UN NETWORKS
ಕೊಣಾಜೆ: ಸರ್ಕಾರಿ ಶಾಲೆಯೆಂಬ ಕೀಳರಿಮೆಯನ್ನು ಬಿಟ್ಟು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವುದರಿಂದಿಗೆ ಸಮಾಜದ ಸಂಪತ್ತಾಗಬೇಕಿದೆ ಎಂದು ಕೊಣಾಜೆ ಪಂಚಾಯಿತಿ ಅಧ್ಯಕ್ಷರಾದ ನಝರ್ ಷಾ ಪಟ್ಟೋರಿ ಅವರು ಅಭಿಪ್ರಾಯಪಟ್ಟರು.
ಅವರು ಕೊಣಾಜೆ ಪದವು ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಸರ್ಕಾರ ವತಿಯಿಂದ ಸಿಗುವ ಸೈಕಲನ್ನು ವಿತರಿಸಿ ಮಾತನಾಡಿದರು.ಹಿಂದೆ ಸರ್ಕಾರಿ ಶಾಲೆಗಳಲ್ಲಿ ಕಲಿತವರು ಇಂದು ದೇಶದಲ್ಲಿ ಉತ್ತಮ ಗೌರವಾನ್ವಿತ ಹುದ್ದೆಯೊಂದಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಮಾತ್ರವಲ್ಲದೆ ಪೋಷಕರು ಕೂಡಾ ಸರ್ಕಾರಿ ಶಾಲೆಯ ಬಗ್ಗೆ ಇರುವ ಕೀಳರಿಮೆಯನ್ನು ಬಿಟ್ಟು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಅಬ್ದುಲ್ ನಾಸೀರ್ ಕೆ.ಕೆ, ಕೊಣಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ಎಸ್ ರಾವ್, ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಚ್ಯುತಗಟ್ಟಿ ಕೊಣಾಜೆ, ಶಾಲಾ ಮುಖ್ಯೋಪಾಧ್ಯಾಯಿನಿ ಮೀನಾ ಗಾಂವ್ಕರ್, ದೈಹಿಕ ಶಿಕ್ಷಕ ರಾಜೀವ್ ನಾಯ್ಕ್, ಎಸ್‍ಡಿಎಂಸಿ ಅಧ್ಯಕ್ಷ ಹಸೈನಾರ್ ಮೊದಲಾದವರು ಉಪಸ್ಥಿತರಿದ್ದರು.


