UN NETWORKS
ತಲಪಾಡಿ: ಶಾರ್ಟ್ ಸರ್ಕ್ಯುಟ್‍ನಿಂದಾಗಿ ಚಲಿಸುತ್ತಿದ್ದ ಗ್ಯಾಸ್ ತುಂಬಿದ ಬುಲೆಟ್ ಟ್ಯಾಂಕರಿನ ಚಾಲನಾ ಕ್ಯಾಬಿನ್‍ನಲ್ಲಿ ಬೆಂಕಿ ಹತ್ತಿಕೊಂಡಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದ ಘಟನೆ ರಾ.ಹೆ. 66ರ ತಲಪಾಡಿ ಸಮೀಪದ ಕೆ.ಸಿ. ರೋಡ್ ಜಂಕ್ಷನ್‍ನಲ್ಲಿ ಬುಧವಾರ ಸಂಜೆ ನಡೆದಿದೆ.
ಮಂಗಳೂರಿನಿಂದ ಕೇರಳದ ಕೊಯಮತ್ತೂರಿನ ಕಡೆಗೆ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್‍ನ ಮುಂಭಾಗದ ಕ್ಯಾಬಿನ್‍ನಲ್ಲಿ ಶಾರ್ಟ್ ಸರ್ಕ್ಯುಟ್‍ನಿಂದಾಗಿ ಬೆಂಕಿ ಹತ್ತಿಕೊಂಡಿದೆ. ರಸ್ತೆಯಲ್ಲಿ ಸಾಗುತ್ತಿದ್ದ ಇತರ ವಾಹನ ಸವಾರರು ಬೆಂಕಿಯನ್ನು ಕಂಡು ಬೊಬ್ಬೆ ಹೊಡೆದಿದ್ದಾರೆ. ತಕ್ಷಣ ಜಾಗೃತರಾದ ಟ್ಯಾಂಕರ್ ಚಾಲಕ ಕೃಷ್ಣಮೂರ್ತಿ ಅವರು ಚಾಲನೆಯಲ್ಲೇ ಬೆಂಕಿ ನಂದಿಸಿ ಟ್ಯಾಂಕರನ್ನು ಬದಿಗೆ ನಿಲ್ಲಿಸಿ ಕ್ಯಾಬಿನ್ ಒಳಗಿದ್ದ ಅಡುಗೆ ತಯಾರಿಯ ಗ್ಯಾಸ್ ಸಿಲಿಂಡರನ್ನು ಹೊರಗಡೆ ಎಸೆದು ಸಮಯ ಪ್ರಜ್ನೆ ಮೆರೆದಿದ್ದಾರೆ. ಸ್ಥಳೀಯರು ಬೆಂಕಿ ನಂದಿಸಲು ಚಾಲಕನಿಗೆ ಸಹಕರಿಸಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕದಳದವರು ಬಂದಿದ್ದು ಅದಾಗಲೆ ಬೆಂಕಿಯನ್ನು ನಂದಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾದ ಗ್ಯಾಸ್
ಟ್ಯಾಂಕರ್ ಕ್ಯಾಬಿನ್‍ನಲ್ಲಿ ತಾಂತ್ರಿಕ ಕಾರಣದಿಂದ ಬೆಂಕಿ ಹತ್ತಿದನ್ನು ಕಂಡ ಕೆಲವರು ವಿಷಯ ವಿಮರ್ಶಿಸದೆ ಸಾಮಾಜಿಕ ಜಾಲತಾಣಗಳಲ್ಲಿ ಟ್ಯಾಂಕರ್ ಫೋಟೊ ಹಾಕಿ ಕೆ.ಸಿ. ರೋಡ್‍ನಲ್ಲಿ ಅನಿಲ ಸೋರಿಕೆಯಾಗಿದೆ ಎಂದು ವದಂತಿ ಹಬ್ಬಿಸಿದ್ದು ಅದರಿಂದ ಭಯಭೀತಗೊಂಡು ತಲಪಾಡಿ ಕಡೆ ಸಾಗುವ ನಗರ ಸಾರಿಗೆ ಬಸ್ಸುಗಳು, ಅನೇಕ ವಾಹನಗಳು ಉಚ್ಚಿಲದಿಂದಲೇ ಮಂಗಳೂರಿಗೆ ಹಿಂದಿರುಗಿ ಹೋದ ಘಟನೆ ನಡೆದಿದೆ. ಉಳ್ಳಾಲ ಮತ್ತು ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಯಿತು.


