UN NETWORKS
ಉಳ್ಳಾಲ: ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಯನ್ನು ನಿಖರ ಹಾಗೂ ವೈಜ್ಞಾನಿಕವಾಗಿ ನೀಡಿದಾಗ ಮಾತ್ರ ಅದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಮದ್ದಿಗಿಂತ ವೈದ್ಯರ ಮಾತು ಮುಖ್ಯ. ಯುವಜನತೆ ವಿಶ್ವದಲ್ಲೇ ಶ್ರೇಷ್ಟವಾಗಿರುವ ಭಾರತೀಯ ಆಹಾರ ಮತ್ತು ವೈದ್ಯಪದ್ಧತಿಯನ್ನು ಅನುಸರಿಸುವ ಮುಖೇನ ಉತ್ತಮ ಸಮಾಜಕ್ಕಾಗಿ ಶ್ರಮಿಸಬೇಕಾಗಿದೆ ಎಂದು ಮಾಹೆ ವಿವಿಯ ವಿಶ್ರಾಂತ ಕುಲಪತಿ, ಪದ್ಮಭೂಷಣ ಪುರಸ್ಕೃತ ಡಾ.ಬಿ.ಎಂ.ಹೆಗ್ಡೆ ಹೇಳಿದರು.
ತಲಪಾಡಿ ದೇವಿನಗರದ ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಪುನರ್ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎಲ್ಲರನ್ನು ಪ್ರೀತಿಸುವುದು, ಯಾರನ್ನೂ ದ್ವೇಷಿಸದಿರುವುದು, ಹಿತ ಮಿತ ಆಹಾರ- ವಿಹಾರ, ಸತ್ಯ ಮತ್ತು ನೈತಿಕತೆ ಆಧರಿತ ಜೀವನಕ್ರಮವನ್ನು ಯುವಮನಸ್ಸುಗಳು ರೂಢಿಸಿಕೊಳ್ಳಬೇಕು. ಪ್ರೀತಿಯಿಂದ ಭಾರತೀಯ ಆಹಾರ ಪದ್ಧತಿಯನ್ನು ಅನುಸರಿಸಿ. ಹಾಟ್ ಡಾಗ್, ಫಿಝಾ ಸಂಸ್ಕೃತಿಗೆ ಮೊರೆ ಹೋಗಿ ಆರೋಗ್ಯ ಕೆಡಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಮಂಗಳೂರಿನ ಪರಿಸರ ಅತ್ಯುತ್ತಮ. ದೇಹದ ಮತ್ತು ವಾತಾವರಣದ ಕಲ್ಮಶಗಳು ಗಾಳಿ ಮೂಲಕ ಸಮುದ್ರ ಸೇರುತ್ತವೆ. ಆ ದಿಸೆಯಲ್ಲಿ ಕರಾವಳಿ ಪ್ರದೇಶವಾಗಿರುವ ಮಂಗಳೂರಿನ ವಾತಾವರಣ ಅತ್ಯುತ್ತಮ. ಯೋಗ ಎಂದರೆ ಮನುಷ್ಯನನ್ನು ಉತ್ತಮ ವ್ಯಕ್ತಿಯನ್ನಾಗಿ ಪರಿವರ್ತಿಸುವುದು. ಸಮಾಜದ ಎಲ್ಲರೂ ಯೋಗಿಗಳಾದಾಗ ಸಹಜವಾಗಿಯೇ ಸಮಾಜ ಒಳ್ಳೆಯದಾಗುತ್ತದೆ. ಇದು ಹಿಂದೂ ಸಂಸ್ಕøತಿ; ಭಾರತೀಯ ಸಂಸ್ಕೃತಿ ಎಂದು ಬಣ್ಣಿಸಿದರು.
ದೇಹದೊಳಗೇ ಒಬ್ಬ ವೈದ್ಯನಿದ್ದಾನೆ. ಅದು ಪ್ರತಿರೋಧ ಶಕ್ತಿ. ಉತ್ತಮ ವೈದ್ಯ ನೀಡುವ ಭರವಸೆಯೇ ರೋಗಿಗಳ ಆರೋಗ್ಯದ ಗುಟ್ಟು. ಇದು ನನ್ನ 50ವರ್ಷಗಳ ವೈದ್ಯವೃತ್ತಿಯ ಅನುಭವ. ರೋಗಿಗಳಲ್ಲಿ ಭೀತಿ ಹುಟ್ಟಿಸದೇ ಭರವಸೆ ತುಂಬುವುದೇ ಉತ್ತಮ ಚಿಕಿತ್ಸಾ ವಿಧಾನ. ಕಾಯಿಲೆ ಎದುರಿಸಲು ಮಾನಸಿಕ ದೃಢತೆ ಹಾಗೂ ಧೈರ್ಯವೇ ಮದ್ದು ಎಂದರು.ಒಳ್ಳೆಯ ವ್ಯಕ್ತಿತ್ವ ಇದ್ದರೆ ಆತನೇ ಉತ್ತಮ ವೈದ್ಯ. ಮನಸ್ಸಿನ ಪರಿಶುದ್ಧತೆಯೇ ಉತ್ತಮ ಆರೋಗ್ಯಕ್ಕೆ ಬುನಾದಿ. ಪ್ರೀತಿ ಒಳಗೆ ಬರಲಿ; ದ್ವೇಷ- ಕೋಪ ಮನಸ್ಸಿನಿಂದ ಹೊರಹೋಗಲಿ. ಈ ಸ್ಥಿತಪ್ರಜ್ಞತೆಯೇ ಆರೋಗ್ಯದ ಮೂಲ ಎಂದರು.
ತಲಪಾಡಿಯ ಸುಂದರ ಪ್ರಕೃತಿಯ ನಡುವೆಯೇ ಈ ವಿಶಿಷ್ಟ ಪಕೃತಿ ಚಿಕಿತ್ಸಾ ಕೇಂದ್ರವಿದೆ. ಇದು ನಗರದಲ್ಲಿ ಮಾಡಿದರೆ ಅಪ್ರಸ್ತುತ ಎನಿಸುತ್ತದೆ. ಪ್ರಕೃತಿ ಚಿಕಿತ್ಸೆಯಲ್ಲಿ ಉತ್ತಮ ಪರಿಸರವೇ ಮುಖ್ಯ. ಈ ವಿಶಿಷ್ಟ ಪ್ರಕೃತಿ ಚಿಕಿತ್ಸಾ ಕೇಂದ್ರ ಮಂಗಳೂರು ಹಾಗೂ ಸುತ್ತಮುತ್ತಲಿನ ಜನತೆಗೆ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸಲಿ ಎಂದು ಆಶಿಸಿದರು.ಅಧ್ಯಕ್ಷತೆ ವಹಿಸಿದ್ದ ತುಳುನಾಡು ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಮಾತನಾಡಿ, “ವಿದ್ಯಾರ್ಥಿಗಳು ಕೇವಲ ರ್ಯಾಂಕ್ ಪಡೆಯುವುದನ್ನು ಗುರಿ ಮಾಡಿಕೊಳ್ಳದೇ ಭಾರತೀಯತೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಮಹತ್ವದ್ದು” ಎಂದು ಅಭಿಪ್ರಾಯಪಟ್ಟರು.ಕ್ರಿಕೆಟ್ ಆಟಗಾರರು, ಸಿನಿಮಾ ನಟರನ್ನು ಮಾದರಿಯನ್ನಾಗಿ ಮಾಡಿಕೊಳ್ಳುವ ಬದಲು, ನಮ್ಮ ಸುತ್ತಮುತ್ತ ಇರುವ ಸಾಧಕರನ್ನು ರೋಲ್ಮಾಡೆಲ್ಗಳನ್ನಾಗಿ ಆಯ್ಕೆ ಮಾಡಿಕೊಳ್ಳಿ. ಆ ಮೂಲಕ ದ್ಯಾರ್ಥಿಗಳಿಗೆ ಸಮಾಜ, ರಾಷ್ಟ್ರ, ಧರ್ಮ, ಸಂಸ್ಕೃತಿ ಬಗ್ಗೆ ಕಳಕಳಿಯೂ ಅಗತ್ಯ ಎಂದರು.ಮುಂದಿನ ಶೈಕ್ಷಣಿಕ ವರ್ಷದಿಂದ ಆಯುರ್ವೇದ ಕಾಲೇಜು ಮತ್ತು ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ ಎಂದು ಘೋಷಿಸಿದ ಅವರು ಆಯುರ್ವೇದ ಆಸ್ಪತ್ರೆಯಲ್ಲಿ ಬಡವರಿಗೆ ಉಚಿತ ಚಿಕಿತ್ಸೆ, ಊಟೋಪಚಾರ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾರದಾ ಆಸ್ಪತ್ರೆಯ ಸೌಲಭ್ಯಗಳ ಕುರಿತಾದ ವಿವರಗುಳುಳ್ಳ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ಉದ್ಯಮಿ ಬಿ.ಆರ್. ಸೋಮಯಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತುಳುನಾಡು ಎಜ್ಯುಕೇಶನಲ್ ಟ್ರಸ್ಟ್ನ ಉಪಾಧ್ಯಕ್ಷ ಕೆ.ಎಸ್. ಕಲ್ಲೂರಾಯ, ಟ್ರಸ್ಟಿ ಸೀತಾರಾಮ, ಕಾರ್ಯದರ್ಶಿ ಎಂ.ಎಸ್. ಶಾಸ್ತ್ರಿ ಉಪಸ್ಥಿತರಿದ್ದರು.ಟ್ರಸ್ಟಿ ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿದರು. ಆಸ್ಪತ್ರೆಯ ಮುಖ್ಯ ವೈದ್ಯಾಕಾರಿ ಡಾ. ರಾಜೇಶ್ ಪಾದೇಕಲ್ ಪ್ರಾಸ್ತಾವಿಕ ಮಾತುಗಳನ್ನಾಡಿ ಆಸ್ಪತ್ರೆಯ ವಿನೂತನ ಸೌಲಭ್ಯಗಳ ಬಗ್ಗೆ ವಿವರಿಸಿದರು. ಡಾ. ಸುಶ್ಮಿತಾ ವಂದಿಸಿದರು. ಡಾ. ವಿದ್ಯಾಶೆಟ್ಟಿ ಹಾಗೂ ಶಾರದಾ ಪದವಿಪೂರ್ವ ಕಾಲೇಜಿನ ಆಡಳಿತಾಕಾರಿ ವಿವೇಕ್ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.



