UN NETWORKS
ಕೊಣಾಜೆ:ಯುವ ಸಮುದಾಯ ಸಮಾಜ ಕಟ್ಟುವ, ಧಾರ್ಮಿಕ ಕಾರ್ಯಕ್ರಮಗಳನ್ನು ಗಟ್ಟಿಗೊಳಿಸುವ, ಧಾರ್ಮಿಕ ಕಾರ್ಯಕ್ರಮಗಳು ನಡೆಯುವಲ್ಲಿ ಶ್ರಮದಾನ ಮಾಡುವ ಮೂಲಕ ಸಮಾಜ ಸಂಘಟನೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಹಿಂದೂ ಸಮಾಜದ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡುತ್ತಿದ್ದು, ಈ ನಿಟ್ಟಿನಲ್ಲಿ ದಕ್ಷ ಯುವ ಬಳಗ ಕಳೆದ ದಶ ವರ್ಷಗಳಿಂದ ಇಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕೊಣಾಜೆ ಕೋಟಿಪದವು ಶ್ರೀ ರಾಮ ಮಂದಿರದ ವಠಾರದಲ್ಲಿ ಕೊಣಾಜೆ ಗ್ರಾಮಚಾವಡಿ ದಕ್ಷ ಯುವ ಬಳಗ ಇದರ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಸತ್ಯನಾರಾಯಣ ಪೂಜೆಯ ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಹಿಂದೆ ಯುವ ಸಮುದಾಯ ಮದ್ಯಪಾನ, ಧೂಮಪಾನದಂತಹ ಕೆಟ್ಟ ಚಟುವಟಿಕೆಗಳಲ್ಲಿ ತೊಡಗಸಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸಮಾಜ ನಿರ್ಮಾಣದಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಇಂದಿನ ಮೊಬೈಲ್ ಯುಗದಲ್ಲಿ ಯುವ ಜನತೆ ವಾಟ್ಸಪ್ಗಳ ಮೂಲಕ ಸಂಘಟಿತರಾಗಿ ಸಂಕಷ್ಟದಲ್ಲಿರುವವರಿಗೆ ಸಹಾಯವನ್ನು ನೀಡುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಪ್ರೇರಣೆ ನರೇಂದ್ರ ಮೋದಿ ಪ್ರದಾನಿಯಾದ ಬಳಿಕ ಯುವಕರಲ್ಲಿ ಹೊಸ ಚೈತನ್ಯ ಮೂಡಿದ್ದರಿಂದ ಇಂತಹ ಕಾರ್ಯ ದೇಶದೆಲ್ಲೆಡೆ ನಡೆಯುತ್ತಿದ್ದು, ಯುವಜನತೆ ಒಗ್ಗಟ್ಟಾದರೆ ಸಮಾಜ ಸಂಘಟನೆ ಸಾಧ್ಯ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಣಾಜೆ ವಲಯ ಮೇಲ್ವಿಚಾರಕಿ ರೇಷ್ಮಾ ಬಂಗೇರ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದಕ್ಷ ಯುವ ಬಳಗ ತನ್ನ ದಕ್ಷತೆಯಿಂದ ದಶಮಾನೋತ್ಸವ ಕಾರ್ಯಕ್ರಮವನ್ನು ಆಚರಿಸಲು ಸಾಧ್ಯವಾಗಿದ್ದು, ಕಳೆದ 10 ವರ್ಷಗಳಿಂದ ಮಾತೆಯರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸುವ ಕಾರ್ಯವನ್ನು ನಿರಂತರವಾಗಿ ನಡೆಸುವ ಮೂಲಕ ಮಾತೃಶಕ್ತಿಗೆ ಗೌರವ ನೀಡುತ್ತಿರುವುದು ಶ್ಲಾಘನೀಯ ಎಂದರು. ಅಧ್ಯಕ್ಷತೆಯನ್ನು ಶ್ರೀ ಮೂಕಾಂಬಿಕಾ ಕನ್ಸ್ಟ್ರಕ್ಷನ್ ಮಂಗಳೂರು ಇದರ ಮಾಲಕ ಚಂದ್ರಹಾಸ ಪಂಡಿತ್ಹೌಸ್ ವಹಿಸಿದ್ದರು.
ಈ ಸಂದರ್ಭ ದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇಲ್ಲಿನ ಸಹ ಪ್ರಾಧ್ಯಾಪಕ ಡಾ| ನವೀನ್ ಎನ್. ಕೊಣಾಜೆ ಅವರಿಗೆ ಗ್ರಾಮ ಗೌರವ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರತ್ನಮ್ಮ ಗಟ್ಟಿ ಕೋಟಿಪದವು ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ದಕ್ಷ ಯುವ ಬಳಗದ ಸದಸ್ಯರ ಹೆತ್ತವರಿಗೆ ಮಾತೃವಂದನಾ ಕಾರ್ಯಕ್ರಮದ ಮೂಲಕ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತೃವಂದನಾ ಕಾರ್ಯಕ್ರಮಕ್ಕೆ ನಾಟ್ಯನಿಕೇತನ ಕೊಲ್ಯ ಇಲ್ಲಿನ ನೃತ್ಯಗುರು ವಿದುಷಿ ರಾಜಶ್ರೀ ಉಳ್ಳಾಲ್ ಚಾಲನೆ ನೀಡಿದರು. ತುಳುನಾಡು ಚಿಟ್ಸ್ಫಂಡ್ಸ್ ಪ್ರೈ. ಲಿ.ನ ನಿರ್ದೇಶಕ ಸಂದೇಶ್ ಶೆಟ್ಟಿ ಕೊಳ್ಕೆ, ಬಿಜೆಪಿಯ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ವಿಶ್ವಕರ್ಮ ಸಂಘ ಮುಡಿಪು ಇದರ ಅಧ್ಯಕ್ಷ ಯೋಗೀಶ್ ಆಚಾರ್ಯ ಮುಡಿಪು, ಶ್ರೀ ರಾಮ ಮಂದಿರದ ಮಾಜಿ ಅಧ್ಯಕ್ಷ ಸುಂದರ ಕೋಟ್ಯಾನ್, ಭುವನ್ ಕನ್ಸ್ಟ್ರಕ್ಷನ್ ಮಾಲಕ ಸುಂದರ ಗಟ್ಟಿ ಅಂಬಾವನ ತೊಕ್ಕೊಟ್ಟು, ಶ್ರೀ ರಾಮ ಮಂದಿರದ ಅಧ್ಯಕ್ಷ ವಿಶ್ವನಾಥ ಗಟ್ಟಿ ಕೋಟಿಪದವು, ದಕ್ಷ ಯುವ ಬಳಗದ ಗೌರವಾಧ್ಯಕ್ಷ ಜಗದೀಶ್ ಭಂಡಾರಿ, ಅಧ್ಯಕ್ಷ ದಿನೇಶ್ ಮಾಯಿಲೋಡಿ ಉಪಸ್ಥಿತರಿದ್ದರು.
ಗೌರವ ಸಲಹೆಗಾರ ನಾರಾಯಣ ಟೈಲರ್ ಬೀಜಗುರಿ ಸ್ವಾಗತಿಸಿದರು. ಕೋಶಾಧಿಕಾರಿ ಸುನಿಲ್ ಗಟ್ಟಿ ವರದಿ ವಾಚಿಸಿದರು. ಸದಸ್ಯರಾದ ಪುರುಷೋತ್ತಮ ಗಟ್ಟಿ ಸನ್ಮಾನ ಪತ್ರ ವಾಚಿಸಿದರು. ಕೃಷ್ಣಪ್ರಸಾದ್ ಪಜೀರು ವಂದಿಸಿದರು. ನವೀನ್ ಕೊಪ್ಪಳ ಕಾರ್ಯಕ್ರಮ ನಿರ್ವಹಿಸಿದರು.
* ವಜ್ರದೇಹಿ ಮಠದ ಮೂಲಕ 17 ಯುವಕರ ವಾಟ್ಸಪ್ ಗ್ರೂಪ್ ಅಮೃತ ಸಂಜೀವಿನಿಯ ಮೂಲಕ ಕಳೆದ ಮೂರುವರೆ ವರ್ಷದಲ್ಲಿ 42ಲಕ್ಷ ರೂ. ಸಮಾಜದ ಸಂಕಷ್ಟದಲ್ಲಿರುವವರಿಗೆ ನೀಡಲಾಗಿದೆ. 35 ಸಾವಿರದಿಂದ ಆರಂಭಗೊಂಡ ಈ ವಾಟ್ಸಪ್ ಸಂಘಟನೆ ಇಂದು ಬಲಿಷ್ಠವಾಗಿ ಬೆಳೆದು ನಿಂತಿದ್ದು, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಯುವ ಸಮುದಾಯ ಉತ್ತಮ ಕಾರ್ಯಗಳನ್ನು ನಡೆಸಬಹುದು ಎನ್ನುವುದು ಸಾಬೀತಾಗಿದೆ.
ಶ್ರೀ ರಾಜಶೇಖರಾನಂದ ಸ್ವಾಮೀಜಿ
ಗುರುಪುರ ವಜ್ರದೇಹಿ ಮಠ


