UN NETWORKS
ಉಳ್ಳಾಲ : ಸ್ವಚ್ಛ, ಆರೋಗ್ಯವಂತ ಉಳ್ಳಾಲ ನಿರ್ಮಾಣ ನಿಟ್ಟಿನಲ್ಲಿ ಮುಂದಡಿಯಿಟ್ಟಿರುವ ನಗರಸಭೆ, ಕಸ ಸಂಗ್ರಹಣೆಗೆ ಬಕೆಟ್ ಖರೀದಿ, ಶೌಚಾಲಯಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ವಿಲೇವಾರಿ ಘಟಕ, ಕಸ ವಿಲೇವಾರಿ ಯಂತ್ರ ಖರೀದಿಗೆ ಅನುದಾನ ಮೀಸಲಿಡಲಾಗಿದೆ.
ನಗರಸಭೆಯ ಅಧಿಕಾರಿಗಳು ತಯಾರಿಸಿದ ಬಜೆಟ್ಗೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಅನುಮೋದನೆ ನೀಡಿದ್ದಾರೆ.
ಉಳ್ಳಾಲದ ಘನತ್ಯಾಜ್ಯ ವಸ್ತು ವಿಲೇವಾರಿ ನಿಟ್ಟಿನಲ್ಲಿ ವೀಲ್ಡ್ ಬಿನ್ಸ್ ಖರೀದಿ, ಒಣಕಸ ಸಂಗ್ರಹ ಕೇಂದ್ರ, ಬೈಲಿಂಗ್ ಯಂತ್ರ ಖರೀದಿ, ಮೂಲದಲ್ಲಿಯೇ ಕಸ ಸಂಗ್ರಹಣೆ ಮಾಡಲು ಬಕೆಟ್ ಖರೀದಿ, ಎಲ್ಲಾ ಸರ್ಕಾರಿ ಕಚೇರಿ ಮತ್ತು ಸಾರ್ವಜನಿಕ ಶೌಚಾಲಯಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ವಿಲೇವಾರಿ ಘಟಕ ಮತ್ತು ಕಸ ವಿಲೇವಾರಿ ಮಾಡಲು ಯಂತ್ರಗಳ ಖರೀದಿಗೆ 260ಲಕ್ಷ ಮೀಸಲಿಡಲಾಗಿದೆ.2019-20ನೇ ಸಾಲಿನಲ್ಲಿ ನೀರು ಸರಬರಾಜು ಉತ್ತಮಗೊಳಿಸುವ ನಿಟ್ಟಿನಲ್ಲಿ ನೀರಿಗೆ ಸಂಬಂಧಪಟ್ಟ ಕಾಮಗಾರಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ನಗರಸಭಾ ನಿಧಿ, 14ನೇ ಹಣಕಾಸು ಆಯೋಗದ ಅನುದಾನ, ವಿಶೇಷ ಅನುದಾನ, ಕುಡಿಯುವ ನೀರಿನ ಸಮಸ್ಯೆಯ ಬಗೆಹರಿಸಲು ಬರುವ ಅನುದಾನಗಳನ್ನು ಸೇರಿಸಿ ಒಟ್ಟು ರೂ. 240ಲಕ್ಷ ಮೀಸಲಿಡಲಾಗಿದೆ.ರಸ್ತೆಗಳ ನಿರ್ಮಾಣಕ್ಕಾಗಿ ರೂ.225 ಲಕ್ಷ, ರಸ್ತೆಬದಿ ಚರಂಡಿಗಳ ನಿರ್ಮಾಣಕ್ಕಾಗಿ ರೂ 200 ಲಕ್ಷ, ಬೀದಿ ದೀಪ ಅಳವಡಿಕೆ ಮತ್ತು ಹೆಚ್ಚಿಗೆ ಕಂಬಗಳ ಅಳವಡಿಕೆಗೆ ರೂ.107.50 ಲಕ್ಷ, ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕೆ ರೂ.25.00 ಲಕ್ಷ, ಉದ್ಯಾನವನಗಳ ನಿರ್ಮಾಣಕ್ಕೆ ರೂ.30ಲಕ್ಷ, ಸ್ಮಶಾನಗಳ ಅಭಿವೃದ್ದಿಗೆ ರೂ.25.00ಲಕ್ಷ ಮೀಸಲಿಡಲಾಗಿದೆ.ಪರಿಶಿಷ್ಟ ಜಾತಿ ಮತ್ತು ಪಂಗಡ ಅಭಿವೃದ್ದಿಗೆ ಶೇ.24.10ರಡಿ ಎಸ್ಎಫ್ಸಿಯಿಂದ ರೂ.40ಲಕ್ಷ, ನಗರಸಭಾ ನಿಧಿಯಡಿ ರೂ.10.50ಲಕ್ಷ, ಇತರ ಬಡಜನರ ಕಲ್ಯಾಣಕ್ಕೆ ಎಸ್ಎಫ್ಸಿಯಡಿ ರೂ.6.96ಲಕ್ಷ, ನಗರಸಭಾ ನಿಧಿಯಿಂದ 3.15ಲಕ್ಷ, ವಿಕಲಚೇತನರ ಕಲ್ಯಾಣಕ್ಕೆ 5% ಯೋಜನೆಯಡಿ ಎಸ್ಎಫ್ಸಿಯಿಂದ 4.80ಲಕ್ಷ, ನಗರಸಭಾ ನಿಧಿಯಿಂದ ರೂ.2.18ಲಕ್ಷ ಮೀಸಲಿಡಲಾಗಿದೆ.
ಖರ್ಚು-ವೆಚ್ಚ
ನಗರಸಭೆಯ ಬಜೆಟ್ ರೂ. 41ಕೋಟಿ 93ಲಕ್ಷ ಹೊಂದಿದ್ದು, ರಾಜಸ್ವ ಆದಾಯ ರೂ.11.10 ಕೋಟಿ, ರಾಜಸ್ವ ಖರ್ಚು ರೂ.7.41ಕೋಟಿ, ಬಂಡವಾಳ ಆದಾಯ ರೂ.0.15ಕೋಟಿ, ಬಂಡವಾಳ ಖರ್ಚು ರೂ. 11.40ಕೋಟಿ, ಅಸಾಮಾನ್ಯ ಜಮೆ ರೂ.9.84ಕೋಟಿ, ಅಸಾಮಾನ್ಯ ಖರ್ಚು ರೂ.2.03 ಕೋಟಿ, ಉಳಿತಾಯ ರೂ.0.26ಕೋಟಿ.
ನಗರಸಭೆಯ ಆದಾಯ
2019-20ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ ರೂ.205ಲಕ್ಷ, ನೀರಿನ ಶುಲ್ಕ ರೂ.61.50ಲಕ್ಷ, ಮಳಿಗೆ ಬಾಡಿಗೆ ರೂ.39ಲಕ್ಷ, ಉದ್ದಿಮೆ ಪರವಾನಿಗೆ ಶುಲ್ಕ ರೂ.22.50ಲಕ್ಷ, ಕಟ್ಟಡ ಪರವಾನಿಗೆ ಶುಲ್ಕ ರೂ.65ಲಕ್ಷ, ಘನತ್ಯಾಜ್ಯ ಶುಲ್ಕ ರೂ.45.50ಲಕ್ಷ, ಜಾಹೀರಾತು ತೆರಿಗೆ ರೂ.3.50ಲಕ್ಷ, ಉಪಕರಗಳ ಸಂಗ್ರಹಣಾ ಶುಲ್ಕ ಮತ್ತು ದಂಡ ವಸೂಲಾತಿ ರೂ.38.95ಲಕ್ಷ, ನಳ್ಳಿ ಜೋಡಣಾ ಶುಲ್ಕ ರೂ.4ಲಕ್ಷ, ಖಾತಾ ಬದಲಾವಣೆಯಿಂದ ರೂ.5ಲಕ್ಷ ಸಹಿತ ಒಟ್ಟು ರೂ.562.73ಲಕ್ಷ ಆದಾಯ ನಿರೀಕ್ಷಿಸಿದೆ.


