UN NETWORKS
ಉಳ್ಳಾಲ: ಅಯ್ಯಪ್ಪ ವೃತಧಾರಿಗಳು ಶಬರಿಮಲೆ ದೇವಸ್ಥಾನದ ಹುಂಡಿಗೆ ಕಾಣಿಕೆ ಹಾಕದೆ ಕೇರಳ ಸರಕಾರಕ್ಕೆ ಹೋಗುವ ಆದಾಯವನ್ನು ನಿಲ್ಲಿಸುವ ಮೂಲಕ ಸರಕಾರವನ್ನು ಬಗ್ಗಿಸುವ ಕೆಲಸ ಮಾಡಬೇಕಿದೆ ಎಂದು ಕಪಿಲಾಶ್ರಮ ಉತ್ತರಕಾಶಿಯ ಶ್ರೀರಾಮಚಂದ್ರ ಸ್ವಾಮಿ ಹೇಳಿದರು.
ಅವರು ಶ್ರೀ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ಮಂಗಳೂರು ಗ್ರಾಮಾಂತರ ಉಳ್ಳಾಲ ವತಿಯಿಂದ ಕೊಲ್ಯ ಸೌಭಾಗ್ಯ ಸದನದಲ್ಲಿ ಜರಗಿದ ಅಯ್ಯಪ್ಪ ಭಕ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಶಬರಿಮಲೆಗೆ ಹೋಗುವ ಅಯ್ಯಪ್ಪ ವೃತಧಾರಿಗಳು ಜಾಸ್ತಿಯಾಗಬೇಕಿದೆ. ಮಲೆ ಹತ್ತಿ ಶಬರಿಮಲೆಯನ್ನು ಸಂದರ್ಶಿಸಿದರೂ ಕಾಣಿಕೆ ಹುಂಡಿಗೆ ನಯಾಪೈಸೆಯನ್ನು ಹಾಕದಿರಿ. ದಾರಿಯುದ್ದಕ್ಕೂ ಕ್ರೈಸ್ತ ಮಿಷನರಿಗಳು ನಡೆಸುವ ಹೊಟೇಲುಗಳು ವೃತಧಾರಿಗಳು ತೆರಳುವ ಸಂದರ್ಭ ಸಸ್ಯಹಾರಿ ಹೊಟೇಲುಗಳಾದಲ್ಲಿ, ದೇವಸ್ಥಾನದ ಬಾಗಿಲು ಮುಚ್ಚಿದ ನಂತರ ಅದೇ ಹೊಟೇಲುಗಳು ಮಾಂಸಹಾರಿ ಹೊಟೇಲುಗಳಾಗಿ ಕಾರ್ಯಾಚರಿಸುತ್ತಿದೆ. ಇಂತಹ ಹೊಟೇಲುಗಳಲ್ಲಿ ಆಹಾರ ಸೇವಿಸುವುದನ್ನು ನಿಲ್ಲಿಸಿ. ಸರಕಾರಕ್ಕೆ ಆರ್ಥಿಕ ಸಂಕಷ್ಟ ಆದಲ್ಲಿ ಮಾತ್ರ ಹಿಂದೂಗಳಿಗೆ , ಶಬರಿಮಲೆ ಕ್ಷೇತ್ರಕ್ಕೆ ಸಲ್ಲುವ ಜಯವಾಗಿರುತ್ತದೆ. ಅಯ್ಯಪ್ಪ ಮಾಲಾಧಾರಿಗಳ ಮೇಲೆ ವಿದ್ಯುತ್ ಕಟ್ ನಡೆಸಿ ಹಲ್ಲೆ ನಡೆಸುವ ಕೆಲಸವಾಗುತ್ತಿದೆ. ಹಿಂದುತ್ವದ ಅತಿಕ್ರಮಣ ಮಾಡುವವರ ಮೇಲೆ ಆಕ್ರಮಣಗಳು ಆಗಲೇಬೇಕಿದೆ. ಮಹಿಳೆಯರ ತಾರತಮ್ಯದ ಹೆಸರಿನಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ. ವಾಸ್ತವದಲ್ಲಿ ಶಬರಿಮಲೆಯಂತೆಯೇ ಲಾಹ ಪೆರುನ್ನಾಡ ಧರ್ಮಕ್ಷೇತ್ರದಲ್ಲಿ ಶಬರಿಮಲೆಯ ಅಯ್ಯಪ್ಪನ ವಿಗ್ರಹದಷ್ಟೇ ವಿಸ್ತಾರವಾದ ವಿಗ್ರಹಕ್ಕೆ ಮೇಲೆ ತೊಡಿಸುವ ಆಭರಣಗಳನ್ನೇ ತೊಡಿಸಿ ಪೂಜೆ ನೆರವೇರಿಸಲಾಗುತ್ತದೆ. ಅದರ ಆರಾಧನೆಯನ್ನು ಮಹಿಳೆಯರೇ ನಡೆಸಿಕೊಂಡು ಬರುತ್ತಿದ್ದಾರೆ. ಶೇ.85 ರಷ್ಟು ಮಂದಿ ಪೊಲೀಸರ ಹೃದಯದಲ್ಲಿಯೂ ಭಕ್ತಿಯ ಭಾವನೆಗಳಿವೆ. ಆದರೆ ಕರ್ತವ್ಯದ ಹೆಸರಿನಲ್ಲಿ ಸರಕಾರ ಅವರ ಮೇಲೆ ಹೊರೆ ಹಾಕಿ ಭಕ್ತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಶಬರಿಮಲೆ ತೆರಳುವ ಸಂದರ್ಭ ಖುದ್ದು ಕಮೀಷನರ್ ಅವರೇ ಈಮೇಲ್ ಮೂಲಕ ಶಬರಿಮಲೆಗೆ ತೆರಳದಂತೆ ಆದೇಶಿಸಿದರೂ, ಬಳಿಕ ದೆಹಲಿಯಿಂದ ಫೋನಾಯಿಸಿ ಎಂದು ತಾವೇ ಸಲಹೆ ನೀಡಿದಂತೆ ಖದ್ದು ಶಬರಿಮಲೆಯನ್ನು ಪೊಲೀಸರ ಬೆಂಗಾವಲಿನಲ್ಲಿ ಸಂದರ್ಶಿಸಿದ್ದೇನೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪ್ರಕಾಶ್ ಪಿ.ಯಸ್ ಮಾತನಾಡಿ ದೇಶದ 5 ಕೋಟಿ ಜನ ಒಂದೇ ಕಡೆಯಲ್ಲಿ ಸೇರಿದರೂ ಗಲಾಟೆಯಾಗದೆ ಕ್ಷೇತ್ರವೆಂದರೆ ಶಬರಿಮಲೆ ಕ್ಷೇತ್ರ. ಮೇರುನಟ ರಜನಿಕಾಂತ್ ಆಗಲಿ ಕೂಲಿ ಕಾರ್ಮಿಕ ಭೇಟಿ ನೀಡಿದರೂ ಎಲ್ಲರಿಗೂ ಸಮಾನ ಮರ್ಯಾದೆ ಕೊಡುವಂತಹ ಕ್ಷೇತ್ರ. ಇಡೀ ದೇಶವನ್ನು ಒಂದು ಮಾಡಿದ ಕ್ಷೇತ್ರವಾಗಿದೆ. ನಂಬಿಕೆಗಳಿಂದ ಹಿಂದೂ ಸಮಾಜ ದೃಢವಾಗಿದೆ. ಆದರೆ ಅದೇ ನಂಬಿಕೆಗಳನ್ನು ಒಡೆಯುವ ಷಡ್ಯಂತ್ರ ನಡೆಯುತ್ತಿದೆ. ಇದೀಗ ಪಿಣರಾಯಿ ವಿಜಯನ್ ಮಾಡುವಂತಹ ಕಾರ್ಯ ಹಿಂದೆ ಮಹಿಷಿ ಮಾಡಿದ್ದ. 20 ವರ್ಷಗಳ ಹಿಂದೆಯೂ ವಿದ್ಯುತ್ ಬಿಲ್ ಪಾವತಿಯನ್ನು ಅಧಿಕವಾಗಿ ಮಾಡಿ ಕ್ಷೇತ್ರದ ಭಕ್ತರ ಮೇಲೆ ಹೊರೆಹಾಕಿರುವ ಕೆಲಸವೂ ನಡೆದಿತ್ತು. ಎಲ್ಲರೂ ಒಗ್ಗಟ್ಟಾಗಿ ನಡೆಸಿದ ಹೋರಾಟದಿಂದ ಅದನ್ನು ನಿಲ್ಲಿಸಲು ಸಾಧ್ಯವಾಗಿತ್ತು. ಯುವ ವಕೀಲರ ಅಸೋಸಿಯೇಷನ್ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲು ಹತ್ತಿತ್ತು. ಆದರೆ ತಂಡದಲ್ಲಿ ಮುಸ್ಲಿಂ ವಕೀಲನೂ ಭಾಗಿಯಾಗಿದ್ದಾನೆ. ಹಿಂದೂಗಳ ಧಾರ್ಮಿಕ ಭಾವನೆ ಘಾಸಿಗೊಳಿಸಲು ಇತರೆ ಧರ್ಮೀಯರಿಗೆ ಇರುವ ಅರ್ಹತೆಯಾದರೂ ಏನು?. ಸಂವಿಧಾನದಲ್ಲೂ ಧಾರ್ಮಿಕ ಮುಖಂಡರ ಅಭಿಪ್ರಾಯ ಪಡೆಯುವಂತಹ ಕಾನೂನಿದೆ. ಇತ್ತೀಚೆಗೆ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾನ ಐದು ರಾಜ್ಯದ ಪ್ರಮುಖರು ಸೇರಿ ಬೈಠಕ್ ನಡೆಸಲಾಗಿತ್ತು. ಸಭೆಯಲ್ಲಿ ನಿವೃತ್ತ ನ್ಯಾಯಾಧೀಶರು ಸೇರಿದಂತೆ ನಿವೃತ್ತ ಪೊಲೀಸ್ ಅಧಿಕಾರಿಗಳು ಸೇರಿದ್ದರು. ಎಲ್ಲರ ಅಭಿಪ್ರಾಯವೂ ಸಂಪ್ರದಾಯವನ್ನು ಉಳಿಸುವುದು ಆಗಿತ್ತು. ಅದಕ್ಕಾಗಿ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಅನ್ನುವ ಅಭಿಪ್ರಾಯವೂ ದೊರೆತಿತ್ತು. ಕೇರಳ ಸರಕಾರ ಪ್ರಾಯೋಜಿತ ಮಹಿಳಾ ಗೋಡೆಯಲ್ಲಿ ಸರಕಾರಿ ಉದ್ಯೋಗಿಗಳು, ಇತರೆ ಧರ್ಮೀಯರು ಸೇರಿ ಶಬರಿಮಲೆ ಸಂಪ್ರದಾಯ ಮುರಿಯಲು ಹೋರಾಟ ನಡೆಸಿದರು. 35, 000 ಪ್ರಕರಣಗಳು ಹಿಂದೂಗಳ ಮೇಲೆ ದಾಖಲಾಗಿವೆ. ಅದರಲ್ಲಿ 3400 ಮಂದಿಯನ್ನು ಬಂಧಿಸಲಾಗಿದೆ. ಬಿಜೆಪಿ ಮುಖಂಡ ಸುರೇಂದ್ರನ್ ಒಬ್ಬರ ಮೇಲೆ 17 ಪ್ರಕರಣಗಳನ್ನು ದಾಖಲಿಸಲಾಗಿದೆ. ಹಿಂದೂಗಳ ಭಾವನೆ, ಆಚರಣೆಯನ್ನು ಒಡೆಯುವ ಕೆಲಸ ದೇಶಾದ್ಯಂತ ಆಗುತ್ತಿದೆ. ಹೊಸ ವರ್ಷಕ್ಕೆ ಎಷ್ಟೇ ಪಟಾಕಿ ಸಿಡಿಸಿ , ಕುಡಿದು ತೂರಾಡಿದರೂ ಪ್ರಶ್ನಿಸುವವರಿಲ್ಲ. ಆದರೆ ಅದೇ ಹಿಂದೂಗಳ ದೀಪಾವಳಿ ಹಬ್ಬಕ್ಕೆ ಪಟಾಕಿ ಹೊಡೆಯಬಾರದು ಅನ್ನುತ್ತಾ ಪತ್ರಿಕಾ ಪ್ರಕಟಣೆಯನ್ನೇ ನೀಡಲಾಗುತ್ತಿರುವುದು ದುರಾದೃಷ್ಟಕರ. ಜಿಲ್ಲೆಯಿಂದ 1 ಲಕ್ಷ ಜನ ಒಗ್ಗಟ್ಟಾಗಿ ಹೋರಾಟಕ್ಕೆ ಮುನ್ನುಗ್ಗಬೇಕಿದೆ. ಕೇರಳದಿಂದ ಎಂತಹ ಸಮಯಕ್ಕೂ ಬರುವ ಕರೆಗೆ ತಕ್ಷಣ ಸ್ಪಂಧಿಸಬೇಕಿದೆ ಎಂದರು.
ಇದೇ ಸಂದರ್ಭ ಶ್ರೀ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ಮಂಗಳೂರು ಗ್ರಾಮಾಂತರ ಉಳ್ಳಾಲ ಇದರ ಅಧ್ಯಕ್ಷರಾಗಿ ಚಂದ್ರಹಾಸ್ ಪಂಡಿತ್ ಹೌಸ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೆ.ಟಿ.ಸುವರ್ಣ, ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಗುರುಸ್ವಾಮಿ ವಿಶ್ವನಾಥ ಕಾಯರ್‍ಪಳಿಕೆ, ಶಬರಿಮಲೆ ಸಂರಕ್ಷಣಾ ಸಮಿತಿ ಜಿಲ್ಲಾ ಪ್ರಮುಖರಾದ ಗಣೇಶ್ ಪೊದುವಾಳ್, ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್,ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಶೇಖರ್ ಉಚ್ಚಿಲ್, ಸೀತರಾಮ ಬಂಗೇರ, ಚಂದ್ರಹಾಸ್ ಅಡ್ಯಂತಾಯ, ಭಾರತಿ ರಾಘವ ಗಟ್ಟಿ, ಲಲಿತಾ ಸುಂದರ್, ಧನಲಕ್ಷ್ಮಿ ಗಟ್ಟಿ, ರಾಜೇಶ್.ಯು.ಬಿ, ಪುರುಷೋತ್ತಮ ಕಲ್ಲಾಪು, ದಯಾನಂದ ತೊಕ್ಕೋಟ್ಟು, ಪ್ರಶಾಂತ್ ಕಾಪಿಕಾಡ್ ಹಾಗೆಯೇ ವಿವಿಧ ಬಿರಿಗಳ ಗುರುಸ್ವಾಮಿಗಳು ಉಪಸ್ಥಿತರಿದ್ದರು.ಪ್ರವೀಣ್.ಯಸ್.ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಆದರ್ಶ್ ಬಿ.ಎಂ ಪ್ರಾಸ್ತಾವಿಕ ಮಾತನಾಡಿದರು. ಆನಂದ ಶೆಟ್ಟಿ ವಂದಿಸಿದರು.


