UN NETWORKS
ಕೊಣಾಜೆ: ಮೂವತ್ತು ವರ್ಷಗಳ ಕಾಲ ನಿರಂತರವಾಗಿ ತುಳು ಭಾಷೆ ಸಂಸ್ಕೃತಿಯ ಕುರಿತು ಅಧ್ಯಯನ ಮಾಡಿ ತುಳುವಿಗೆ ಅಂತರಾಷ್ಟ್ರೀಯ ಮನ್ನಣೆ ತಂದಿತ್ತ ಕ್ಯಾಲಿಫೋರ್ನಿಯ ವಿವಿಯ ಮಾನವಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಪೀಟರ್ ಜೆ. ಕ್ಲಾಸ್ ಅವರು, ಮಂಗಳೂರು ವಿಶ್ವವಿದ್ಯಾನಿಲಯದ ಎಸ್ವಿಪಿ ಕನ್ನಡ ಅಧ್ಯನ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಆರ್ ಆರ್ಸಿ ಸಂಶೋಧನಾ ಕೇಂದ್ರದಲ್ಲಿ ಅಧ್ಯಯನ ಮಾಡಿ ಇಡೀ ತುಳುನಾಡಿನ ಜಾನಪದಕ್ಕೆ ಮಹತ್ತರವಾದ ಕಾಣಿಕೆಯನ್ನು ನೀಡಿದ್ದರು. ಪ್ರೊ. ಪೀಟರ್ ಜೆ ಕ್ಲಾಸ್ ಅವರು ನಿಧನರಾದ ಹಿನ್ನಲೆಯಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂತಾಪ ಸಭೆ ನಡೆಯಿತು.
ಬಿ.ಎ. ವಿವೇಕ ರೈ, ಕುಶಿ ಹರಿದಾಸ ಭಟ್ಟ ಮತ್ತು ಪೀಟರ್ ಜೆ. ಕ್ಲಾಸ್ ಅವರು ಸೇರಿ ತುಳು ಜಾನಪದ ಮೀಮಾಂಸೆಯನ್ನು ಕಟ್ಟುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಆ ಮೂಲಕ ತುಳು ಭಾಷೆಗೆ ಸಾಂಸ್ಥಿಕ, ಚಾರಿತ್ರಿಕ ಹಾಗೂ ಪ್ರಾದೇಶಿಕ ಅಸ್ಮಿತೆಯೊಂದನ್ನು ರೂಪಿಸುವಲ್ಲಿಯೂ, ಅಂತರಾಷ್ಟ್ರೀಯ ಮನ್ನಣೆಯನ್ನು ಒದಗಿಸುವಲ್ಲಿಯೂ ಈ ಮೂವರ ಪಾತ್ರ ಮಹತ್ವದ್ದು. ಪೀಟರ್ ಜೆ. ಕ್ಲಾಸ್ ಅವರು ನಮ್ಮ ತಲೆಮಾರಿನ ಹಲವು ಮಹತ್ವದ ವಿದ್ವಾಂಸರನ್ನು ಸಂಶೋಧಕರನ್ನು ತಯಾರು ಮಾಡುವ ಮೂಲಕ ವಿಶ್ವ ಜಾನಪದ ಕ್ಷೇತ್ರಕ್ಕೆ ಬಹುದೊಡ್ಡ ಕೈಂಕರ್ಯ ನಿರ್ವಹಿಸಿದ್ದಾರೆ.
ಸಂತನಂತೆ ಸಾಮಾನ್ಯರಲ್ಲಿ ಬೆರೆತು ಜಾನಪದ ಕ್ಷೇತ್ರವನ್ನು ಕಟ್ಟಿಬೆಳೆಸಿದ ಪೀಟರ್ ಜೆ. ಕ್ಲಾಸ್ ಅವರ ಅಗಲಿಕೆ ಜಾನಪದ ಲೋಕಕ್ಕೆ ತುಂಬಲಾರದ ನಷ್ಟ ಎಂದು ಪ್ರಾಧ್ಯಾಪಕ ಪ್ರೊ. ಅಭಯ ಕುಮಾರ್ ಕೆ ಅವರು ಅಭಿಪ್ರಾಯ ಪಟ್ಟರು.ಸಂತಾಪ ಸಭೆಯಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ. ಸೋಮಣ್ಣ ಹೊಂಗಳ್ಳಿ, ಪ್ರೊ. ಶಿವರಾಮ ಶೆಟ್ಟಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಒಂದು ನಿಮಿಷಗಳ ಕಾಲ ಪೀಟರ್ ಜೆ. ಕ್ಲಾಸ್ ಅವರ ಆತ್ಮಕ್ಕೆ ಶಾಂತಿಕೋರಿ ಮೌನಾಚರಿಸಲಾಯಿತು.


