UN NETWORKS
ಕೊಣಾಜೆ : ಭಾರತದ ಸಂಸ್ಕೃತಿ, ಆಚರಣೆ, ಸಂಪ್ರದಾಯಗಳು ವೈಶಿಷ್ಟ್ಯಪೂರ್ಣವಾದುದು. ಆದರೆ ಇತ್ತೀಚೆಗೆ ಭಾರತದಲ್ಲಿ ಶಿಕ್ಷಣ ಪಡೆದು ವಿದೇಶಕ್ಕೆ ತೆರಳಿ ದುಡಿಯುವ ಮನೋಭಾವ ಯುವಕರಲ್ಲಿ ಹೆಚ್ಚಾಗುತ್ತಿದೆ. ಯುವ ಸಮುದಾಯ ಇಂತಹ ಮನೋಭಾವನ್ನು ದೂರಮಾಡಿ ನಮ್ಮ ದೇಶದ ಸೇವೆಯನ್ನೇ ಮಾಡುವಂತಹ ದೃಢಸಂಕಲ್ಪ ಮಾಡಬೇಕು ಎಂದು ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ ಎಂದೇ ಖ್ಯಾತರಾಗಿರುವ ಸೇತು ಬಂಧು ಡಾ. ಗಿರೀಶ್ ಭಾರದ್ವಾಜ್ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ, ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮ `ಸಂಭ್ರಮ-2019’ರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ನಮ್ಮ ದೇಹ, ಬಟ್ಟೆಯನ್ನು ನಾವು ಹೇಗೆ ಸ್ವಚ್ಚವಾಗಿಟ್ಟುಕೊಳ್ಳುತ್ತೇವೆಯೋ ಅದೇ ರೀತಿ ನಮ್ಮ ಹೃದಯವನ್ನು ಕೂಡಾ ಸ್ವಚ್ಚವಾಗಿಟ್ಟುಕೊಳ್ಳಬೇಕು. ನಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದನ್ನು ಕಲಿತುಕೊಳ್ಳಬೇಕು. ದೃಢವಾದ ವಿಶ್ವಾಸ ನಮ್ಮನ್ನು ಯಶಸ್ವಿ ಜೀವನದತ್ತ ಕೊಂಡೊಯ್ಯುತ್ತದೆ. ಜೊತೆಗೆ ನಮ್ಮ ಸಂಸ್ಕೃತಿ, ಸಂಪ್ರದಾಯಗಳ ರಕ್ಷಣೆಯೊಂದಿಗೆ ಗುರುಹಿರಿಯರಿಗೆ ಗೌರವ ನೀಡುವ ಗುಣ ನಮ್ಮಲ್ಲಿ ಸದಾ ಇರಬೇಕು ಎಂದು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಲನಚಿತ್ರ ನಟಿ ನೀತಾ ಅಶೋಕ್ ಪರಿಶ್ರಮ ಹಾಗೂ ಕನಸಿನೊಂದಿಗೆ ಮುನ್ನಡೆದರೆ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು. ಆದ್ದರಿಂದ ವಿದ್ಯಾರ್ಥಿಗಳು ಈಗಲೇ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ ಎಂದು ಹೇಳಿದರು.ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಕಿಶೋರಿ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಯುವಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಸುರತ್ಕಲ್ ಗೋವಿಂದದಾಸ್ ಕಾಲೇಜು ಹಾಗೂ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ತಂಡಗಳಿಗೆ ಮಂಗಳೂರು ವಿವಿ ವತಿಯಿಂದ ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.
ಮಂಗಳೂರು ವಿವಿಯ ಕುಲಸಚಿವ ಪ್ರೊ.ಎ.ಎಂ. ಖಾನ್, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಉದಯ ಬಾರ್ಕೂರು, ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ನ ಅಧ್ಯಕ್ಷ ವಿನುತಾ ಎಂ.ಎಸ್, ಉಪಾಧ್ಯಕ್ಷ ನಿತಿನ್ ಎ.ಎಂ, ಕಾರ್ಯದರ್ಶಿ ಅಭಿಷೇಕ್, ಸಹಕಾರ್ಯದರ್ಶಿ ಸುದೀಪ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿ ಹರ್ಷಿತ್ ಪಿ.ಜಿ. ಹಾಗೂ ಸಹ ಸಾಂಸ್ಕೃತಿಕ ಕಾರ್ಯದರ್ಶಿ ನಿಧಿ ಎಚ್.ಸಿ ಉಪಸ್ಥಿತರಿದ್ದರು.



