UN NETWORKS
ಉಳ್ಳಾಲ: ವರ್ಷಗಳಿಂದ ಸಮಸ್ಯೆಯ ಕೂಪದಲ್ಲಿ ನಡೆಯುತ್ತಿದ್ದ ವೀರರಾಣಿ ಅಬ್ಬಕ್ಕ ಉತ್ಸವ ಈ ಬಾರಿ ಕಡಲತೀರದಲ್ಲಿ ಅದ್ಧೂರಿಯಾಗಿ ಜಿಲ್ಲಾಡಳಿತ ನೇತೃತ್ವದಲ್ಲಿ ನಡೆಯಲಿದೆ. ಜನ ತಮ್ಮೆಲ್ಲರ ಉತ್ಸವ ಎಂದು ಮನಗಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ಅವರು ದ.ಕ ಜಿಲ್ಲಾಡಳಿತ ಮತ್ತು ಉಳ್ಳಾಲ ನಗರಸಭೆ ಇದರ ವತಿಯಿಂದ ವೀರರಾಣಿ ಅಬ್ಬಕ್ಕ ಉತ್ಸವದ ಅಂಗವಾಗಿ ಉಳ್ಳಾಲ ಬೀಚ್ ನಲ್ಲಿ ಭಾನುವಾರ ನಡೆದ ಬೀಚ್ ಸ್ವಚ್ಛತಾ ಅಭಿಯಾನ ಮತ್ತು ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅ¨ಕ್ಕ ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿದರು. ಮಾ.2 ಮತ್ತು 3 ಉಳ್ಳಾಲ ನಗರಕ್ಕೆ ವಿಶೇಷ ದಿನ. ಪ್ರಥಮಬಾರಿಯಾಗಿ ಕಡಲತೀರದಲ್ಲಿ ನಡೆಯುತ್ತಿರುವ ವೀರರಾಣಿ ಅಬ್ಬಕ್ಕ ಉತ್ಸವದ ಜವಾಬ್ದಾರಿಯನ್ನು ಜಿಲ್ಲಾಡಳಿತ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಸುದೀರ್ಘ ವಾಗಿ ಜಿಲ್ಲಾಡಳಿತ ವ್ಯವಸ್ಥೆಯನ್ನು ನಡೆಸುತ್ತಾ ಬಂದಿದೆ. ಈಗಾಗಲೇ ಉಳ್ಳಾಲ, ಸೋಮೇಶ್ವರ ಸೇರಿದಂತೆ ಜಿಲ್ಲೆಯ ವಿವಿಧ ಸಮುದ್ರ ತೀರಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಈ ಬಾರಿಯ ಅಬ್ಬಕ್ಕ ಉತ್ಸವದಲ್ಲಿ ರಾಜ್ಯದ ಕಲಾವಿದರ ಪಾಲ್ಗೊಳ್ಳುವಿಕೆ ಹಾಗೂ ವಿಶಿಷ್ಟ ರೀತಿಯ ಕಾರ್ಯಕ್ರಮಗಳು ನಡೆಯಲಿದೆ. ಉಳ್ಳಾಲ ಹಾಗೂ ಜಿಲ್ಲೆಯ ಜನತೆ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಪ್ರೋತ್ಸಾಹಿಸಬೇಕಿದೆ. ಈ ಮೂಲಕ ಕಡಲತೀರದ ಅಬ್ಬಕ್ಕ ಉತ್ಸವ ಅದ್ಧೂರಿ ಉತ್ಸವವಾಗಿ ನಡೆಯಲಿದೆ. ವಿವಿಧ ರೀತಿಯ ಸಮಸ್ಯೆಗಳಿಂದ ನಡೆಯುತ್ತಾ ಬಂದಿರುವ ಅಬ್ಬಕ್ಕ ಉತ್ಸವ ಈ ಬಾರಿ ಯಶಸ್ವಿಯಾಗಲಿದೆ ಎಂದರು.ಸ್ವಚ್ಛತಾ ಕಾರ್ಯದಲ್ಲಿ ಟಿಪ್ಪು ಸುಲ್ತಾನ್ ಕಾಲೇಜು, ಬಿ.ಎಂ ಶಾಲೆ, ಮೆರೇಡಿಯನ್ ಕಾಲೇಜು, ಪಾಂಡ್ಯರಾಜ್ ಬಳ್ಳಾಲ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ.ವಿ.ಆಳ್ವ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸಿಇಓ ಸೆಲ್ವ ಮಣಿ.ಆರ್, ಪಣಂಬೂರು ಬೀಚ್ ಅಭಿವೃದ್ಧಿಯ ಯತೀಶ್ ಬೈಕಂಪಾಡಿ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್, ಮಾರುತಿ ಯುವಕ ಮಂಡಲದ ಮನೋಜ್ ಸಾಲಿಯಾನ್, ಸಿಸಿಎನ್ ರಾಜೇಶ್ ಉಳ್ಳಾಲ್, ಮಧುರಾಜ್, ದಾಮೋದರ್ ಸಾಲಿಯಾನ್, ಮೀನಾಕ್ಷಿ ಬಂಗೇರ, ರೇಣುಕಾ ಕಿಶೋರ್ ಕಾಂಚನ್, ವಾಸುದೇವರಾವ್, ಉಳ್ಳಾಲ ನಗರಸಭೆ ಸದಸ್ಯರುಗಳಾದ ಮಮತಾ ರಾಘವ, ಮಹಮ್ಮದ್ ಮುಕ್ಕಚ್ಚೇರಿ, ರವಿಚಂದ್ರ ಗಟ್ಟಿ, ಜಬ್ಬಾರ್, ವೀಣಾ ಡಿಸೋಜ, ಬಶೀರ್, ನಗರಸಭೆ ಆರೋಗ್ಯ ಅಧಿಕಾರಿಗಳಾದ ಜಯಶಂಕರ್, ರಾಜೇಶ್, ಸಾಜೀತ್, ಸಹಾಯಕ ಅಭಿಯಂತರ ಉಮೇಶ್ ಕಾಮತ್, ಕಿರಿಯ ಅಭಿಯಂತರ ರೇಣುಕಾ, ತುಳಸೀದಾಸ್ ಮುಂತಾದವರು ಉಪಸ್ಥಿತರಿದ್ದರು.


