UN NETWORKS
ಪಾವೂರು: ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಒಂದು ವಾರಗಳ ಕಾಲ ದೂರವಾಗಿ ಮನೆ ಬಿಟ್ಟು ಯಾವುದೋ ಊರಿನಲ್ಲಿ ಜೀವನ ಸಾಗಿಸುವುದು ಕಷವಾದರೂ ಒಂದು ಶಾಲೆಯನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಸ್ವಲ್ಪ ಸೇವೆ ಮಾಡಿದ ತೃಪ್ತಿಯ ಜೊತೆಗೆ ಈ ಅವಧಿಯಲ್ಲಿ ಸಿಗುವ ಅನುಭವ ಮುಂದಿನ ಜೀವನಕ್ಕೆ ಸಿಗುವ ಪಾಠವಾಗಿರುತ್ತದೆ ಎಂದು ಪಾವೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಉಷಾ ಅಭಿಪ್ರಾಯಪಟ್ಟರು.
ಪಾವೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳೂರಿನ ಶ್ರೀ ಗೋಕಣಾರ್ಥೇಶ್ವರ ಕಾಲೇಜಿನ ಎನ್‍ಎಸ್‍ಎಸ್ ವಾರ್ಷಿಕ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಮಾಜಿ ಕೋಶಾಧಿಕಾರಿ ನಾರಾಯಣ ಪೂಜಾರಿ ಮಾತನಾಡಿ, ಎನ್‍ಎಸ್‍ಎಸ್ ಶಿಬಿರದಲ್ಲಿ ಭಾಗಿಯಾಗುವುದು ಎಂದರೆ ಜೀವನದ ಮುಂದಿನ ಮೆಟ್ಟಿಲು ಏರಿದಂತಾಗುತ್ತದೆ. ನಮ್ಮ ಮುಂದೆ ನಿರ್ದಿಷ್ಟ ಗುರಿ ಇರಬೇಕು. ಅದಕ್ಕೆ ತಕ್ಕಂತೆ ಮಾರ್ಗದರ್ಶನ ನೀಡುವ ಗುರು ಇದ್ದರೆ ಸಾಧನೆ ಸುಲಭ ಸಾಧ್ಯ ಎಂದು ನುಡಿದರು.
ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಚಿತ್ರಾವತಿ ಮಾತನಾಡಿ, ಸ್ವಯಂಸೇವೆ ಇನ್ನೊಬ್ಬರಿಗೆ ಉಪಯೋಗ ಆಗಬೇಕು ಎನ್ನುವುದು ಎನ್‍ಎಸ್‍ಎಸ್ ಧ್ಯೇಯ. ಇಲ್ಲಿ ಮಾಡುವ ಕೆಲಸದಿಂದ ಮುಂದಕ್ಕೆ ಸುಖ ಎನ್ನುವುದು ತಪ್ಪು ಕಲ್ಪನೆ. ಶೈಕ್ಷಣಿಕ ಜೀವನ ಅವಧಿಯಲ್ಲೇ ಸುಖ ಪಡಬೇಕು, ಶಿಕ್ಷಣ ಜೀವನದ ತಯಾರಿ ಅಲ್ಲ, ಶಿಕ್ಷಣವೇ ಜೀವನ ಎಂದು ತಿಳಿಸಿದರು.ಸುವರ್ಣ ಸಂಭ್ರಮದ ಕೊಡುಗೆಯಾಗಿ ಪಾವೂರು ಸರ್ಕಾರಿ ಪ್ರೌಢಶಾಲಾ ಆವರಣ ಗೋಡೆಗೆ ನಿರ್ಮಿಸಲಾದ ಗ್ರಿಲ್ಸ್ ವ್ಯವಸ್ಥೆ ಉದ್ಘಾಟಿಸಲಾಯಿತು.
ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಫಿರೋಜ್ ಮಲಾರ್ ಅಧ್ಯಕ್ಷತೆ ವಹಿಸಿದ್ದರು. ನಾಟಿವೈದ್ಯ ಶಂಕರಾನಂದ ಎನ್. ಇನವಳ್ಳಿ, ಶ್ರೀ ಗೋಕಣಾರ್ಥೇಶ್ವರ ಶಿಕ್ಷಣ ಸಂಸ್ಥೆಗಳ ಸಂಚಾಲಕ ಎಸ್. ಜಯವಿಕ್ರಂ, ಪ್ರಾಂಶುಪಾಲೆ ಡಾ. ರೇಣುಕಾ ಕೆ., ಇನೋಳಿ ಶ್ರೀ ಸೋಮೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ, ಪತ್ರಕರ್ತ ವಿದ್ಯಾಧರ್ ಶೆಟ್ಟಿ, ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಚಿತ್ರಾವತಿ ಹಾಗೂ ಶ್ರೀ ಗೋಕರ್ಣಾಥೇಶ್ವರ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಜಯಶ್ರೀ ಉಪಸ್ಥಿತರಿದ್ದರು.
ಎನ್‍ಎಸ್‍ಎಸ್ ಶಿಬಿರಾಧಿಕಾರಿ ಡಾ. ದಿನಕರ್ ಎಸ್. ಪಚ್ಚನಾಡಿ ಹಾಗೂ ಪಾವೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಉಷಾ ಉಪಸ್ಥಿತರಿದ್ದರು.
ಶಿಬಿರಾರ್ಥಿ ನಿಖಿತಾ ಮತ್ತು ಸೂರಜ್ ಅನಿಸಿಕೆ ವ್ಯಕ್ತಪಡಿಸಿದರು. ಪ್ರಾಧ್ಯಾಪಕಿ ವೀಣಾ ಸ್ವಾಗತಿಸಿದರು. ಅಖಿಲ ವರದಿ ವಾಚಿಸಿದರು. ರಕ್ಷಿತ್ ಬಹುಮಾನಿತರ ಹೆಸರು ವಾಚಿಸಿದರು. ಶಿಬಿರಾರ್ಥಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.


