UN NETWORKS
ಕೊಣಾಜೆ: ಕೊಣಾಜೆ ಬೊಲ್ಮದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜ. 16ರಿಂದ ಜ. 18ರ ತನಕ ಜರುಗಲಿದೆ ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರು ಹೊಸಮನೆ ಹೇಳಿದರು.
ಶ್ರೀ ಕ್ಷೇತ್ರದಲ್ಲಿ ಭಾನುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮಗಳ ವಿವರ ನೀಡಿದ ಅವರು ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ, ಬ್ರಹ್ಮಶ್ರೀ ಎಡಪದವು ವೇದಮೂರ್ತಿ ವೆಂಕಟೇಶ್ ತಂತ್ರಿಗಳ ಪೌರೋಹಿತ್ಯ ಹಾಗೂ ಕೊಣಾಜೆ ಶ್ಯಾನುಬೋಗರ ಮನೆಯ ಸುದರ್ಶನ ಭಟ್ ಅವರ ಮಾರ್ಗದರ್ಶನದಲ್ಲಿ ಉಳ್ಳಾಲ್ತಿ ಅಮ್ಮನವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ ಎಂದರು.ಬೊಲ್ಮ ಮುಲಾರದ ಜನ ಕೃಷಿ ಸಂಸ್ಕೃತಿಯಲ್ಲಿ ಹುಟ್ಟಿ ಬೆಳದವರು. ಗ್ರಾಮ ದೇವರಾಗಿ, ಸುಖ ಸಂಪತ್ತನ್ನು ನೀಡುವ ತಾಯಿಯಾಗಿ ಉಳ್ಳಾಲ್ತಿ ದಿವ್ಯಶಕ್ತಿಯಾಗಿ ಉದ್ದೀಪನಗೊಂಡಿರುವ ಐತಿಹ್ಯವಿದೆ. ದೈವಜ್ಞರ ಚಿಂತನೆಯಂತೆ ಅನಾದಿ ಕಾಲದಿಂದ ಜೈನ ಮನೆತನದವರು ಆರಾಧಿಸಿಕೊಂಡು ಬರುತ್ತಿದ್ದ ಸಾನಿಧ್ಯವೆಂದು ತಿಳಿದುಬಂದಿದೆ. ಈ ಭಾಗದ ಜನರ ತೊಂದರೆಗಳಿಗೆ ನೆಲೆ ಇಲ್ಲದ ದೇವಿಯ ಶಕ್ತಿಯೇ ಕಾರಣವೆಂದು ತಿಳಿದುಬಂದಿತ್ತು. ಇದನ್ನು ಮನಗಂಡು ಊರಿನ ಜನ ಸೇರಿಕೊಂಡು ಜೀರ್ಣೋದ್ಧಾರ ಸಮಿತಿ ರಚಿಸಿ ಶ್ರೀ ಕ್ಷೇತ್ರ ನಿರ್ಮಾಣದಲ್ಲಿ ತೊಡಗಿಕೊಂಡರು. ಉಳ್ಳಾಲ್ತಿ ಅಮ್ಮನವರ ಬೀಡುಮನೆ, ಧರ್ಮಚಾವಡಿ, ಗೋಪುರ, ತೀರ್ಥಬಾವಿ, ಪಾಕಶಾಲೆ, ಆವರಣಗೋಡೆ, ಪರಿವಾರ ದೈವಗಳ ಸಾನಿಧ್ಯ ಹಾಗೂ ಇತರ ಪರಿಕರಗಳಿಗಾಗಿ ಸುಮಾರು ಒಂದು ಕೋಟಿ ರೂ. ಯೋಜನೆ ರೂಪಿಸಿ ನಿರ್ಮಿಸಲಾಗಿದೆ ಎಂದು ನುಡಿದರು.
ಜ. 16ರಂದು ಸಂಜೆ 4.00ಕ್ಕೆ ಕೊಣಾಜೆ ಶಾರದಾನಗರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ವಿವಿಧ ಸಾಂಸ್ಕೃತಿಕ ಕಲಾ ಪ್ರದರ್ಶನಗಳ ಮೂಲಕ ನಡೆಯಲಿದೆ. ಉಗ್ರಾಣ ಮುಹೂರ್ತ, ಶ್ರೀ ವೈದ್ಯನಾಥ ಕಲಾವೇದಿಕೆಯಲ್ಲಿ ಶ್ರೀ ಷಣ್ಮುಖ ಬಾಲ ಕಲಾವಿದರು ಸಜಿಪ ತಂಡದಿಂದ “ಪೂ ಪಿಂಗಾರ’, ಜ. 17ರಂದು ಧಾರ್ಮಿಕ ವಿಧಿವಿಧಾನಗಳು, ಧಾರ್ಮಿಕ ಸಭೆ ಬಳಿಕ ಕಳವಾರು ಶ್ರೀ ಬೆಂಕಿನಾಥೇಶ್ವರ ಯಕ್ಷಗಾನ ಮಂಡಳಿಯವರಿಂದ “ಶ್ರೀ ದೇವಿ ಲೀಲಾಮೃತ’ ಯಕ್ಷಗಾನ ಬಯಲಾಟ ಪ್ರದರ್ಶನ, ಜ. 18 ರಂದು ಶ್ರೀ ಉಳ್ಳಾಲ್ತಿ ಅಮ್ಮನವರ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ, ಭಜನಾ ಸಂಕೀರ್ತನೆ, ಸಾಮೂಹಿಕ ದುರ್ಗಾಪೂಜೆ, ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮಿಯವರ ಆಶೀರ್ವಚನ, ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಅನುವಂಶೀಯ ಅರ್ಚಕ ಅನಂತ ಆಸ್ರಣ್ಣ, ಶ್ರೀದೇವಿ ಎಜ್ಯುಕೇಷನ್ ಟ್ರಸ್ಟಿನ ಅಧ್ಯಕ್ಷ ಸದಾನಂದ ಶೆಟ್ಟಿ, ಸಚಿವ ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು, ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರ ದೇವದಾಸ್ ಶೆಟ್ಟಿ ಕಲ್ಲಿಮಾರು ಗುತ್ತು, ಸುದರ್ಶನ್ ಭಟ್ ಶ್ಯಾನುಭೋಗರ ಮನೆ, ಗೌರವ ಸಲಹೆಗಾರರಾದ ದೇವಣ್ಣ ಶೆಟ್ಟಿ, ಆರ್ಥಿಕ ಸಮಿತಿ ಸಂಚಾಲಕ ರಾಜಾರಾಮ ರೈ ಕಲ್ಲಿಮಾರು ಹೊಸಮನೆ, ಗಟ್ಟಿ ಸಮಾಜದ ನಾಯ್ಗರ ಪ್ರತಿನಿಧಿ ಪದ್ಮನಾಭ ಗಟ್ಟಿ ಕಟ್ಟಪುಣಿ, ಕಾರ್ಯದರ್ಶಿ ಸುಂದರ್ ಶೆಟ್ಟಿಗಾರ್, ಪ್ರಚಾರ ಸಮಿತಿ ಸಂಚಾಲಕ ಹರೀಶ್ ಎ. ಪೂಜಾರಿ ಕೊಣಾಜೆ ಹಾಗೂ ಕೋಶಾಧಿಕಾರಿ ರವೀಂದ್ರ ಬಂಗೇರ ಉಪಸ್ಥಿತರಿದ್ದರು.


