ಉಳ್ಳಾಲ: ಮಂಡ್ಯದಲ್ಲಿ ನಿಖಿಲ್ ನೋಟಿಗೆ ಸುಮಲತಾಗೆ ಓಟು ಪಡೆಯಲಿದ್ದಾರೆ. ಹಣಬಲದ ಮೇಲೆ ಕಾಂಗ್ರೆಸ್-ಜೆಡಿಎಸ್ ಚುನಾವಣೆಯನ್ನು ಎದುರಿಸುತ್ತಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ತೊಕ್ಕೊಟ್ಟು ಕಾಪಿಕಾಡಿನ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಅವರನ್ನು ಸೋಲಿಸಲು ಮುಖ್ಯಮಂತ್ರಿ ವ್ಯಾಪಕವಾಗಿ ಹಣದ ಹೊಳೆ ಹರಿಸುತ್ತಿದ್ದಾರೆ. ಆದರೆ ಮತದಾರರು ನಿಖಿಲ್ ನೋಟಿನ ರಾಜಕೀಯವನ್ನು ಧಿಕ್ಕರಿಸಿ ಸುಮ¯ತಾ ಓಟು ಹಾಕಿ ಜಯಗಳಿಸಲಿದ್ದಾರೆ. ಶಿವಮೊಗ್ಗದಲ್ಲಿ ದೇವೇಗೌಡ ಕುಟುಂಬದ ಆಪ್ತ ಹಾಗೂ ಸಂಬಂಧಿ ಪರಮೇಶ್ವರ ಎಂಬಾತನ ಮನೆಯಿಂದ 6 ಕೋಟಿ ನಗದು ಹಾಗೂ ಕೋಟ್ಯಂತರ ಬೆಲೆಬಾಳುವ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ತಪ್ಪಿತಸ್ಥ ಪರಮೇಶ್ವರ ಸರಕಾರಿ ಗುತ್ತಿಗೆದಾರರಿಂದ ಹಣ ಸಂಗ್ರಹಿಸಿರುವುದಾಗಿ ಗೊತ್ತಾಗಿದೆ. ಜನತೆ ಮುಂದೆ ಪ್ರಾಮಾಣಿಕರೆಂದು ನಾಟಕವಾಡುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜನತೆ ಮುಂದೆ ಕ್ಷಮೆಯಾಚಿಸಬೇಕು ಎಂದ ಅವರು ರಾಜ್ಯದ ಮೈತ್ರಿ ಸರಕಾರದ ಒಗ್ಗಟ್ಟಿನ ಕೊರತೆಯಿಂದಾಗಿ ಅಭಿವೃದ್ಧಿ ಕಾಮಗಾರಿಗಳು ಕುಂಠಿಗೊಂಡಿದೆ. ಕುಡಿಯುವ ನೀರು, ಮೂಲಭೂತ ಸೌಕರ್ಯಗಳು ಸಿಗದೇ ರಾಜ್ಯಾದ್ಯಂತ ಮತದಾನ ಬಹಿಷ್ಕಾರಕ್ಕೆ ಜನ ಮುಂದಾಗುತ್ತಿದ್ದಾರೆ. ಸಚಿವ ರೇವಣ್ಣ ಅವರು ಅಭಿವೃದ್ಧಿ ಬದಲಾಗಿ ಎರಡು ಕೈಗಳಲ್ಲಿ ಲಿಂಬೆಹಣ್ಣು ಹಿಡಿದುಕೊಂಡು ವಿಧಾನಸೌಧಕ್ಕೆ ತಿರುಗುವ ಕಾರ್ಯದಲ್ಲೇ ತಲ್ಲೀನರಾಗಿದ್ದಾರೆ.
ಮೋದಿ ವಿರುದ್ಧ ಸೃಷ್ಟಿಯಾಗಿರುವ ಮಹಾಘಟಬಂಧನ್ ತಂಡದವರು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಹಾಗೂ ಉಗ್ರಗಾಮಿಗಳನ್ನು ಬಿಡುಗಡೆಗೊಳಿಸುವ ವಿಶ್ವಾಸವನ್ನು ಮತದಾರರಿಗೆ ನೀಡುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ರಾಷ್ಟ್ರೀಯತೆ ಹಾಗೂ ಭದ್ರತೆಗಾಗಿ ನಿರಂತರವಾಗಿ ಶ್ರಮಿಸುತ್ತಲೇ ಇದ್ದಾರೆ. ಬಡವರು, ವಿದ್ಯಾವಂತರು, ಕಾರ್ಮಿಕ ವರ್ಗದವರೆಲ್ಲರೂ ಪ್ರಧಾನಿ ಮೋದಿಯನ್ನು ಬೆಂಬಲಿಸುತ್ತಿದ್ದಾರೆ. ಈ ಮೂಲಕ ರಾಜ್ಯದಲ್ಲಿ 27 ಸ್ಥಾನದೊಂದಿಗೆ ದೇಶದಾದ್ಯಂತ 300 ಕ್ಕೂ ಹೆಚ್ಚು ಸ್ಥಾನ ಪಡೆದುಕೊಳ್ಳುವ ವಿಶ್ವಾಸವಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್, ತಾ.ಪಂ ಮಾಜಿ ಸದಸ್ಯೆ ರಾಜೀವಿ ಕೆಂಪುಮಣ್ಣು, ಜೀವನ್ ಕುಮಾರ್ ತೊಕ್ಕೊಟ್ಟು ಉಪಸ್ಥಿತರಿದ್ದರು.


