UN NETWORKS
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2018-19ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಹಾಗೂ ಕೃತಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಮತ್ತು ತಾಳಮದ್ದಳೆಯ ಪ್ರಸಿದ್ಧ ಕಲಾವಿದರಾದ ಕುಂಬ್ಳೆ ಸುಂದರ ರಾವ್ ಹಾಗೂ ಬಡಗುತಿಟ್ಟಿನ ಹಿರಿಯ ಯಕ್ಷಗಾನ ವೇಷಧಾರಿ ಗೋಡೆ ನಾರಾಯಣ ಹೆಗಡೆ ಅವರು ಯಕ್ಷಮಂಗಳ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿದ್ವಾಂಸರಾದ ಪ್ರೊ.ಜಿ.ಎಸ್.ಭಟ್ಟ ಸಾಗರ ಅವರ ‘ಯಕ್ಷಗಾನ ಅಂಗೋಪಾಂಗ ಸಮತೋಲನ ವಿಚಾರ’ ಕೃತಿಯು ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಯಕ್ಷಮಂಗಳ ಪ್ರಶಸ್ತಿಯು ತಲಾ 25 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆಗಳನ್ನೊಳಗೊಂಡಿದೆ. ಯಕ್ಷಮಂಗಳ ಕೃತಿ ಪ್ರಶಸ್ತಿಯು 10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರೊ.ಎಂ.ಎಲ್.ಸಾಮಗ, ಡಾ.ಚಂದ್ರಶೇಖರ್ ದಾಮ್ಲೆ , ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಹಾಗೂ ಡಾ.ಧನಂಜಯ ಕುಂಬ್ಳೆ ಇವರನ್ನೊಳಗೊಂಡ ಸಮಿತಿ ಸಾಧಕರನ್ನು ಆಯ್ಕೆ ಮಾಡಿದೆ.
ಮಾ.15ರಂದು ಪ್ರಶಸ್ತಿ ಪ್ರದಾನ
ಯಕ್ಷಮಂಗಳ ಪ್ರಶಸ್ತಿ ಪ್ರದಾನ ಸಮಾರಂಭವು ಮಾ.15ರಂದು ಅಪರಾಹ್ನ 2.30 ರಿಂದ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ನಡೆಯಲಿದ್ದು, ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ.ಕಿಶೋರಿ ನಾಯಕ್ ಕೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಯಕ್ಷಗಾನ ಚಿಂತಕ ಡಾ.ಚಂದ್ರಶೇಖರ್ ದಾಮ್ಲೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಪ್ರೊ.ಎಂ.ಎಲ್.ಸಾಮಗ ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಮಂಗಳ ತಂಡದ ವಿದ್ಯಾರ್ಥಿಗಳಿಂದ `ಮೋಹಿನೀ ಏಕಾದಶೀ’ ಹಾಗೂ ತಂಡದ ಹಿರಿಯ ವಿದ್ಯಾರ್ಥಿಗಳಿಂದ `ಸುಧನ್ವಾರ್ಜುನ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಎ.ಎಂ.ಖಾನ್ ಹಾಗೂ ಕೇಂದ್ರದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪರಿಚಯ:
ಕುಂಬ್ಳೆ ಸುಂದರರಾವ್: ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಕುಂಬ್ಳೆ ಸುಂದರ ರಾವ್ ಅಗ್ರಪಂಕ್ತಿಯ ಶ್ರೇಷ್ಠ ಕಲಾವಿದರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಸುಂದರರಾಯರು ಯಕ್ಷಗಾನ ಕಲೆಯ ಮೇಲೆ ಆಕರ್ಷಿತರಾಗಿ ಪರಿಶ್ರಮದಿಂದ ಅರ್ಥಗಾರಿಕೆಯ ಸಾಧನೆಯನ್ನು ಮಾಡಿ ಶೇಣಿ, ಸಾಮಗ ಮೊದಲಾದ ಅರ್ಥಧಾರಿಗಳ ಕೂಟದಲ್ಲಿ ಮೆರೆದಿದ್ದಾರೆ. ಬಣ್ಣದ ಕುಟ್ಯಪ್ಪುರವರಲ್ಲಿ ಸ್ಥೂಲವಾದ ನಾಟ್ಯಾಭ್ಯಾಸವನ್ನು ಮಾಡಿ ರಂಗಪ್ರವೇಶ ಮಾಡಿರುವ ಇವರು ಕೂಡ್ಲು, ಇರಾ, ಸುರತ್ಕಲ್ ಮೇಳಗಳಲ್ಲಿ ಆರಂಭದ ತಿರುಗಾಟವನ್ನು ಮಾಡಿ ಅನಂತರ ಧರ್ಮಸ್ಥಳ ಮೇಳದಲ್ಲಿ ಸುಧೀರ್ಘವಾದ ತಿರುಗಾಟವನ್ನು ನಡೆಸಿರುವರು. ಭರತ, ಕರ್ಣ, ಭೀಷ್ಮ, ದುಷ್ಯಂತ, ಅಕ್ರೂರ, ಸಂಜಯ, ಪರೀಕ್ಷಿತ ಮೊದಲಾದವು ಇವರ ಪಾತ್ರಗಳು. ಪ್ರಾಸಬದ್ಧವಾದ ಮಾತಿನ ಪಾಂಡಿತ್ಯದೊಂದಿಗೆ ಹೆಸರಾದ ಇವರು ಇವರು ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿ, ಸಂಸ್ಕಾರ ಭಾರತೀಯ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇರಳ ಕಲಾ ಮಂಡಲದ ಪ್ರಶಸ್ತಿ, ಕನ್ನಡ ಶ್ರೀ ಪ್ರಶಸ್ತಿ, ಕರ್ನಾಟಕ ಶ್ರೀ ಪ್ರಶಸ್ತಿ ಇತ್ಯಾದಿ ಹತ್ತಾರು ಪ್ರಶಸ್ತಿಗಳು ದೊರೆತಿರುವುದಲ್ಲದೆ ದೆಹಲಿ, ಮುಂಬಯಿ, ಬೆಹರಿನ್ ಮುಂತಾದ ದೇಶ ವಿದೇಶಗಳ ಗೌರವವು ಸಂದಿರುತ್ತದೆ.
ಗೋಡೆ ನಾರಾಯಣ ಹೆಗಡೆ: ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ತಮ್ಮ ಅಪ್ರತಿಮ ಕಲಾಸಾಧನೆಯ ಮೂಲಕ ಪ್ರಸಿದ್ಧರಾದವರು ಗೋಡೆ ನಾರಾಯಣ ಹೆಗಡೆಯವರು. ರಸಾತ್ಮಕ ವಾಗ್ಮಿತೆ, ಪಾತ್ರಗಳ ನಾಡಿಮಿಡಿತವನ್ನರಿತ ಗರಿಷ್ಠಮಟ್ಟದ ಕಲಾಭಿವ್ಯಕ್ತಿ ಮೈಗೂಡಿಸಿಕೊಂಡ ನಾರಾಯಣ ಹೆಗಡೆಯವರು ಆರಂಭಿಕ ವೃತ್ತಿ ಬದುಕಿನಲ್ಲಿ ಸ್ತ್ರೀವೇಷಧಾರಿಯಾಗಿ ಮೆರೆದವರು. ಶ್ರೀಯುತರ ತಾರೆ, ದಮಯಂತಿ, ಸೈರೇಂಧ್ರಿ, ದಾಕ್ಷಾಯಿಣಿ, ಪ್ರಭಾವತಿ ಪಾತ್ರಗಳು ಜನಮನ ರಂಜಿಸಿವೆ.`ಗದಾಯುದ್ದ’ ದ ಕೌರವನ ಪಾತ್ರದ ಮೂಲಕ ತಾರಾಮೌಲ್ಯದ ವರ್ಚಸ್ಸು ಪಡೆದರು. ಇವರ ಕೌರವ ರಾವಣ, ಋತುಪರ್ಣ, ಬ್ರಹ್ಮ, ಲಕ್ಷ್ಮಣ, ಅರ್ಜುನ, ಸಾಲ್ವ, ಜಾಂಬವ, ಕಾರ್ತವೀರ್ಯ ಕೀಚಕ, ಸುಧನ್ವ ಪಾತ್ರಗಳು ಯಕ್ಷಗಾನದ ಸೃಜನಶೀಲ ಕಲಾಸ್ವರೂಪದ ಜೀವಂತ ಯಕ್ಷಶಿಲ್ಪಗಳಾಗಿವೆ. ಇಡಗುಂಜಿ 9, ಅಮೃತೇಶ್ವರಿ 6, ಮುಲ್ಕಿ 1, ಪೆರ್ಡೂರು 1, ಪಂಚಲಿಂಗ 4, ಶಿರಸಿ ಮಾರಿಕಾಂಬ 4- ಹೀಗೆ ಗೋಡೆಯವರ ಕಲಾಕೃಷಿಗೆ ಸುವರ್ಣ-ಸಂಭ್ರಮ. ಪ್ರಸ್ತುತ ಗೋಡೆ ವಿಶ್ರಾಂತ ಜೀವನದಲ್ಲಿದ್ದಾರೆ. ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ರಾಮವಿಠಲ ಪ್ರಶಸ್ತಿ, ಅಖಿಲ ಹವ್ಯಕ ಮಹಾಸಭಾ ಸನ್ಮಾನ, ಸಿದ್ದಾಪುರ ಸಾಹಿತ್ಯ ಸಮ್ಮೇಳನದ ಗೌರವ, ಕಲಾಗಂಗೋತ್ರಿ ಗೌರವ, ಉಡುಪಿ ಯಕ್ಷಗಾನ ಕಲಾರಂಗದ ದಶಾವತಾರಿ ಮಾರ್ವಿ ಹೆಬ್ಬಾರ್ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಇವರಿಗೆ ಸಂದಿವೆ.
`ಯಕ್ಷಗಾನ ಅಂಗೋಪಾಂಗ ಸಮತೋಲನ ವಿಚಾರಕ್ಕೆ’ ಕೃತಿ ಪ್ರಶಸ್ತಿ: `ಯಕ್ಷಗಾನದ ಅಂಗೋಪಾಂಗಗಳ ಸಮತೋಲನ ವಿಚಾರ’ ಕೃತಿಯ ಲೇಖಕರಾದ ಡಾ. ಜಿ. ಎಸ್. ಭಟ್ಟ ಸಾಗರ ಅವರು ಯಕ್ಷಗಾನ ಚಿಂತಕರು, ಸಂಶೋಧಕರಾಗಿ ಗುರುತಿಸಿಕೊಂಡಿದ್ದಾರೆ. ಯಕ್ಷಗಾನ ಸಂಬಂಧ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರು ಯಕ್ಷಗಾನದ ಅಂಗೋಪಾಂಗಗಳ ಸಮತೋಲನ ವಿಚಾರ ಕೃತಿಯಲ್ಲಿ ಮೂರು ತಿಟ್ಟುಗಳಿಗೆ ಅನ್ವಯಿಸುವಂತೆ ಯಕ್ಷಗಾನದ ಭಿನ್ನ ಭಿನ್ನ ಅಸಮತೋಲನಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಪ್ರಕಟನೆಯ ಕೃಪೆಗಾಗಿ
ಸಂಯೋಜಕರು ಯಕ್ಷಗಾನ ಅಧ್ಯಯನ ಕೇಂದ್ರ
. ದೂರವಾಣಿ ಸಂಖ್ಯೆ: 9448911190


