UN NETWORKS
ಉಳ್ಳಾಲ: ರಿಕ್ಷಾ ಢಿಕ್ಕಿ ಹೊಡೆದು ವೃದ್ಧ ಮಹಿಳೆ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಮೀಪದ ಕಾಪಿಕಾಡು ಎಂಬಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಕುಂಪಲ ಮೂರುಕಟ್ಟೆ ನಿವಾಸಿ ಪ್ಯಾಟ್ರಿಕ್ ವಿಕ್ಟರ್ ಡಿಸೋಜ ಎಂಬವರ ಪತ್ನಿ ಬೆನ್ನಿ ಡಿಸೋಜ(76) ಮೃತರು. ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ಔಷಧಿಗೆಂದು ನಡೆದುಕೊಂಡು ಬಂದು ಕಾಪಿಕಾಡು ಸಮೀಪ ರಾಷ್ಟ್ರೀಯ ಹೆದ್ದಾರಿ-66 ನ್ನು ಅಡ್ಡದಾಟುತ್ತಿದ್ದಾಗ, ಕೋಟೆಕಾರು ಕಡೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ರಿಕ್ಷಾ ಢಿಕ್ಕಿ ಹೊಡೆದಿದೆ. ಪರಿಣಾಮ ಬೆನ್ನಿ ಡಿಸೋಜಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹೆಚ್ಚು ಬಸ್ಸಿನಲ್ಲಿ ಪ್ರಯಾಣಿಸದ ಬೆನ್ನಿ ಡಿಸೋಜ ಅವರು ಕುಂಪಲದಿಂದ ತೊಕ್ಕೊಟ್ಟು ಸುಮಾರು 5 ಕಿ.ಮೀ ನಡೆದುಕೊಂಡು ಬಂದು, ವಾಪಸ್ಸಾಗುತ್ತಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇಬ್ಬರು ಪುತ್ರರು ಇಸ್ರೇಲ್ ಮತ್ತು ಮಸ್ಕತ್ ನಲ್ಲಿ ಇರುವುದರಿಂದ ಅಂತಿಮ ಸಂಸ್ಕಾರಕ್ಕೆ ಅವರು ಬರುವವರೆಗೆ ಕಾಯಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದೆ.


