಿತ್ರೀಕರಿಸಲಾಯಿತು ಎಂದು ವಿವರಿಸಿದರು. ನಿರ್ಮಾಪಕ ನಿತ್ಯಾನಂದ ಪೈ ಹಾಗೂ ಸಹನಟರು ಹಾಜರಿದ್ದರು.


